ಕಾವೇರಿ ದಂಡೆಯ ನಿವಾಸಿಗಳ ದುಗುಡ
ಮೈಸೂರು

ಕಾವೇರಿ ದಂಡೆಯ ನಿವಾಸಿಗಳ ದುಗುಡ

August 22, 2018

ಸಿದ್ದಾಪುರ: ಸಿದ್ದಾಪುರ ಭಾಗದಲ್ಲಿ ಭೂ ಕುಸಿತ ಹೆಚ್ಚಾಗಿ ಸಂಭವಿಸಿಲ್ಲವಾದರೂ ಕಾವೇರಿ ನೀರಿನ ಪ್ರವಾಹಕ್ಕೆ ಜಲಾವೃತ ಗೊಂಡು ಹಲವಾರು ಮನೆಗಳು ಹಾನಿಗೊಳಗಾಗಿವೆ. ಇದೀಗ ನೀರಿನ ಮಟ್ಟ ಇಳಿಕೆಯಾಗಿದ್ದರೂ ತಾವು ಕಾವೇರಿ ನದಿ ದಡದಲ್ಲಿ ವಾಸಿಸಲು ನಿವಾಸಿಗಳು ಹಿಂಜರಿಯುತ್ತಿದ್ದಾರೆ.

ಈ ಭಾಗದ ಕರಡಿಗೋಡು, ಬೆಟ್ಟದ ಕಾಡು, ಕುಂಬಾರಗುಂಡಿ, ಗುಹ್ಯ ಮತ್ತು ಕೂಡುಗದ್ದೆ ಪ್ರದೇಶದ ಹಲವಾರು ಮನೆಗಳು ಜಲಾವೃತಗೊಂಡಿದ್ದವು. ಗ್ರಾಮಗಳು ಸಂಪರ್ಕ ರಸ್ತೆಗಳನ್ನು ಕಳೆದುಕೊಂಡಿದ್ದವು. ಇದೀಗ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೆ ಅಲ್ಲಿನ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಕೆಲವು ಕುಸಿದಿವೆ. ಅಪಾಯದ ಅಂಚಿನಲ್ಲಿರುವ ಮನೆಗಳ ನಿವಾಸಿಗಳು ತಮ್ಮ ಮನೆಗಳಿಗೆ ಹಿಂತಿರುಗಲು ಮುಂದಾಗುತ್ತಿಲ್ಲ. ನಮಗೆ ಬೇರೆ ಕಡೆ ಮನೆ ಕಟ್ಟಿಕೊಟ್ಟರೆ ಮಾತ್ರ ಹೋಗುತ್ತೇವೆ, ಇಲ್ಲದಿದ್ದರೆ ಪರಿಹಾರ ಕೇಂದ್ರಗಳಲ್ಲೇ ಉಳಿದು ಕೊಳ್ಳುತ್ತೇವೆ ಎಂದು ನಿರಾಶ್ರಿತರು ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕರಡಿಗೋಡು ಪರಿಹಾರ ಕೇಂದ್ರದಲ್ಲಿ 350 ಮತ್ತು ಕೊಂಡಂಗೇರಿ ಪರಿಹಾರ ಕೇಂದ್ರಗಳಲ್ಲಿ 166 ಮಂದಿ ಆಶ್ರಯ ಪಡೆದಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾದಾಗಲೆಲ್ಲ ನಾವು ಸಂಕಷ್ಟವನ್ನು ಎದುರಿಸಬೇಕಾಗಿದೆ. ಈ ಭಾಗದಲ್ಲಿ ಸಾವಿರಾರು ಮನೆಗಳು ಜಲಾವೃತಗೊಂಡು ಸುಮಾರು 5 ಸಾವಿರ ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ಹಲವರು ಸಂಬಂಧಿಕರ ಮನೆಯಲ್ಲಿದ್ದಾರೆ. ಪ್ರತಿ ವರ್ಷ ಜಿಲ್ಲಾಡಳಿತವು ಪರಿಹಾರ ಕೇಂದ್ರಗಳನ್ನು ತೆರೆದು ಹಣ ಪೋಲು ಮಾಡುತ್ತಿದೆ ಎಂದು ಆರೋಪಿಸುತ್ತಿರುವ ನಿವಾಸಿಗಳು ನಮಗೆ ಬೇರೆ ಕಡೆ ಮನೆಗಳನ್ನು ಕಟ್ಟಿಕೊಟ್ಟು ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

Translate »