ತಿಂಗಳ ಹಿಂದೆ ಸಂಭವಿಸಿದ ಭೂಕಂಪನವೇ ಕೊಡಗಿನ ಭೂಕುಸಿತಕ್ಕೆ ಕಾರಣವಿರಬಹುದು
ಮೈಸೂರು

ತಿಂಗಳ ಹಿಂದೆ ಸಂಭವಿಸಿದ ಭೂಕಂಪನವೇ ಕೊಡಗಿನ ಭೂಕುಸಿತಕ್ಕೆ ಕಾರಣವಿರಬಹುದು

August 22, 2018

ಸುಂಟಿಕೊಪ್ಪ:  ಮಳೆಯಿಂದ ಕೊಡಗಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭೂಕುಸಿತವಾಗಲು ತಿಂಗಳ ಹಿಂದೆ ಸಂಭವಿಸಿದ್ದ ಲಘು ಭೂಕಂಪನವೇ ಕಾರಣವಾಗಿರಬಹುದು ಎಂದು ಸಂಸದ ಪ್ರತಾಪ್‍ಸಿಂಹ ಅಭಿಪ್ರಾಯಿಸಿದ್ದಾರೆ.

ಮಾದಾಪುರ ಸೇರಿದಂತೆ ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಾಚರಣೆ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ಮಡಿಕೇರಿ ಹಾಗೂ ಸೋಮವಾರ ಪೇಟೆ ತಾಲೂಕಿನ ಒಟ್ಟು ನಾಲ್ಕು ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ನಷ್ಟವಾಗಿದೆ. ಸುಮಾರು 2 ಸಾವಿರ ಎಕರೆಗಿಂತ ಹೆಚ್ಚು ಭೂಮಿ ಕುಸಿದಿದೆ. 5 ಸಾವಿರಕ್ಕಿಂತ ಹೆಚ್ಚು ಮನೆಗಳು ನೆಲ ಸಮವಾಗಿವೆ.

ಹಲವೆಡೆ ರಸ್ತೆಗಳೇ ಹಾಳಾಗಿ ಹೋಗಿವೆ. ತಿಂಗಳ ಹಿಂದೆ ಲಘು ಭೂಕಂಪ ಸಂಭವಿಸಿದ್ದರಿಂದ ಮಣ್ಣು ಸಡಿಲವಾಗಿತ್ತು. ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಸಡಿಲವಾಗಿದ್ದ ಮಣ್ಣು ಕುಸಿದಿರಬಹುದು ಎಂದು ಹೇಳಲಾಗುತ್ತಿದೆ. ಅಟ್ಟಿಹೊಳೆ-ಮುಕ್ಕೋಡ್ಲು ರಸ್ತೆ ಮೇಲೆ ಗುಡ್ಡ ಕುಸಿದಿದೆ. ನಿನ್ನೆ ನಾನು ಮತ್ತು ಶಾಸಕ ಅಪ್ಪಚ್ಚು ರಂಜನ್ ಅವರು ಸ್ಥಳದಲ್ಲೇ ನಿಂತು ಮನಡ್ಕಗದ್ದೆವರೆಗೆ ಸುಮಾರು 5 ಕಿಮೀ ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. ಇಂದು ಕಾರ್ಯಾ ಚರಣೆ ಮುಂದುವರಿದಿದೆ ಎಂದು ತಿಳಿಸಿದರು. ನೆರೆ ಪೀಡಿತ ಪ್ರದೇಶಗಳಲ್ಲಿ 174 ಸೈನಿಕರು, 10 ಜನ ನೇವಿಯವರು, 30 ಮಂದಿ ಎನ್‍ಡಿಆರ್‍ಎಫ್ ತಂಡದ ಜೊತೆಗೆ ಲೋಕೋಪಯೋಗಿ ಇಲಾಖೆ, ಸೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲರೂ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಕಾಫಿ ಬೋರ್ಡ್ ಅಧಿಕಾರಿಗಳೂ ನಮ್ಮೊಡನೆ ಬಂದು, ಪರಿಶೀಲನೆ ಆರಂಭಿಸಿದ್ದಾರೆ. ಕೇವಲ ಗುಡ್ಡ ಕುಸಿದಿರುವುದನ್ನು ಮಾತ್ರ ಗಮನಿಸಬಾರದು. ಎಲ್ಲಾ ತೋಟಗಳಲ್ಲಿ ಭೂಕುಸಿತವಾಗಿ ಅಪಾರ ಪ್ರಮಾಣದ ನಷ್ಟವಾಗಿದೆ. ಬಹುತೇಕ ಕಡೆಗಳಲ್ಲಿ ಕಾಫಿ ಉದುರಿದೆ, ಕೊಳೆತಿದೆ. ಎಲ್ಲವನ್ನೂ ಕಳೆದುಕೊಂಡ ಸಂತ್ರಸ್ತರನ್ನು ಇನ್ನೂ 10 ರಿಂದ 15 ದಿನ ಪರಿಹಾರ ಕೇಂದ್ರಗಳಲ್ಲೇ ಉಳಿಸಿಕೊಳ್ಳಬೇಕಾ ಗುತ್ತದೆ. ಮೊದಲು ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಟ್ಟು ನಂತರದಲ್ಲಿ ಪಕ್ಕಾಮನೆ ನಿರ್ಮಿಸಬೇಕು. ಈ ಪ್ರಕ್ರಿಯೆಗೆ ಕನಿಷ್ಟ ಏಳೆಂಟು ತಿಂಗಳಾದರೂ ಬೇಕಾಗುತ್ತದೆ. ತುರ್ತಾಗಿ ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕಿದೆ ಎಂದರು.

ಸಂಪೂರ್ಣ ಸಾಲ ಮನ್ನಾ ಮಾಡಿ: ರಾಜ್ಯದ ಕಾಮಧೇನು ಎನ್ನಲಾಗುವ ಬೆಂಗಳೂರಿನ ಜೀವನಾಡಿ ಕೊಡಗು. ಇಲ್ಲಿನ ಕಾವೇರಿ ತುಂಬಿ ಹರಿದರೆ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಈಗ ಕೊಡಗಿನಲ್ಲಿ ಮಳೆಯಿಂದ ಅಪಾರ ನಷ್ಟವಾಗಿದೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಡಗಿನ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಉದಾರ ನಿರ್ಧಾರ ಕೈಗೊಳ್ಳಬೇಕು. ನೆರೆ ಸಂತ್ರಸ್ತರ ನೆರವಿಗೆ ಧಾರಾಳವಾಗಿ ನೆರವು ನೀಡಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಪ್ರತಾಪ್‍ಸಿಂಹ ಹೇಳಿದರು.

ನಮಗೂ ಸಹಾಯ ಮಾಡಿ: ಸುಂಟಿಕೊಪ್ಪ-ಮಾದಾಪುರ ಮಾರ್ಗಮಧ್ಯೆ ಚೆನ್ನಮ್ಮ ಕಾಲೇಜು ಬಳಿ ಸಂಸದ ಪ್ರತಾಪ್‍ಸಿಂಹ ಅವರನ್ನು ಭೇಟಿಯಾದ ಗರ್ಗಂದೂರು, ರಾಜಪ್ರಭಾ, ಕೈಸಾರಿ, ಲಕ್ಕೇರಿ, ಹಳೆಯೂರು, ಮಲ್ಲಿಕಾರ್ಜುನ ಕಾಲೋನಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ತಮಗೂ ನೆರವು ನೀಡುವಂತೆ ಮನವಿ ಮಾಡಿಕೊಂಡರು. ಗರ್ಗಂದೂರು ಗ್ರಾಪಂ ಮಾಜಿ ಅಧ್ಯಕ್ಷೆ ಶೈಲಜಾ ಅವರೊಂದಿಗೆ ಬಂದಿದ್ದ ಹತ್ತಾರು ಮಂದಿ, ನಿರಂತರ ಮಳೆಯಿಂದಾಗಿ ಎರಡು ತಿಂಗಳಿಂದ ದುಡಿಮೆಯೂ ಇಲ್ಲ, ಊಟವೂ ಇಲ್ಲದಂತಾಗಿದೆ. ಕೊಂಡು ತಿನ್ನುವುದಕ್ಕೆ ನಮ್ಮ ಬಳಿ ಒಂದು ಬಿಡಿಗಾಸೂ ಇಲ್ಲ. ನಮಗೆ ಹಣ ಬೇಡ. ಆದರೆ ಒಂದಿಷ್ಟು ಆಹಾರ ಪದಾರ್ಥಗಳನ್ನು ನೀಡಿ ಎಂದು ಅಳಲು ತೋಡಿಕೊಂಡರು. ಮನವಿಗೆ ಸ್ಪಂದಿಸಿದ ಪ್ರತಾಪ್‍ಸಿಂಹ, ಆಹಾರ ಸಾಮಗ್ರಿಗಳನ್ನು ಒದಗಿಸುವ ಭರವಸೆ ನೀಡಿದರು. ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಪ್ಪಣ್ಣ ಮತ್ತಿತರರು ಇದ್ದರು.

Translate »