ಪರಿಸರ ಸ್ನೇಹಿ ಕ್ರಮಗಳಿಗೆ ಆಗ್ರಹಿಸಿ ಆರ್‍ಎಲ್‍ಹೆಚ್‍ಪಿ ಜನಜಾಗೃತಿ ಜಾಥಾ
ಮೈಸೂರು

ಪರಿಸರ ಸ್ನೇಹಿ ಕ್ರಮಗಳಿಗೆ ಆಗ್ರಹಿಸಿ ಆರ್‍ಎಲ್‍ಹೆಚ್‍ಪಿ ಜನಜಾಗೃತಿ ಜಾಥಾ

June 8, 2018

ಮೈಸೂರು:  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‍ಎಲ್‍ಹೆಚ್‍ಪಿ)ಯು ಪರಿಸರ ಸಂರಕ್ಷಣೆಗಾಗಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿತು.ಆರ್‍ಎಲ್‍ಹೆಚ್‍ಪಿ ಸಂಸ್ಥೆ ವ್ಯಾಪ್ತಿಯ ಕೊಳಚೆ ಪ್ರದೇಶಗಳ ನೂರಾರು ಮಕ್ಕಳು ಮತ್ತು ವಿವಿಧ ಕಾಲೇಜು ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಪರಿಸರ ರಕ್ಷಣೆಯಲ್ಲಿ ಜನಸಾಮಾನ್ಯರ ಪಾತ್ರದ ಬಗ್ಗೆ ಜನಜಾಗೃತಿ ಮೂಡಿಸಿದರು.

ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಬಸವರಾಜು ಜಾಥಾಗೆ ಚಾಲನೆ ನೀಡಿದರು. ನಗರಪಾಲಿಕೆ ಹೆಚ್ಚುವರಿ ಅಯುಕ್ತ ರವೀಂದ್ರ, ಆರ್‍ಎಲ್‍ಹೆಚ್‍ಪಿ ನಿರ್ದೇಶಕಿ ಸರಸ್ವತಿ, ಯುವಜನ ಪ್ರತಿನಿಧಿಗಳಾದ ಕಾರ್ತಿಕ್, ರಮ್ಯ, ಕಾರ್ಯಕ್ರಮ ವ್ಯವಸ್ಥಾಪಕ ಪಿ.ನಾಗೇಂದ್ರ ಇನ್ನಿತರರು ಪಾಲ್ಗೊಂಡಿದ್ದರು.
ಜಾಥಾ ದೊಡ್ಡ ಗಡಿಯಾರ, ಗಾಂಧಿ ವೃತ್ತ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ ಮೂಲಕ ತೆರಳಿ ಜಿಲ್ಲಾಧಿಕಾರಿ ಕಚೇರಿ ಬಳಿ ಅಂತ್ಯಗೊಂಡಿತು. ಜಾಥಾದ ಉದ್ದಕ್ಕೂ ಪ್ಲಾಸ್ಟಿಕ್ ತೊಲಗಲಿ, ಪರಿಸರ ರಕ್ಷಿಸಿ, ಹಸಿರೇ ಉಸಿರು, ಸೌರಶಕ್ತಿ ಬಳಸಿ, ವಿದ್ಯುತ್ ಉಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಬಳಿಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುವ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು.

ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳು, ನೂತನ ಮನೆ, ಇನ್ನಿತರ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯವಾಗಬೇಕು. ಸೌರಶಕ್ತಿ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಜಿಲ್ಲೆಯ ಕೆರೆ ಕಟ್ಟೆಗಳ ಹೂಳು ತೆಗೆಸಿ ನೀರು ಸಂಗ್ರಹ ಸಾಮಥ್ರ್ಯ ಹೆಚ್ಚಿಸಿ ಅಂತರ್ಜಲ ಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅಕ್ರಮ ಪ್ಲಾಸ್ಟಿಕ್ ತಯಾರಿಕೆ, ಬಳಕೆದಾರರ ಮೇಲೆ ಕಠಿಣ ಕ್ರಮ, ಕೃಷಿ ಕ್ಷೇತ್ರದಲ್ಲಿ ಮಣ ್ಣನ ಫಲವತ್ತತೆ ಹೆಚ್ಚಿಸಲು ಸಾವಯವ ಕೃಷಿಗೆ ಹೆಚ್ಚು ಅನುದಾನ ನೀಡಿ ಪ್ರೋತ್ಸಾಹಿಸಬೇಕು. ಕೈಗಾರಿಕೆಗಳ ತ್ಯಾಜ್ಯ ನೀರು ಶುದ್ಧೀಕರಿಸಿ ಪುನರ್ ಬಳಕೆ ತಂತ್ರಜ್ಞಾನ ಅಭಿವೃದ್ದಿಗೆ ಒತ್ತು ನೀಡಬೇಕು. ವಾಯು ಮಾಲಿನ್ಯ, ಶಬ್ಧ ಮಾಲಿನ್ಯಕ್ಕೆ ಕಾರಣವಾದ ವಾಹನಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Translate »