ರಸ್ತೆ ಕಾಮಗಾರಿ ಕಳಪೆ ಆರೋಪ: ಅಧಿಕಾರಿಗಳಿಂದ ಪರಿಶೀಲನೆ
ಕೊಡಗು

ರಸ್ತೆ ಕಾಮಗಾರಿ ಕಳಪೆ ಆರೋಪ: ಅಧಿಕಾರಿಗಳಿಂದ ಪರಿಶೀಲನೆ

August 7, 2018

ಸೋಮವಾರಪೇಟೆ: ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಭಾಗದಲ್ಲಿ ವಿಶೇಷ ಪ್ಯಾಕೇಜ್‍ನಡಿ ಕೈಗೊಳ್ಳಲಾಗಿರುವ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು.

ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸೋಮವಾರಪೇಟೆ ಲೋಕೋಪಯೋಗಿ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ವಹಿಸಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಗ್ಗನ ಅನಿಲ್ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆ ಸೋಮವಾರಪೇಟೆಗೆ ಆಗಮಿಸಿದ ಸುಳ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಣ್ಣೇಗೌಡ, ಗುಣಮಟ್ಟ ಅಧಿಕಾರಿ ನಾಗೇಂದ್ರ ಬಾಬು, ಮಂಗಳೂರು ಅಧೀಕ್ಷಕ ಅಭಿಯಂತರರ ಕಚೇರಿಯ ಸಂತೋಷ್ ಶೆಟ್ಟಿ, ದಿನೇಶ್ ಕಿಣಿ, ಗಿರೀಶ್ ಸೇರಿದಂತೆ 11 ಮಂದಿ ಅಧಿಕಾರಿಗಳ ತಂಡ ರಸ್ತೆಗಳ ಗುಣಮಟ್ಟವನ್ನು ಪರಿಶೀಲಿಸಿತು.

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಗದ್ದೆ-ತಸ್ವಾರ್ ಹುಸೇನ್ ಮನೆ ಕಡೆಯ ರಸ್ತೆ, ದೊಡ್ಡಕೊಡ್ಲಿ ಗಣಪತಿ ದೇವಾಲಯ ರಸ್ತೆ, ಕಲ್ಲುಕೋರೆ ರಿಜ್ವಾನ್ ಮನೆ ಸಂಪರ್ಕ ರಸ್ತೆ ಸೇರಿದಂತೆ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಹಲವು ರಸ್ತೆಗಳನ್ನು ಅಂದಾಜು ಪಟ್ಟಿ ಮತ್ತು ಅಳತೆ ಪುಸ್ತಕದಲ್ಲಿ ನಮೂದಿಸಿರುವಂತೆ ಕೈಗೊಳ್ಳದಿರುವ ಬಗ್ಗೆ ಅಧಿಕಾರಿ ಗಳು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಬಗ್ಗನ ಅನಿಲ್, ಬಗ್ಗನ ಹರೀಶ್, ಹರಗ ಗ್ರಾ.ಪಂ. ಸದಸ್ಯ ತ್ರಿಶೂಲ್, ಪ್ರಮುಖರಾದ ಪ್ರಕಾಶ್, ಅಭಿನಂದನ್ ಸಂದೀಪ್ ಅವರುಗಳು ದೂರಿನ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

Translate »