ಶ್ರೀರಂಗಪಟ್ಟಣವನ್ನು ‘ಟೂರಿಸಂ ನಗರ’ವನ್ನಾಗಿ ಘೋಷಿಸಿ: ಪಾಪು ಆಗ್ರಹ
ಮಂಡ್ಯ

ಶ್ರೀರಂಗಪಟ್ಟಣವನ್ನು ‘ಟೂರಿಸಂ ನಗರ’ವನ್ನಾಗಿ ಘೋಷಿಸಿ: ಪಾಪು ಆಗ್ರಹ

August 7, 2018

ಮಂಡ್ಯ:  ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀರಂಗಪಟ್ಟಣವನ್ನು ‘ಟೂರಿಸಂ ನಗರ’ ಎಂದು ಘೋಷಣೆ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಶ್ರೀರಂಗಪಟ್ಟಣದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬರುತ್ತಾರೆ. ಶ್ರೀರಂಪಟ್ಟಣ ದಲ್ಲಿ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ, ಟಿಪ್ಪು ಆಳ್ವಿಕೆ ಅರಮನೆಗಳು, ಗುಂಬಜ್, ದರಿಯಾ ದೌಲತ್, ಸಂಗಮ, ಕಾವೇರಿ ನದಿ ಸ್ನಾನಘಟ್ಟ, ಜೈಲು ಖಾನೆಗಳು, ಕೋಟೆ ಗೋಪುರಗಳು, ಮದ್ದಿನ ಮನೆಗಳು, ಬತ್ತೇರಿ, ರಂಗನಾಥ ದೇವಾಲಯ, ನಿಮಿಷಾಂಬ ದೇವಾಲಯ ಇಲ್ಲಿದೆ ಎಂದು ತಿಳಿಸಿದ್ದಾರೆ.

ಇವಿಷ್ಟು ಮಾತ್ರವಲ್ಲದೆ ಮಹಾತ್ಮ ಗಾಂಧೀಜಿ ಸೇರಿದಂತೆ ಹಲವು ಗಣ್ಯರ ಚಿತಾಭಸ್ಮ ವಿಸರ್ಜಿಸಿರುವ ಪಶ್ಚಿಮ ವಾಹಿನಿ, ದೇಶ-ವಿದೇಶಗಳಿಂದ ಬರುವ ಪಕ್ಷಿಗಳ ತಾಣ ಪಕ್ಷಿಧಾಮ(ರಂಗನತಿಟ್ಟು), ಗುಂಡು ತೋಪುಗಳು, ಕರಿಘಟ್ಟ, ಗೆಂಡೆಹೊಸಹಳ್ಳಿ ಧಾಮ, ಟಿಪ್ಪು ಸಮಾಧಿ ಇತ್ಯಾದಿಸ್ಥಳಗಳು ಇಲ್ಲಿದ್ದು ಪ್ರವಾಸಿಗರನ್ನು ಸೆಳೆಯುತ್ತಿವೆ ಹೀಗಾಗಿ ಶ್ರೀರಂಗಪಟ್ಟಣವನ್ನು ಟೂರಿಸಂ ನಗರವೆಂದು ಘೋಷಿಸಿದರೆ ಶ್ರೀರಂಗಪಟ್ಟಣ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಒತ್ತಾಯ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರುಗಳ ದೂರದೃಷ್ಟಿ ಫಲವಾಗಿ ಶ್ರೀರಂಗಪಟ್ಟಣದಲ್ಲಿ ನೀರಾವರಿಗೆ ಅಂದಿನ ಕಾಲದಲ್ಲೇ ಒತ್ತು ನೀಡಲಾಗಿತ್ತು. ಇತಿಹಾಸ ಸಾರುವ ಕಿರಂಗೂರು ಬಳಿಯ ದಸರಾ ಮಂಟಪದಲ್ಲಿ ಪ್ರತಿ ವರ್ಷ ಮೈಸೂರು ಮಾದರಿಯಲ್ಲೇ ದಸರಾ ಹಬ್ಬ ನಡೆಯುತ್ತದೆ. ಹೀಗಾಗಿ ಇಂತಹ ಪ್ರಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇಲ್ಲಿಗೆ ಆಗಮಿಸುವ ಲಕ್ಷಾಂತರ ಪ್ರವಾಸಿಗರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ. ಹರಿದು ಬರುತ್ತಿದೆ. ಆದರೆ ಪ್ರವಾಸಿಗರ ಭದ್ರತೆಗೆ ಮಂಡ್ಯ ಜಿಲ್ಲಾಡಳಿತ ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಲ್ಲಿ ತಂಗಲು ಹಾಗೂ ಅವರಿಗೆ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಪ್ರವಾಸಿಗರಿಗೆ ಮಾಹಿತಿ ನೀಡಲು ಸರಿಯಾದ ಮಾಹಿತಿ ಕೇಂದ್ರಗಳಿಲ್ಲ. ಇದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಇಲ್ಲಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಇಲ್ಲಿವರೆಗೂ ಕ್ಷೇತ್ರದಲ್ಲಿ ಆಡಳಿತ ನಡೆಸಿದ ಪ್ರತಿಯೊಬ್ಬ ಜನಪ್ರತಿನಿಧಿಗಳೂ ವಿಫಲರಾಗಿದ್ದು, ತಮ್ಮ ಹಿತ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಸುಂದರ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಬದ್ಧತೆ ತೋರಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಗಮನ ಸೆಳೆದು ಶ್ರೀರಂಗಪಟ್ಟಣದ ಇತಿಹಾಸ ಹಾಗೂ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು `ಟೂರಿಸಂ ನಗರ’ವಾಗಿ ಘೋಷಣೆ ಮಾಡಲು ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು ಕೇಂದ್ರಕ್ಕೆ ನಿಯೋಗ ತೆರಳಿ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟೂರಿಸಂ ನಗರ ಎಂದು ಘೋಷಣೆಯಾದರೆ ಶ್ರೀರಂಗಪಟ್ಟಣದ ಚಿತ್ರಣವೇ ಬದಲಾಗುತ್ತದೆ. ಕೇಂದ್ರದಿಂದ ಸಾವಿರಾರು ಕೋಟಿ ಅನುದಾನ ಬಿಡುಗಡೆಯಾಗುತ್ತದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಲು, ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಲು, ಮೈಸೂರು ಮಾದರಿ ಶ್ರೀರಂಗಪಟ್ಟಣವನ್ನು ಸುಂದರ ನಗರವಾಗಿ ಮಾರ್ಪಡಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮಂಡ್ಯ ಜಿಲ್ಲೆ ಮೇಲೆ ವಿಶೇಷ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುತುವರ್ಜಿ ವಹಿಸಿ ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಪಾಪು ಅವರು ಒತ್ತಾಯಿಸಿದ್ದಾರೆ.

Translate »