ಅರಸೀಕೆರೆ : ತಾಲೂಕಿನ ಬಾಣಾವರ ಪಟ್ಟಣದ ಕೋಟೆ ಬ್ರಾಹ್ಮಣರ ಬೀದಿಯಲ್ಲಿನ ಶ್ರೀಸಾಯಿಕೃಪ ಮನೆಯ ಬೀಗ ಮುರಿದಿರುವ ಕಳ್ಳರು, ಚಿನ್ನಾಭರಣ, ನಗದು ದೋಚಿಕೊಂಡು ಹೋಗಿದ್ದಾರೆ.
ಕೋಟೆ ಬ್ರಾಹ್ಮಣರ ಬೀದಿಯ ಆನಂದ ಅವರ ಪತ್ನಿ ಮಾಧವಿ ಅವರು ಏ.26ರಂದು ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದರು. ಪಕ್ಕದ ಮನೆಯ ಆಶಾ ಅವರು ಮಾಧವಿ ಅವರ ಮನೆಯ ಬಾಗಿಲಿಗೆ ಹೂ ಇಡಲು ಮೇ 1ರಂದು ಹೋದಾಗ ಬಾಗಿಲ ಬೀಗ ಮುರಿದಿರುವುದು ಕಂಡಿದೆ. ಅವರು ತಕ್ಷಣವೇ ಮಾಧವಿ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಅದೇ ದಿನ ಮಧ್ಯಾಹ್ನ 12ರ ವೇಳೆಗೆ ಮನೆಗೆ ಬಂದ ಮಾಧವಿ ಅವರಿಗೆ ತಮ್ಮ ಮನೆಯ ಬಾಗಿಲ ಬೀಗವನ್ನು ಕಳ್ಳರು ಮುರಿದು ಒಳನುಗ್ಗಿ ಕಳವು ಮಾಡಿರುವುದು ತಿಳಿದುಬಂದಿದೆ.
ಮನೆಯ ಕೊಠಡಿಯ ಬೀರುವಿನಲ್ಲಿಟ್ಟಿದ್ದ 1 ಲಕ್ಷ ರೂ. ನಗದು ಹಾಗೂ ದೇವಸ್ಥಾನಕ್ಕೆ ಸೇರಿದ 22 ಸಾವಿರ ರೂ. ನಗದು ಮತ್ತು 10 ಗ್ರಾಂ ಚಿನ್ನದ ಓಲೆ ಜುಮುಕಿ, 18 ಗ್ರಾಂ ಚಿನ್ನದ ಕರಿಮಣಿ ಸರ, 8 ಮತ್ತು 5 ಗ್ರಾಂಗಳ 2 ಚಿನ್ನದ ಉಂಗುರ, ಒಟ್ಟು 32 ಗ್ರಾಂಗಳ 4 ಚಿನ್ನದ ಸರ, 15 ಗ್ರಾಂ ತೂಗುವ 2 ಚಿನ್ನದ ಉಂಗುರ, 4 ಗ್ರಾಂ ತೂಕದ ಚಿನ್ನದ ಮಾಟಿ, 4 ಗ್ರಾಂಗಳ ಚಿನ್ನದ ಓಲೆ ಮತ್ತು ಗುಂಡುಗಳು ಹಾಗೂ 200 ಗ್ರಾಂ ಬೆಳ್ಳಿಯ 3 ಜೊತೆ ಕಾಲುಚೈನ್, 30 ಗ್ರಾಂ ಬೆಳ್ಳಿಯ ಸರವನ್ನು ಕದ್ದೊಯ್ದಿ ದ್ದಾರೆ ಎಂದು ಆನಂದ ಅವರು ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.