ಇಂದಿನಿಂದ ಆರ್.ಟಿ.ಓ ಸ್ಕ್ವಾಡ್‍ನಿಂದ ಖಾಸಗಿ ಶಾಲಾ ವಾಹನಗಳ ತಪಾಸಣೆ
ಮೈಸೂರು

ಇಂದಿನಿಂದ ಆರ್.ಟಿ.ಓ ಸ್ಕ್ವಾಡ್‍ನಿಂದ ಖಾಸಗಿ ಶಾಲಾ ವಾಹನಗಳ ತಪಾಸಣೆ

June 29, 2018

ಮೈಸೂರು:  ಮಕ್ಕಳ ಸುರಕ್ಷತೆಯತ್ತ ಗಮನ ಹರಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ನಾಳೆ (ಜೂ.29)ಯಿಂದ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಖಾಸಗಿ ಶಾಲಾ-ಕಾಲೇಜುಗಳ ವಾಹನಗಳನ್ನು ತಪಾಸಣೆ ಮಾಡಲಿದ್ದಾರೆ.

ಮಕ್ಕಳನ್ನು ಕರೆತಂದು ತರಗತಿ ಮುಗಿದ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ಜತೆಗೆ ಅನುಭವಿ ಚಾಲಕರು ಮತ್ತು ಜವಾಬ್ದಾರಿಯುತ ಅಟೆಂಡರ್‍ಗಳನ್ನು ನೇಮಿಸಿಕೊಳ್ಳಬೇಕೆಂಬುದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮುಖ್ಯ ಉದ್ದೇಶವಾಗಿದೆ.

ಅದಕ್ಕಾಗಿ ನಾಲ್ವರು ಮೋಟಾರು ವಾಹನ ನಿರೀಕ್ಷಕರನ್ನೊಳಗೊಂಡ ತಂಡವೊಂದನ್ನು ರಚಿಸಲಾಗಿದ್ದು, ಅವರು ಶುಕ್ರವಾರ (ಜೂ.29)ದಿಂದ ಕಾರ್ಯಾಚರಣೆ ನಡೆಸಿ ಖಾಸಗಿ ಶಾಲಾ-ಕಾಲೇಜು ಮಕ್ಕಳನ್ನು ಕರೆದೊಯ್ಯುವ ವಾಹನಗಳನ್ನು ತಪಾಸಣೆ ಮಾಡಲಿದ್ದಾರೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪಶ್ಚಿಮ) ಎಂ.ಪ್ರಭುಸ್ವಾಮಿ ಅವರು, ಸೀನಿಯರ್ ಮೋಟಾರು ವಾಹನ ಇನ್‍ಸ್ಪೆಕ್ಟರ್‍ಗಳಾದ ಕೆ.ವಿ.ಶ್ರೀಧರ್ ಅಧಿಕಾರಿ, ಪಿಎ ಚಾಲ್ರ್ಸ್, ಎಸ್.ಟಿ.ಸತೀಶ್ ಹಾಗೂ ಮೋಟಾರು ವೆಹಿಕಲ್ ಇನ್‍ಸ್ಪೆಕ್ಟರ್ ಪ್ರಭಾಕರ್ ಒಳಗೊಂಡ ವಿಚಕ್ಷಕ ದಳವನ್ನು ರಚಿಸಲಾಗಿದೆ ಎಂದರು.
ಶುಕ್ರವಾರದಿಂದ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸಂಚರಿಸಿ ಶಾಲಾ ಮಕ್ಕಳ ವಾಹನಗಳನ್ನು ತಪಾಸಣೆ ಮಾಡುವ ಸ್ಕ್ವಾಡ್ ತಂಡದ ಅಧಿಕಾರಿಗಳು ವಾಹನದ ದಾಖಲಾತಿ, ಚಾಲಕರು ಮತ್ತು ಅಟೆಂಡರ್‍ಗಳು ಅರ್ಹರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವರು ಎಂದು ಅವರು ತಿಳಿಸಿದರು.

ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಲಾಗಿದೆಯೇ, ಎಮರ್ಜೆನ್ಸಿ ಎಕ್ಸಿಟ್ ಡೋರ್, ಬಾಗಿಲುಗಳ ಲಾಕ್ ಇದೆಯೇ, ಕಿಟಕಿ ಬಳಿ ಕಬ್ಬಿಣದ ರಾಡ್‍ಗಳನ್ನು ಹಾಕಲಾಗಿದೆಯೇ, ವಾಹನ ಸುಸ್ಥಿತಿಯಲ್ಲಿ ನಿರ್ವಹಣೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ಒಂದು ವೇಳೆ ಲೋಪವಿರುವುದು ಕಂಡಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಭುಸ್ವಾಮಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಜೂನ್ 14ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಖಾಸಗಿ ಶಾಲಾ ವಾಹನಗಳ ಚಾಲಕರು ಮತ್ತು ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಸುರಕ್ಷತೆ ಕುರಿತು ಅರಿವು ಮಾಡಿಸಿದ್ದಲ್ಲದೆ ವಾಹನಗಳ ಸ್ಥಿತಿಯನ್ನು ಪರಿಶೀಲಿಸಿ ಲೋಪ ದೋಷ ಸರಿಪಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು.ಇದೀಗ ಗಡುವು ಮುಗಿದಿರುವುದರಿಂದ ವಾಹನಗಳ ತಪಾಸಣೆ ನಡೆಸಿ, ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಎಲ್ಲಾ ಬಗೆಯ ಶಾಲಾ ವಾಹನಗಳೂ ಸಹ ಸುಸ್ಥಿತಿಯಲ್ಲಿರಬೇಕು ತಪಾಸಣೆ ಕುರಿತು ಶಿಕ್ಷಣ ಸಂಸ್ಥೆ ಮುಖ್ಯಸ್ಥರ ಅಭಿಪ್ರಾಯ

ಶಾಲಾ-ಕಾಲೇಜು ಮಕ್ಕಳ ಸುರಕ್ಷತೆಗೆ ಗಮನಹರಿಸ ಬೇಕೆಂ ಬುದು ಸ್ವಾಗತಾರ್ಹವಾಗಿದ್ದು, ಮಕ್ಕಳು ಮತ್ತು ವಿದ್ಯಾರ್ಥಿಗಳನ್ನು ಕರೆದೊಯ್ಯುವ ಎಲ್ಲಾ ವಿಭಾಗದ ವಾಹನಗಳನ್ನು ಸುಸ್ಥಿತಿಯಲ್ಲಿರಿ ಸುವುದು ಅತ್ಯಗತ್ಯ ಎಂದು ಮೈಸೂರಿನ ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಅಭಿಪ್ರಾಯ ಪಟ್ಟಿದ್ದಾರೆ. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆ ದೊಯ್ಯುವ ಬಸ್ಸು, ಮಿನಿ ಬಸ್ಸು, ಮಾರುತಿ ಓಮ್ನಿ ಹಾಗೂ ಆಟೋಗಳನ್ನು ಸುರಕ್ಷಿತವಾಗಿರಿಸಬೇಕು ಎಂದು ಶ್ರೀ ಶಾರದಾ ಪಬ್ಲಿಕ್ ಶಾಲೆ ಕಾರ್ಯದರ್ಶಿ ಮಂಜುನಾಥ ಶ್ರೀವತ್ಸ ತಿಳಿಸಿದ್ದಾರೆ.

ಆರ್.ಟಿ.ಓ ಅಧಿಕಾರಿಗಳು ಕೇವಲ ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ಸುಗಳನ್ನು ಮಾತ್ರ ತಪಾಸಣೆ ಮಾಡುವುದರಿಂದ ಶಾಲಾ ಮಕ್ಕಳ ರಕ್ಷಣೆ ಮಾಡಿದಂತಾಗುವುದಿಲ್ಲ. ಬದಲಾಗಿ ಶಾಲಾ-ಕಾಲೇಜಿಗೆ ಮಕ್ಕಳನ್ನು ಕರೆದೊಯ್ಯುವ ಎಲ್ಲಾ ಬಗೆಯ ವಾಹನ ಗಳನ್ನು ತಪಾಸಣೆ ಮಾಡಿ, ಸರಿಪಡಿಸಬೇಕೆಂದೂ ನುಡಿದರು.

ಆರ್.ಟಿ.ಓ ಕ್ರಮ ಸ್ವಾಗತಾರ್ಹ

ಮಕ್ಕಳ ಪ್ರಾಣ ರಕ್ಷಣೆ ದೃಷ್ಟಿಯಿಂದ ವಾಹನಗಳನ್ನು ತಪಾಸಣೆ ಮಾಡುತ್ತಿರುವ ಪ್ರಾದೇ ಶಿಕ ಸಾರಿಗೆ ಅಧಿಕಾರಿಗಳ ಕ್ರಮ ಸ್ವಾಗತಾರ್ಹ ಎಂದು ಮೈಸೂ ರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ರುವ ಎಸ್‍ವೀಜಿಸ್ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಮನೋಹರ್ ಅಭಿಪ್ರಾಯ ಪಟ್ಟಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದೆಷ್ಟು ಪ್ರಾಮುಖ್ಯವೋ, ಮಕ್ಕಳನ್ನು ಸುರಕ್ಷಿತವಾಗಿ ಕರೆತಂದು, ಮನೆಗೆ ತಲುಪಿಸುವುದೂ ಅಷ್ಟೇ ಪ್ರಮುಖವಾದುದಾಗಿದ್ದು, ಅದಕ್ಕಾಗಿ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅತ್ಯಗತ್ಯ ಎಂದು ಪ್ರತಿಕ್ರಿಯೆ ನೀಡಿದರು.

ನಮ್ಮ ಸಹಕಾರವಿದೆ

ಶಾಲಾ ವಾಹನಗಳನ್ನು ಸುಸ್ಥಿತಿ ಯಲ್ಲಿಡಬೇಕೆಂಬ ಸಾರಿಗೆ ಅಧಿಕಾರಿ ಗಳ ನಿಲುವಿಗೆ ನಮ್ಮ ಸಂಪೂರ್ಣ ಸಹ ಕಾರವಿದೆ ಎಂದು ಸುಪ್ರಿಂ ಪಬ್ಲಿಕ್ ಶಾಲೆ ಅಧ್ಯಕ್ಷರೂ ಆದ ಸಿಬಿಎಸ್‍ಇ, ಐಸಿ ಎಸ್‍ಇ ಮತ್ತು ಶಾಸಗಿ ಶಾಲೆಗಳ ಒಕ್ಕೂ ಟದ ಉಪಾಧ್ಯಕ್ಷ ಡಾ.ರವೀಂದ್ರಸ್ವಾಮಿ ದೊಡ್ಡಮನೆ ತಿಳಿಸಿದ್ದಾರೆ. ನಮ್ಮ ಶಾಲೆಯ ಎಲ್ಲಾ ವಾಹನಗಳನ್ನು ಸಾರಿಗೆ ಪ್ರಾಧಿಕಾರ ನಿಗದಿ ಪಡಿಸಿರುವ ನಿಯಮಾವಳಿಯನ್ವಯ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸುಸ್ಥಿತಿಯಲ್ಲಿ ನಿರ್ವಹಿಸುತ್ತಿದ್ದೇವೆ ಎಂದರು.

Translate »