ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿ ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು: ವಿಶ್ರಾಂತ ಕುಲಪತಿ ಮಲ್ಲಿಕಾರ್ಜುನ ಶಾಸ್ತ್ರಿ
ಮೈಸೂರು

ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿ ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು: ವಿಶ್ರಾಂತ ಕುಲಪತಿ ಮಲ್ಲಿಕಾರ್ಜುನ ಶಾಸ್ತ್ರಿ

June 29, 2018

ಮೈಸೂರು : ರಂಗಭೂಮಿಯಲ್ಲಿ ಎದುರಾಗುವ ಕಷ್ಟಗಳನ್ನು ಮೆಟ್ಟಿಲುಗಳನ್ನಾಗಿಸಿಕೊಂಡು ಮೇಲತ್ತಿ ಬಂದವರು ಡಾ. ಸುಭದ್ರಮ್ಮ ಮನ್ಸೂರು ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾರ್ಜುನ ಶಾಸ್ತ್ರಿ ಹೇಳಿದರು.

ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗ ವೇದಿಕೆ ವತಿಯಿಂದ ನಡೆದ ‘ಡಾ. ಸುಭದ್ರಮ್ಮ ಮನ್ಸೂರು ರಂಗಯಾನ’ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಟಿಸುತ್ತಾ ಹಾಡುಗಾರ್ತಿಯಾಗಿ ಬೆಳೆದ ಸುಭದ್ರಮ್ಮ ನವರ ಪರಿಚಯ ಸಮುದ್ರದ ಪರಿಚಯವಾದಂತೆ.

ಸಂಗೀತ ಎಂಬುದು ಅವರ ಹುಟ್ಟಿನಿಂದ ಬಂದಿದ್ದು, ಸುಭದ್ರಮ್ಮರ ಆಗಮನ ನಾಟಕ ರಂಗವನ್ನು ಬೆಳೆಸಿತು. ಕಂಪನಿ ನಾಟಕಗಳಲ್ಲಿ ಶೋಷಣೆಯನ್ನು ಮೀರಿ ನಿಂತವರು. ಕನ್ನಡ ಮತ್ತು ತೆಲುಗು ಎರಡು ಮಾತೃ ಭಾಷೆಯನ್ನು ಹೊಂದಿದ್ದ ಇವರು, ರಂಗ ಭೂಮಿಯಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ ಎಂದರುಹಿರಿಯ ರಂಗ ಸಂಗೀತ ತಜ್ಞ ಕಿರಗಸೂರು ರಾಜಪ್ಪ ಮಾತನಾಡಿ, ನಾಟಕ ರಂಗದಲ್ಲಿ ಪ್ರೌಢಿಮೆಯನ್ನು ಗಳಿಸಿದ್ದ ಅವರು, 7 ದಶಕಗಳಿಂದ ರಂಗ ಕಲೆಯನ್ನು ಬೆಳೆಸುತ್ತಿದ್ದಾರೆ. 11ನೇ ವಯಸ್ಸಿನಲ್ಲಿ ಕಲಾಸೇವೆಯನ್ನು ಆರಂಭಿಸಿ ಮಹಿಳಾ ಪ್ರಾಧಾನ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. 1939ರಲ್ಲಿ ಜನಿಸಿದ ಸುಭದ್ರಮ್ಮ ರಂಗ ಗೀತೆಗಳ ಸಾಧಕಿಯಾಗಿದ್ದಾರೆ. ಗೋಷ್ಟಿ ಗಾಯನಗಳ ಮೂಲಕ ರಂಗ ಗೀತೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಅವರನ್ನು ಅಭಿನಂದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ.ಡಿ ರಾಜಣ್ಣ, ಕದಂಬ ರಂಗ ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ, ಮಡ್ಡಿಕೆರೆ ಗೋಪಾಲ್, ಡಾ. ಜಯಪ್ಪ ಹೊನ್ನಾಳಿ, ಕೆ.ಎಸ್ ನಾಗರಾಜು, ಮೂಗೂರು ನಂಜುಂಡಸ್ವಾಮಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Translate »