ಮಳೆ ನೀರು ಸರಾಗವಾಗಿ ಹರಿದು ಹೋಗಲು 72 ಕಿ.ಮೀ. ರಾಜಕಾಲುವೆ ಹೂಳೆತ್ತಲು ಅಧಿಕಾರಿಗಳಿಗೆ ಸೂಚನೆ
ಮೈಸೂರು

ಮಳೆ ನೀರು ಸರಾಗವಾಗಿ ಹರಿದು ಹೋಗಲು 72 ಕಿ.ಮೀ. ರಾಜಕಾಲುವೆ ಹೂಳೆತ್ತಲು ಅಧಿಕಾರಿಗಳಿಗೆ ಸೂಚನೆ

June 29, 2018

ಮಳೆ ಹಾವಳಿ ತಡೆಗೆ ಅಧಿಕಾರಿಗಳೊಂದಿಗೆ ಶಾಸಕ ರಾಮದಾಸ್ ಸಭೆ
ಮೈಸೂರು: ಮಳೆಗಾಲ ಆರಂಭವಾಗಿದ್ದು, ಕೆ.ಆರ್.ಕ್ಷೇತ್ರ ಸೇರಿದಂತೆ ಮೈಸೂರಿನಲ್ಲಿ 72 ಕಿ.ಮೀ. ರಾಜಕಾಲುವೆಯ ನಕ್ಷೆ ಸಿದ್ಧಪಡಿಸುವುದರೊಂದಿಗೆ ಒಂದು ತಿಂಗಳೊಳಗೆ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಶಾಸಕ ಎಸ್.ಎ.ರಾಮದಾಸ್ ಅವರು ಮುಡಾ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೈಸೂರು ನಗರ ಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಕೆ.ಆರ್.ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಸಮ್ಮುಖದಲ್ಲಿ ನಡೆದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಸುರಿದ ಮಳೆಯಿಂದ ಮೂರ್ನಾಲ್ಕು ಬಾರಿ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿ ಸಮಸ್ಯೆ ಉಂಟಾಗಿತ್ತು. ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದೇ ಮಳೆಯಿಂದ ಸಮಸ್ಯೆ ಉಂಟಾಗಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ಚುರುಕಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ 72 ಕಿ.ಮಿ ದೂರದ ರಾಜಕಾಲುವೆಯ ನಕ್ಷೆ ಸಿದ್ಧಪಡಿಸುವುದರೊಂದಿಗೆ ಒತ್ತುವರಿ ತೆರವು ಮಾಡಿ, ಹೂಳೆತ್ತುವುದಕ್ಕೆ ಒಂದು ತಿಂಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರಿನ ಕೆ.ಆರ್.ಕ್ಷೇತ್ರವನ್ನು ಬೋರ್‍ವೆಲ್ ಮುಕ್ತ ಕ್ಷೇತ್ರವನ್ನಾಗಿ ಮಾಡಲಾಗಿತ್ತು. ಆದರೆ ಕಳೆದ 5ವರ್ಷದ ಅವಧಿಯಲ್ಲಿ 306 ಬೋರ್‍ವೆಲ್‍ಗಳಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈಗ ಯಾವ ಬಡಾವಣೆಗಳಿಗೆ ಬೋರ್‍ವೆಲ್ ನೀರು ಸರಬರಾಜು ಮಾಡಲಾಗುತ್ತಿದೆಯೋ ಅಲ್ಲಿಗೆ ಕಾವೇರಿ ಮತ್ತು ಕಪಿಲ ನದಿಯಿಂದ ನೀರು ಪೂರೈಸಲು ಪೈಪ್‍ಲೈನ್ ಅಳವಡಿಸಬೇಕು. ಬೋರ್‍ವೆಲ್‍ಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರಣ್ಯಪುರಂನಲ್ಲಿರುವ ಸಿವೇಜ್ ಫಾರಂನಲ್ಲಿ ಕಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ನಗರದ ವಿವಿಧೆಡೆಯಿರುವ 7 ಕಸ ವಿಂಗಡಣಾ ಘಟಕ ಕಾರ್ಯ ನಿರ್ವಹಿಸುತ್ತಿದ್ದು 38 ಟನ್ ಕಸ ವಿಂಗಡಣೆಯಾಗುತ್ತಿದೆ. ಮೈಸೂರು ವಿವಿಯ ಆವರಣದಲ್ಲಿ ಹಾಗೂ ಸರಸ್ವತಿಪುರಂನಲ್ಲಿರುವ ಘಟಕವನ್ನು ಶೀಘ್ರವೇ ಆರಂಭಿಸಲು ಕ್ರಮ ಕೈಗೊಳ್ಳಬೇಕು. ರಾಯನಕೆರೆ ಹಾಗೂ ಕೆಸರೆ ಘಟಕದಲ್ಲಿ 350 ಟನ್ ಕಸದಿಂದ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸುವುದಕ್ಕೆ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕಸಕ್ಕೆ ಕವರಿಂಗ್: ಸಿವೇಜ್ ಫಾರಂನಲ್ಲಿ ಸಂಗ್ರಹವಾಗಿರುವ 7 ಲಕ್ಷ ಟನ್ ಕಸದಿಂದ ಹೊರ ಸೂಸುವ ಕೆಟ್ಟ ವಾಸನೆಯಿಂದ ಜನರು ಎದುರಿಸುತ್ತಿರುವ ಸಮಸ್ಯೆಗೆ ಇತಿಶ್ರೀ ಹಾಡುವ ಕಾಲ ಸನ್ನಿಹಿತವಾಗುತ್ತಿದೆ. ಸಿವೇಜ್ ಫಾರಂನಲ್ಲಿರುವ 7 ಲಕ್ಷ ಟನ್ ಕಸವನ್ನು ಎರಡೂವರೆ ಎಕರೆ ಜಾಗದಲ್ಲಿ ಹೂಳುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕಸದಲ್ಲಿರುವ ನೀರಿನ ಅಂಶ ಹಾಗೂ ಪ್ಲಾಸ್ಟಿಕ್ ಬೇರ್ಪಡಿಸುವ ಕೆಲಸ ನಡೆಯುತ್ತಿದೆ. ಆಗಸ್ಟ್ 1ರಿಂದ ಕಸವನ್ನು ಹೂಳುವ ಕೆಲಸ ಆರಂಭವಾಗಲಿದ್ದು, ಅದರ ಮೇಲೆ ಗಿಡಗಳನ್ನು ನೆಡಲಾಗುತ್ತದೆ ಎಂದು ವಿವರಿಸಿದರು.

ಖಾಲಿ ನಿವೇಶನಗಳ ಸ್ವಚ್ಛತೆ: ಮೈಸೂರಿನ ವಿವಿಧೆಡೆ ಖಾಲಿ ಬಿಟ್ಟಿರುವ ನಿವೇಶನಗಳಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಗಿಡಗಂಟಿಗಳು ಬೆಳೆದುಕೊಂಡು ಹಾವು, ಚೇಳು ಸೇರಿದಂತೆ ಇನ್ನಿತರ ಕೀಟಗಳ ಆವಾಸ ಸ್ಥಾನವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಖಾಲಿ ಇರುವ ನಿವೇಶನಗಳ ಮಾಲೀಕರಿಂದ ಒಂದು ಚ.ಅಡಿಗೆ 2ರೂ ನಂತೆ ಹಣ ಕಟ್ಟಿಸಿಕೊಂಡು ಪಾಲಿಕೆಯ ವತಿಯಿಂದ ನಿವೇಶನ ಸ್ವಚ್ಛಗೊಳಿಸುವುದಕ್ಕೆ ಯಾವುದಾದರೂ ಏಜೆನ್ಸಿಗೆ ಜವಾಬ್ದಾರಿ ನೀಡಬೇಕು. ವರ್ಷಕ್ಕೆ ಎರಡು ಬಾರಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದರು.

ಕೆ.ಆರ್.ಕ್ಷೇತ್ರದಲ್ಲಿ ಹಲವು ಬಡಾವಣೆಗಳಲ್ಲಿ ಒಳಚರಂಡಿ ಮಾರ್ಗಗಳು ಅವೈಜ್ಞಾನಿಕವಾಗಿವೆ. ಕೆಲವೊಮ್ಮೆ ಕುಡಿಯುವ ನೀರಿನ ಸಂಪರ್ಕಕ್ಕೆ ಒಳಚರಂಡಿ ನೀರು ಸೇರುವ ಮೂಲಕ ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಒಳಚರಂಡಿ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‍ಲೈನ್‍ಗಳ ನಕ್ಷೆ ಸಿದ್ಧಪಡಿಸಿ, ನ್ಯೂನತೆಗಳನ್ನು ಸರಿ ಮಾಡುವಂತೆ ತಿಳಿಸಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿವಿಧ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ

ಶಾಸಕ ಎಸ್.ಎ.ರಾಮದಾಸ್ ಅವರ ಅಧ್ಯಕ್ಷತೆಯಲ್ಲಿ ಇಂದು ಕೆ.ಆರ್.ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ನಡೆಸಲಾಯಿತು. ಸಭೆಯಲ್ಲಿ ರಾಜಕಾಲುವೆ ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಬೋರ್‍ವೆಲ್‍ಗಳ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಯಾವುದಾದರೂ ಬೋರ್‍ವೆಲ್‍ನಿಂದ ಬಳಸಲು ಯೋಗ್ಯವಲ್ಲದ ನೀರು ಸರಬರಾಜಾಗುತ್ತಿದ್ದರೆ ಅಂತಹ ಬೋರ್‍ವೆಲ್‍ಗಳನ್ನು ಬಂದ್ ಮಾಡಲಾಗುತ್ತದೆ. ಅಲ್ಲದೆ ಕೆ.ಆರ್.ಕ್ಷೇತ್ರವನ್ನು ಮತ್ತೆ ಬೋರ್‍ವೆಲ್ ಮುಕ್ತ ಕ್ಷೇತ್ರವನ್ನಾಗಿ ಮಾಡುವುದಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಬೀದಿ ದೀಪಗಳನ್ನು ಬದಲಿಸಿ ಎಲ್‍ಇಡಿ ಲೈಟ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. – ಕೆ.ಹೆಚ್.ಜಗದೀಶ್, ಪಾಲಿಕೆ ಆಯುಕ್ತ

Translate »