ದ್ವಿತೀಯ ಪಿಯು ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಮೈಸೂರು

ದ್ವಿತೀಯ ಪಿಯು ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

October 30, 2018

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2019ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾ ಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಮಾರ್ಚ್ 1 ರಿಂದ ಮಾರ್ಚ್ 18ರವರೆಗೆ ಪರೀಕ್ಷೆಗಳು ನಡೆಯಲಿವೆ.

ಪ್ರಕಟಿತ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 28ರೊಳಗೆ ಕೇಂದ್ರ ಕಚೇರಿಗೆ ತಲುಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನ ವೆಬ್ ಸೈಟ್‍ನಲ್ಲಿ ತಿಳಿಸಿದೆ. ತಕರಾರು ಪಟ್ಟಿ ಪರಿಶೀಲನೆ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟವಾಗಲಿದೆ.

ತಾತ್ಕಾಲಿಕ ವೇಳಾಪಟ್ಟಿಯನ್ವಯ ಮಾ.1 ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್, 2ರಂದು ಮಾಹಿತಿ ತಂತ್ರಜ್ಞಾನ, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್‍ನೆಸ್, ರಿಟೇಲ್, 5ರಂದು ತಮಿಳು, ಮಲಯಾಳಂ, ತೆಲುಗು, ಮರಾಠಿ, ಅರೇಬಿಕ್, ಫ್ರೆಂಚ್, 6ರಂದು ಲಾಜಿಕ್, ಶಿಕ್ಷಣ, ಭೂ ವಿಜ್ಞಾನ, ಗೃಹ ವಿಜ್ಞಾನ, 7ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ, 8ರಂದು ಉರ್ದು, ಸಂಸ್ಕೃತ, 9ರಂದು ರಾಜಕೀಯ ಶಾಸ್ತ್ರ, ಸ್ಟಾಟಿಸ್ಟಿಕ್ಸ್, 11ರಂದು ಬ್ಯುಸಿನೆಸ್ ಸ್ಟಡೀಸ್, ಸಮಾಜಶಾಸ್ತ್ರ, ರಸಾಯನ ಶಾಸ್ತ್ರ, 12ರಂದು ಭೂಗೋಳ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, 13ರಂದು ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್,

ಕಂಪ್ಯೂಟರ್ ಸೈನ್ಸ್, 14ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ, 15ರಂದು ಹಿಂದಿ, 16ರಂದು ಕನ್ನಡ ಹಾಗೂ ಮಾ.18ರಂದು ಇಂಗ್ಲಿಷ್ ಪರೀಕ್ಷೆ ನಡೆಯಲಿದೆ.

ಸಿದ್ಧತೆ ನಡೆದಿದೆ: ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ದಯಾನಂದ್, ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾ ಗುತ್ತಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು 30 ಸಾವಿರ ವಿದ್ಯಾರ್ಥಿಗಳಿದ್ದರು. ಈ ಬಾರಿ ಸುಮಾರು 3 ಸಾವಿರ ಸಂಖ್ಯೆ ಹೆಚ್ಚಾಗಿದ್ದು, ಅಗತ್ಯವಿರುವ ಹೆಚ್ಚುವರಿ ಪರೀಕ್ಷಾ ಕೇಂದ್ರಗಳು, ಲಿಖಿತ ಪರೀಕ್ಷೆಗೂ ಮುನ್ನ ಪ್ರಾಯೋಗಿಕ ಪರೀಕ್ಷೆಗಳಿಗೆ ಅಗತ್ಯವಿರುವ ಕೇಂದ್ರಗಳು, ಮೇಲ್ವಿಚಾರಕರು ಹೀಗೆ ಪರೀಕ್ಷಾ ಸಂಬಂಧಿತ ಎಲ್ಲಾ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಹಾಗೆಯೇ ಕಳೆದ ಬಾರಿ 8 ಕೇಂದ್ರಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಸಲಾಗಿದ್ದು, ಈ ಬಾರಿ ಒಂದು ಹೆಚ್ಚುವರಿ ಕೇಂದ್ರ ತೆರೆಯಲು ಚಿಂತನೆ ನಡೆದಿದೆ ಎಂದು ತಿಳಿಸಿದರು. ಸದ್ಯ ಶೇ.50ರಷ್ಟು ಶೈಕ್ಷಣಿಕ ವರ್ಷ ಮುಗಿದಿದ್ದು, ದಸರಾ ಹಿನ್ನೆಲೆಯಲ್ಲಿ ಪಠ್ಯ ಬೋಧನೆಯಲ್ಲಿ ವ್ಯತ್ಯಯವಾಗಿದೆ. ಹಾಗಾಗಿ ವಿಶೇಷ ತರಗತಿ ಮೂಲಕ ಪಠ್ಯ ಬೋಧನೆ ಪೂರ್ಣಗೊಳಿಸುವುದರ ಜೊತೆಗೆ ಕಿರು ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ ಎಂದರು.

Translate »