ನಾಪತ್ತೆಯಾಗಿದ್ದ ಬಾಲಕ ಮಂಗಳಮುಖಿಯಾಗಿ ಪತ್ತೆ
ಮಂಡ್ಯ

ನಾಪತ್ತೆಯಾಗಿದ್ದ ಬಾಲಕ ಮಂಗಳಮುಖಿಯಾಗಿ ಪತ್ತೆ

October 30, 2018

ಕೆ.ಆರ್.ಪೇಟೆ, ಅ.29: ಎಂಟು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕನೊಬ್ಬ ತೃತೀಯ (ಮಂಗಳಮುಖಿ) ಲಿಂಗಿಯಾಗಿ ಬದಲಾಗಿ ಅಂಗಡಿಗಳಲ್ಲಿ ಭಿಕ್ಷಾಟನೆ ಮಾಡುವಾಗ ಸಿಕ್ಕಿ ಬಿದ್ದಿರುವ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.

ತಾಲೂಕಿನ ಗಾಮವೊಂದರ 16 ವರ್ಷದ ಬಾಲಕನೋರ್ವ ಬೆಂಗಳೂರಿನ ತಮ್ಮ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವಿದ್ಯಾನಗರದ ಬಿಬಿಎಂಪಿ ಸರ್ಕಾರಿ ಹೈಸ್ಕೂಲ್‍ನಲ್ಲಿ ಎಸ್‍ಎಸ್ಎಲ್‍ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಆದರೆ ಕಳೆದ 8 ತಿಂಗಳ ಹಿಂದೆ ಮನೆಗೆ ಬಂದಿದ್ದ ಬಾಲಕನನ್ನು ಪೋಷಕರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣಕ್ಕೆ ಕರೆತಂದು ಬೆಂಗಳೂರಿನ ಬಸ್ ಹತ್ತಿಸಿ ಕಳುಹಿಸಿದ್ದರು. ಆದರೆ ಬಾಲಕ ಬೆಂಗಳೂರಿನ ತನ್ನ ಚಿಕ್ಕಮ್ಮನ ಮನೆಗೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಪೋಷಕರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಗ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು. ಪಕರಣ ಕೂಡ ದಾಖಲಾಗಿತ್ತು.

ಆದರೆ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ಬಾಲಕ ಪಟ್ಟಣದ ಟಿಬಿ ವೃತ್ತದಲ್ಲಿ ಇಬ್ಬರು ತೃತೀಯ ಲಿಂಗಿಗಳೊಂದಿಗೆ ಆ ಬಾಲಕ ಕೂಡ ತೃತೀಯ ಲಿಂಗಿಯಾಗಿ ಬದಲಾಗಿ ಅಂಗಡಿಗಳಲ್ಲಿ ಭಿಕ್ಷಾಟನೆ ಮಾಡುವಾಗ ಅದೇ ಗ್ರಾಮದ ಮಂಜು ಎಂಬುವರಿಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ವಿಚಾರಿಸಲು ಮುಂದಾದಾಗ ಬಾಲಕ ಇಬ್ಬರು ತೃತೀಯ ಲಿಂಗಿಗಳನ್ನು ಕರೆದುಕೊಂಡು ಆಟೋದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆಟೋ ಹಿಂಬಾಲಿಸಿದ ಮಂಜು ಹೊಸ ಕಿಕ್ಕೇರಿ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿ ಪಟ್ಟಣದ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಷಯ ತಿಳಿದ ಬಾಲಕನ ಪೋಷಕರು ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿ ನಮ್ಮ ಮಗನನ್ನು ಅಪಹರಿಸಿ ತೃತೀಯ ಲಿಂಗಿಯಾಗಿ ಬದಲಾಯಿಸಿದ್ದಾರೆ ಎಂದು ಪೊಲೀಸರ ಮುಂದೆ ಆರೋಪಿಸಿದ್ದಾರೆ.

ಇಬ್ಬರು ತೃತೀಯ ಲಿಂಗಿಗಳು ಕೆ.ಆರ್.ಪೇಟೆ ಪೊಲೀಸರ ವಶದಲ್ಲಿದ್ದು, ಬಾಲಕ ಅಪ್ರಾಪ್ತನಾಗಿರುವುದರಿಂದ ಆತನನ್ನು ಮೈಸೂರಿನ ತೃತೀಯ ಲಿಂಗಿ ಬಾಲಮಂದಿರದಲ್ಲಿ ಇರಿಸಲಾಗಿದೆ. ಅ.30ರಂದು ಮಂಡ್ಯಕ್ಕೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಅಲ್ಲದೇ ತೃತೀಯ ಲಿಂಗಿಯಾಗಿ ಪರಿವರ್ತಿಸಿರುವುದು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣದ ಠಾಣೆಯ ಎಸ್‍ಐ ಹೆಚ್.ಎಸ್.ವೆಂಕಟೇಶ್ ತಿಳಿಸಿದ್ದಾರೆ.

Translate »