ಅಚ್ಚರಿ ಮೂಡಿಸಿದ ದೋಸೆ, ಮುದ್ದೆ, ನಿಂಬೆ ಹಣ್ಣು ಹೋಳು ಮಾಡುವ, ಸಿರಿಧಾನ್ಯ, ಕಾಫಿ ಬೀಜ ಹುರಿಯುವ ಯಂತ್ರಗಳು
ಮೈಸೂರು

ಅಚ್ಚರಿ ಮೂಡಿಸಿದ ದೋಸೆ, ಮುದ್ದೆ, ನಿಂಬೆ ಹಣ್ಣು ಹೋಳು ಮಾಡುವ, ಸಿರಿಧಾನ್ಯ, ಕಾಫಿ ಬೀಜ ಹುರಿಯುವ ಯಂತ್ರಗಳು

October 30, 2018

ಮೈಸೂರು:  ಸಿಎಫ್‌ಟಿಆರ್‌ಐನ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿರುವ ಮುಕ್ತದಿನ ಕಾರ್ಯಕ್ರಮದಲ್ಲಿ ದೋಸೆ-ಮುದ್ದೆ ತಯಾರಿಸುವ, ನಿಂಬೆಹಣ್ಣು ಹೋಳು ಮಾಡುವ, ಸಿರಿ ಧಾನ್ಯ-ಕಾಫಿ ಬೀಜ ಹುರಿಯುವ ಹಾಗೂ ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರೋಪಕರಣಗಳು, ಆಹಾರ ಉತ್ಪನ್ನಗಳು ಅನಾವರಣಗೊಂಡಿದ್ದು, ಜನರ ಮೆಚ್ಚುಗೆಗೂ ಪಾತ್ರವಾದವು.

ಸಾಮಾನ್ಯ ದಿನಗಳಲ್ಲಿ ಸಿಎಫ್‌ಟಿಆರ್‌ಐಗೆ ಸಾರ್ವಜನಿಕರ ಪ್ರವೇಶ ನಿಷಿದ್ಧ. ಆದರೆ, ಮುಕ್ತ ದಿನದ ಅಂಗವಾಗಿ ಸಂಸ್ಥೆಗೆ ಮುಕ್ತ ಪ್ರವೇಶ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧ ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ, ನಾಗರಿಕರು ಭೇಟಿ ನೀಡಿ ಬಗೆ-ಬಗೆಯ ಆಹಾರ ಉತ್ಪನ್ನಗಳು, ಯಂತ್ರಗಳ ಬಗ್ಗೆ ಮಾಹಿತಿ ಪಡೆದರು.

ಆಹಾರ ಎಂಜಿನಿಯರಿಂಗ್ ವಿಭಾಗ ನೂತನವಾಗಿ ನಿರ್ಮಿಸಿರುವ ರಾಗಿ ಮುದ್ದೆ ತಯಾರಿಸುವ ಯಂತ್ರ ಜನರ ಆಕರ್ಷಣೆಯ ಕೇಂದ್ರವಾಗಿತ್ತು. ಇದು ಗಂಟೆಗೆ 25 ಕೆ.ಜಿ.ರಾಗಿ ಹಿಟ್ಟು-ನೀರನ್ನು ಬಳಸಿಕೊಂಡು 210 ಗ್ರಾಂನ 300 ರಾಗಿ ಮುದ್ದೆಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಸೋಮವಾರ ಮಧ್ಯಾಹ್ನ ಆರಂಭವಾದ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು-ಸಾರ್ವಜನಿಕರು ಆಗಮಿಸಿದ್ದರಿಂದ 170 ಗ್ರಾಂ ತೂಕದ ಮುದ್ದೆಗಳನ್ನು ತಯಾ ರಿಸಿ, ಸಾರ್ವಜನಿಕರಿಗೆ ಉಣಬಡಿಸಿದರು.

ಗಮನ ಸೆಳೆದ ದೋಸೆ-ರಾಗಿ ಮುದ್ದೆ ಯಂತ್ರ: ದೋಸೆ ತಯಾರಿಸುವ ಯಂತ್ರವು ಗಂಟೆಗೆ 400 ದೋಸೆಗಳನ್ನು ತಯಾರಿಸುವ ಸಾಮಥ್ರ್ಯವನ್ನು ಹೊಂದಿದ್ದು, ಸಾರ್ವಜನಿಕರು ದೋಸೆ ಸವಿದರು. ಜತೆಗೆ 4.50 ಲಕ್ಷ ರೂ. ಮೌಲ್ಯದ ರಾಗಿ ಮುದ್ದೆ ತಯಾರಿಸುವ, 6 ಸಾವಿರ ರೂ.ಮೌಲ್ಯದ ನಿಂಬೆ ಹಣ್ಣು ಹೋಳು ಮಾಡುವ ಯಂತ್ರ, ವಿಜ್ಞಾನ ಸಂಶೋಧನೆಗೆ ಬೇಕಾದ ಗ್ಲಾಸ್‍ನ ಪರಿಕರ ಗಳು ಸೇರಿದಂತೆ ಮತ್ತಿತರೆ ಆಹಾರ ಸಂಬಂ ಧಿತ ತಂತ್ರಜ್ಞಾನಗಳನ್ನು ಕಣ್ತುಂಬಿಕೊಂಡರು.

ಸಿಎಫ್‌ಟಿಆರ್‌ಐನ ವಿನ್ಯಾಸ ಹಾಗೂ ನಿರ್ಮಾಣ ವಿಭಾಗವು ನಿರ್ಮಿಸಿರುವ ಬಿಸಿ ಗಾಳಿಯಿಂದಲೇ ಕಾಳು-ಕಾಫಿಬೀಜ ಹುರಿಯುವ ಯಂತ್ರ ಆಕರ್ಷಣೀಯವಾಗಿದ್ದು, ಇದರ ಮೌಲ್ಯ 1.50 ಲಕ್ಷ ರೂ.ಗಳಾಗಿದೆ. ಇದು 15 ನಿಮಿಷದಲ್ಲಿ ಅರ್ಧ ಕೆಜಿ ಕಾಫಿ ಪುಡಿ ಹಾಗೂ ಕಡಲೇಕಾಯಿ ಬೀಜವನ್ನು ಹದವಾಗಿ ಹುರಿಯುತ್ತದೆ. ಸ್ಥಳದಲ್ಲೇ ಕಡಲೆಕಾಯಿ ಬೀಜ ಹುರಿದು, ಮಸಾಲೆ ಸೇರಿಸಿ ಸಾರ್ವಜನಿಕರಿಗೆ ನೀಡುತ್ತಿದ್ದರು. ಇದು ತಿಂಡಿಪ್ರಿಯರು ಸವಿದರು.

ಸೋಡಾಮಿಶ್ರಿತ ನೀರಿನ ಹಣ್ಣಿನ ರಸ: ಕಿತ್ತಲೆ, ಮಾವು, ದಾಳಿಂಬೆ, ಸೀಬೆ, ದ್ರಾಕ್ಷಿ, ಸೇಬು ಹಣ್ಣಿನ ರಸವನ್ನು ತಯಾರಿಸುವ ವಿಧಾನಗಳು. ಹಣ್ಣುಗಳ ರಸ ತೆಗೆದು ಅದಕ್ಕೆ ಕಾರ್ಬೊನೇಟೆಡ್ ನೀರನ್ನು (ಸೋಡಾ ಮಿಶ್ರಿತ ನೀರು) ಸೇರಿಸಿ ಬಾಟಲಿಗೆ ಸೇರಿಸುವ ವಿಧಾನಗಳನ್ನು ಪ್ರದರ್ಶಿಸಲಾಗಿತ್ತು. ಉಳಿದಂತೆರಾಗಿ ಬಿಸ್ಕೆಟ್-ಚಕ್ಕುಲಿ, ಬೇಕರಿ ಪದಾರ್ಥ ಗಳು, ಸಿರಿಧಾನ್ಯಗಳ ಆಹಾರ ಪದಾರ್ಥ ಗಳು, ಮೊಟ್ಟೆಯಿಂದ ತಯಾರಿಸಿದ ಒಣ ಆಹಾರ ಉತ್ಪನ್ನಗಳು, ಫುಡ್‍ಪ್ಯಾಕ್ ಮಾಡುವ ವಿಧಾನಗಳು, ಪ್ರೋಟೀನ್‍ಯುಕ್ತ ಆಹಾರ ಸೇವೆಯಿಂದ ಆಗುವ ಅನುಕೂಲ-ಅನಾನು ಕೂಲಗಳು ಸೇರಿದಂತೆ ಮತ್ತಿತರೆ ಆಹಾರನ್ನು ತಯಾರಿಸುವ ತಂತ್ರಜ್ಞಾನಗಳು ಗಮನ ಸೆಳೆದವು.

ಸಾವಿರಾರು ಮಂದಿ ವೀಕ್ಷಣೆ: ಇಂದು ಮಧ್ಯಾಹ್ನ 2ರಿಂದ 6.30 ರವರೆಗೆ ಅಂದರೆ, 4 ಗಂಟೆಗಳ ಅವಧಿಯಲ್ಲಿ ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿ ಗಳು, ಸಾರ್ವಜನಿಕರು ವೀಕ್ಷಿಸಿದರು.

ಸ್ನೇಹಿತರೊಂದಿಗೆ ಸೆಲ್ಫಿ: ವಿವಿಧ ಯಂತ್ರೋ ಪಕರಣ, ಆಹಾರ ಉತ್ಪನ್ನಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು-ಸಾರ್ವಜನಿಕರು, ಸಿಎಫ್‌ಟಿಆರ್‌ಐ ಮುಂಭಾಗದ ಉದ್ಯಾನವನ ದಲ್ಲಿ ಸ್ನೇಹಿತರು-ಕುಟುಂಬದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದರು.

ಎಲ್ಲರ ಗಮನಸೆಳೆದ ಪೆಡಲ್ ಚಾಲಿತ ಸಿರಿಧಾನ್ಯ ಹೊಟ್ಟು ತೆಗೆಯುವ ಯಂತ್ರ

ಮೈಸೂರು:  ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರವು ಮುಕ್ತ ದಿನದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದು, ಇದು 2018ರ ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಆಹಾರವಿಜ್ಞಾನ ಮತ್ತು ಸಂಶೋಧನಾ ಸಮ್ಮೇಳನದಲ್ಲಿ ಬಹುಮಾನ ತನ್ನದಾಗಿಸಿಕೊಂಡಿದೆ.

ಸಿಎಫ್‌ಟಿಆರ್‌ಐನ ಧಾನ್ಯ ವಿಜ್ಞಾನ ಮತ್ತು ತಂತ್ರ ಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ್ ಮತ್ತು ತಾಂತ್ರಿಕ ಅಧಿಕಾರಿ ಮೊಹಮ್ಮದ್ ಶಕೀಬ್ ರವರು ಅಭಿವೃದ್ಧಿಪಡಿಸಿರುವ ಪೆಡಲ್ ಚಾಲಿತ ಸಿರಿ ಧಾನ್ಯಗಳ ಹೊಟ್ಟು ತೆಗೆಯುವ ಯಂತ್ರವನ್ನು ಮುಂಬೈ ನಲ್ಲಿ ನಡೆದ ಸಮ್ಮೇಳನದಲ್ಲಿ ಪ್ರದರ್ಶಿಸಲಾ ಗಿತ್ತು. ಇಲ್ಲಿ ವಿವಿಧ 33 ದೇಶಗಳಿಂದ 2 ಸಾವಿರಕ್ಕೂ ಹೆಚ್ಚು ತಂತ್ರಜ್ಞಾನಗಳು ಪ್ರದರ್ಶನವಾಗಿದ್ದವು. ಅವು ಗಳಲ್ಲಿ ಮೈಸೂರಿನ ಈ ಯಂತ್ರಕ್ಕೆ ಬಹುಮಾನ ಲಭಿಸಿದೆ.

ಕಾರ್ಯ ವಿಧಾನ: ಪೆಡಲ್ ಚಾಲಿತ ಸಿರಿಧಾನ್ಯಗಳ ಹೊಟ್ಟು ತೆಗೆಯುವ ಯಂತ್ರದಲ್ಲಿ ಪೆಡಲ್, ಬ್ಲೋವರ್ ಹಾಗೂ ಪ್ರತ್ಯೇಕಗೊಳಿಸುವ ಕೊಳವೆ ಹೀಗೆ 3 ಭಾಗಗಳಿವೆ. ಪೆಡಲ್ ತುಳಿಯುತ್ತಿದ್ದಂತೆ, ಅದಕ್ಕೆ ಜೋಡಿಸಿರುವ ಚಿಕ್ಕ ಫ್ಯಾನ್ ತಿರುಗಲು ಆರಂಭವಾಗುತ್ತದೆ. ಅದರ ಮೇಲ್ಭಾಗದಲ್ಲಿ ರುವ ಚಿಕ್ಕದಾದ ಕಿಂಡಿಯಿದ್ದು, ಅದಕ್ಕೆ ಕಾಳನ್ನು ಸುರಿದರೆ ಕಾಳು ಮತ್ತು ಹೊಟ್ಟು ಬೇರ್ಪಡುತ್ತದೆ. ಅಲ್ಲದೆ, ಮಹಿಳೆಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗೇರ್‍ನ ಸೌಲಭ್ಯ ವನ್ನು ಕಲ್ಪಿಸಲಾಗಿದೆ. ಇದು ಉಚಿತ ತಂತ್ರ ಜ್ಞಾನವಾಗಿದ್ದು, ಸಿಎಫ್‍ಟಿ ಆರ್‍ಐನ ವೆಬ್‍ಸೈಟ್‍ನಲ್ಲಿ ಇದರ ತಂತ್ರಜ್ಞಾನವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

Translate »