ಸೋಮವಾರಪೇಟೆ ಸುತ್ತಮುತ್ತ ಸರಣಿ ಕಳ್ಳತನ
ಕೊಡಗು

ಸೋಮವಾರಪೇಟೆ ಸುತ್ತಮುತ್ತ ಸರಣಿ ಕಳ್ಳತನ

June 26, 2018

ಸೋಮವಾರಪೇಟೆ: ಭಾನುವಾರ ರಾತ್ರಿ ಪಟ್ಟಣ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಸರಣಿ ಕಳ್ಳತನವಾಗಿದ್ದು, ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಠಿಯಾಗಿದೆ.

ಭಾನುವಾರ ಬೆಳಗ್ಗಿನ ಜಾವ 4 ಗಂಟೆಯ ಸಮಯದಲ್ಲಿ ಪಟ್ಟಣಕ್ಕೆ ಸಮೀಪದ ಬಿಟಿಸಿಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲರ ಕೊಠಡಿಯ ಬೀಗವನ್ನು ಒಡೆದು ಒಳನುಗ್ಗಿದ ಕಳ್ಳರು ಲಾಕರ್ ಒಡೆಯುವ ಪ್ರಯತ್ನ ಮಾಡಿದ್ದಾರೆ. ಶಬ್ದದಿಂದ ಅನು ಮಾನಗೊಂಡ ವಾಚ್‍ಮನ್ ಬೊಬ್ಬೆಹೊಡೆದ ಸಂದರ್ಭ, ವಿಚಲಿತ ನಾದ ಕಳ್ಳ, ಡ್ರಾಯರ್‍ನಲ್ಲಿದ್ದ 250 ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಕಳ್ಳನ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದರು. ವೃತ್ತನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ಸೋಮೇಶ್ವರ ದೇವಾಲಯಕ್ಕೆ ಹೆಂಚು ತೆಗೆದು ನುಗ್ಗಿದ್ದ ಕಳ್ಳ ಹುಂಡಿ ತಡಕಾಡಿ ಬರಿಗೈಲಿ ತೆರಳಿದ್ದಾನೆ. ಅಗಾಗ್ಗೆ ದೇವಾಲಯದಲ್ಲಿ ಕಳ್ಳತನವಾಗುತ್ತಿರುವುದರಿಂದ ಬೇಸತ್ತ ಆಡಳಿತ ಮಂಡಳಿ ವಾರಕೊಮ್ಮೆ ಹುಂಡಿ ಹಣವನ್ನು ತೆಗೆಯುತ್ತಿ ದ್ದಾರೆ. ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಕಳ್ಳನ ಕೈಚಳಕ ಸೆರೆಯಾಗಿದೆ.

ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಶನಿವಾರ ರಾತ್ರಿ ಇಬ್ಬರು ಕಳ್ಳರು ನುಗ್ಗಿದ್ದಾರೆ. ದೇವಿಯ ವಿಗ್ರಹದಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಸರದೊಂದಿಗೆ ಹುಂಡಿ ಹಣವನ್ನು ಕದ್ದೊಯ್ದಿ ದ್ದಾರೆ. ಅಲ್ಲಿನ ಹುಲಿಬಸವೇಶ್ವರ ದೇವಾಲಯಕ್ಕೂ ನುಗ್ಗಿ ಕಾಣಿಕೆ ಹುಂಡಿಯನ್ನು ತೆಗೆದುಕೊಂಡು ಹೋಗಿದ್ದಾರೆ.

ಸರಣಿ ಕಳ್ಳತನವನ್ನು ಒಂದೇ ತಂಡ ಮಾಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕಳ್ಳರ ತಂಡ ಒಂದೇ ರಾತ್ರಿಯಲ್ಲಿ ಕುಶಾಲನಗರದಿಂದ ಕೊಡ್ಲಿಪೇಟೆವರಗೆ ಹತ್ತಾರು ಅಂಗಡಿಗಳ ಶೆಟರ್ಸ್ ಮೀಟಿ ಅಂಗಡಿ ಒಳಗೆ ನುಗ್ಗಿ ಹಣವನ್ನು ದೋಚಿದ್ದರು. ಆದರೆ ಇದುವರಗೆ ಕಳ್ಳರ ಬಂಧನವಾಗಿಲ್ಲ. ಮತ್ತೆ ಸರಣಿ ಕಳ್ಳತನದಿಂದ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.

Translate »