ಶೂಟೌಟ್ ಪ್ರಕರಣ: ಸಿಐಡಿ ತನಿಖೆ
ಮೈಸೂರು

ಶೂಟೌಟ್ ಪ್ರಕರಣ: ಸಿಐಡಿ ತನಿಖೆ

May 18, 2019

ಮೈಸೂರು: ಗುರುವಾರ ಮೈಸೂರಿನಲ್ಲಿ ನಡೆದ ಶೂಟೌಟ್‍ನಲ್ಲಿ ಓರ್ವ ಬಲಿಯಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಇಂದು ಬೆಳಿಗ್ಗೆಯೇ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದ ಸಿಐಡಿ ತಂಡದ ಅಧಿಕಾರಿಗಳು ಮೈಸೂರಿಗೆ ಆಗಮಿಸಿದ್ದು, ಪ್ರಕರಣ ದಾಖಲಾಗಿರುವ ವಿಜಯನಗರ ಠಾಣೆಯಲ್ಲಿ ಸಂಬಂಧಿಸಿದ ದಾಖಲೆಗಳನ್ನು ಪಡೆದಿರುವ ಅವರು, ಠಾಣಾಧಿಕಾರಿಗಳಿಂದ ಘಟನೆ ಕುರಿತಂತೆ ಮಾಹಿತಿ ಸಂಗ್ರಹಿಸಿದರು.

ಪ್ರಕರಣದ ಸಂಬಂಧ ದೂರು ನೀಡಿರುವ ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್, ಬಾತ್ಮೀದಾರನೆನ್ನಲಾದ ವಿಜಯಕುಮಾರ್, ಘಟನೆ ನಡೆದಾಗ ಜೊತೆಯಲ್ಲಿದ್ದ ಎಎಸ್‍ಐ, ಇನ್ನಿತರೆ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿ, ಪ್ರಾಥಮಿಕ ಹಂತದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳಿಗೆ ಉಳಿದುಕೊಳ್ಳಲು ಹೋಟೆಲಿನಲ್ಲಿ ಕೊಠಡಿಗಳನ್ನು ವ್ಯವಸ್ಥೆ ಮಾಡಿಕೊಡಲಾಗಿದೆ. ಡಿಸಿಪಿ ಎಂ.ಮುತ್ತುರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇಂದು ವಿಜಯನಗರ ಠಾಣೆಯಲ್ಲಿ ಸಿಐಡಿ ಅಧಿಕಾರಿಗಳಿಗೆ ಶೂಟೌಟ್ ಪ್ರಕರಣ ಸಂಬಂಧ ಲಭ್ಯವಿರುವ ದಾಖಲಾತಿ ಹಾಗೂ ಮಾಹಿತಿಗಳನ್ನು ಹಸ್ತಾಂತರಿಸಿದರಲ್ಲದೆ, ಕೃತ್ಯಕ್ಕೆ ಬಳಸಿರುವ ಸೇವಾ ರೈಫಲ್ ಅನ್ನು ಒದಗಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುತ್ತಿದ್ದಂತೆಯೇ ದೂರುದಾರರಾದ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಅನಾರೋಗ್ಯ ಕಾರಣದಿಂದ ಇಂದು ಬೆಳಿಗ್ಗೆ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.

Translate »