ಸುಕ್ವಿಂದರ್ ಮೃತದೇಹವಿರುವ ಶವಾಗಾರಕ್ಕೆ ಭಾರೀ ಭದ್ರತೆ
ಮೈಸೂರು

ಸುಕ್ವಿಂದರ್ ಮೃತದೇಹವಿರುವ ಶವಾಗಾರಕ್ಕೆ ಭಾರೀ ಭದ್ರತೆ

May 18, 2019

ಮೈಸೂರು: ಪೊಲೀಸರ ಶೂಟೌಟ್‍ಗೆ ಬಲಿಯಾಗಿರುವ ಪಂಜಾಬ್ ಮೂಲದವನೆನ್ನಲಾದ ಸುಕ್ವಿಂ ದರ್ ದೇಹವಿರಿಸಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಗುರುವಾರ ಮಧ್ಯಾಹ್ನ 2.30 ಗಂಟೆ ವೇಳೆಗೆ ಕೆ.ಆರ್. ಆಸ್ಪತ್ರೆ ಅಪಘಾತ ತುರ್ತು ಚಿಕಿತ್ಸಾ ವಿಭಾಗ ದಿಂದ ಸುಕ್ವಿಂದರ್ ದೇಹವನ್ನು ಪೊಲೀಸ್ ಸರ್ಪಗಾವಲಿನಲ್ಲಿ ಆಂಬುಲೆನ್ಸ್ ಮೂಲಕ ಶವಾಗಾರಕ್ಕೆ ಸ್ಥಳಾಂತರ ಮಾಡಿ, ಮಂಡಿ ಠಾಣೆ ಇನ್ಸ್‍ಪೆಕ್ಟರ್ ಬಸವರಾಜು ನೇತೃತ್ವದಲ್ಲಿ ದಿನದ 24 ಗಂಟೆಯೂ ಬಂದೋಬಸ್ತ್ ವ್ಯವಸ್ಥೆಗಾಗಿ 3 ಪಾಳಿಯಲ್ಲಿ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. 1 ಸಿಎಆರ್ ತುಕಡಿ ಯನ್ನು ನಿಯೋಜಿಸಲಾಗಿದ್ದು, ಪಂಜಾಬಿನಿಂದ ಸುಕ್ವಿಂದರ್ ಸಂಬಂಧಿಕರು ಬರುತ್ತಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಇಂದು ಮಧ್ಯಾಹ್ನ ಮತ್ತಷ್ಟು ಸಿಬ್ಬಂದಿ ನಿಯೋಜಿಸಿ ಬ್ಯಾರಿ ಕೇಡ್ ಹಾಕಿ ಕಟ್ಟೆಚ್ಚರ ವಹಿಸಲಾಗಿದೆ. ದೇವರಾಜ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಶವಾಗಾರದ ಬಳಿಗೆ ತೆರಳಿ ಸುಕ್ವಿಂದರ್ ದೇಹದ ಮರಣೋತ್ತರ ಪರೀಕ್ಷೆ ನಡೆದು ದೇಹವನ್ನು ವಾರಸುದಾರ ರಿಗೆ ಒಪ್ಪಿಸುವವರೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಮೇಲ್ವಿಚಾರಣೆ ನಡೆಸಿದರು.

ಸುಕ್ವಿಂದರ್ ಹಿನ್ನೆಲೆ ಕೋರಿ ಫರೀದಕೋಟ್ ಎಸ್ಪಿಗೆ ಮೈಸೂರು ಪೊಲೀಸ್ ಆಯುಕ್ತರ ಪತ್ರ

ಅಮಾನ್ಯೀಕರಣ ಗೊಂಡ ಹಳೆಯ ನೋಟುಗಳ ಬದಲಾವಣೆ ವೇಳೆ ನಡೆದ ಪೊಲೀಸ್ ಶೂಟೌಟ್ ಪ್ರಕರಣದಲ್ಲಿ ಬಲಿ ಯಾದ ಸುಕ್ವಿಂದರ್ ಎಂಬ ವ್ಯಕ್ತಿಯ ಅಪರಾಧ ಹಿನ್ನೆಲೆ ಮಾಹಿತಿ ಕೋರಿ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಗುರುವಾರ ರಾತ್ರಿ ಫರೀದಕೋಟ್ ಜಿಲ್ಲೆಯ ಎಸ್ಪಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಗುರುವಾರ ಸಂಜೆ ಇ-ಮೇಲ್ ಮಾಡಲಾಗಿದ್ದು, ಮೈಸೂರಿನ ವಿಜಯ ನಗರ ಪೊಲೀಸ್ ಠಾಣಾ ಸರಹದ್ದಿನ ಹೆಬ್ಬಾಳು ಬಳಿ ರಿಂಗ್ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ಸುಕ್ವಿಂದರ್ ತನ್ನಿಬ್ಬರು ಸಹಚರರೊಂದಿಗೆ ಅಮಾನ್ಯೀಕರಣಗೊಂಡಿದ್ದ ಹಳೇ ನೋಟುಗಳನ್ನು ಬದಲಾಯಿ ಸುವ ದಂಧೆಯಲ್ಲಿ ತೊಡಗಿದ್ದಾಗ ದಾಳಿ ನಡೆಸಿದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ನಡೆದ ಶೂಟೌಟ್‍ನಲ್ಲಿ ಆತ ಬಲಿಯಾಗಿದ್ದಾನೆ. ಅದರ ಬಗ್ಗೆ ಸಂಬಂಧಿಕರಿಗೆ ಫರೀದಕೋಟ್ ಪೊಲೀಸರ ಮೂಲಕ ಮಾಹಿತಿ ರವಾನಿಸ ಲಾಗಿದೆ ಎಂದು ಇ-ಮೇಲ್ ಪತ್ರದಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.

ಫರೀದಕೋಟ್ ಹಾಗೂ ಸುತ್ತಲಿನ ಜಿಲ್ಲೆಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಕ್ವಿಂದರ್ ಯಾವು ದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ, ಹಣ ವಿನಿಮಯ ಅಥವಾ ಹಣ ದ್ವಿಗುಣಗೊಳಿಸುವ ಪ್ರಕರಣಗಳಲ್ಲಿದ್ದಾನೆಯೇ ಅಥವಾ ರೌಡಿ ಚಟುವಟಿಕೆ ಗಳ ಹಿನ್ನೆಲೆಯಿದೆಯೇ ಎಂಬುದರ ಬಗ್ಗೆ ಮಾಹಿತಿ ಒದಗಿಸುವಂತೆ ಪೊಲೀಸ್ ಆಯುಕ್ತರು ಕೋರಿದ್ದಾರೆ ಎಂದು ಹೇಳಲಾಗಿದೆ. ಮೈಸೂರು ಪ್ರಕರಣದ ತನಿಖೆಗಾಗಿ ಸುಕ್ವಿಂದರ್ ಹಿನ್ನೆಲೆ ಹಾಗೂ ಅಪರಾಧ ಚಟುವಟಿಕೆಗಳ ಮಾಹಿತಿ ತುರ್ತಾಗಿ ಅಗತ್ಯವಾಗಿದೆ ಎಂದು ಪೊಲೀಸ್ ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »