ಅಲ್ಪಾವಧಿ ಉಚಿತ ಕೌಶಲ್ಯ ತರಬೇತಿ ಶಿಬಿರ
ಮೈಸೂರು

ಅಲ್ಪಾವಧಿ ಉಚಿತ ಕೌಶಲ್ಯ ತರಬೇತಿ ಶಿಬಿರ

May 30, 2018

ಮೈಸೂರು: ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಸಲುವಾಗಿ ಎನ್‍ಐಇ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ರಾಷ್ಟ್ರೀಯ ಕೌಶಲ್ಯ ತರಬೇತಿ ಯೋಜನೆಯಡಿಯಲ್ಲಿ `ಅಲ್ಪಾವಧಿಯ ಉಚಿತ ಕೌಶಲ್ಯ ತರಬೇತಿ ಶಿಬಿರ’ ನಡೆಸಲು ಉದ್ದೇಶಿಸಲಾಗಿದೆ ಎಂದು ಎನ್‍ಐಇ ಸೊಸೈಟಿ ಅಧ್ಯಕ್ಷ ಶ್ರೀನಾಥ್ ಬಾಟ್ನಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕಲ್ಪಿಸಲು ಮೂರರಿಂದ ಆರು ತಿಂಗಳ ಅವಧಿಯ ನಾಲ್ಕು ವಿಷಯಗಳಲ್ಲಿ ಕೌಶಲ್ಯ ತರಬೇತಿ ಶಿಬಿರಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ. 8ನೇ ತರಗತಿ ತೇರ್ಗಡೆ ಹೊಂದಿರುವ ನಿರುದ್ಯೋಗಿ ಯುವಕರು ಕೌಶಲ್ಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಜೂ.1ರಿಂದ ಆರಂಭವಾಗಲಿರುವ ಶಿಬಿರದಲ್ಲಿ ಎಲೆಕ್ಟ್ರಾನಿಕ್ ವೈರ್‍ಮೆನ್ ಕಂಟ್ರೋಲ್ ಪ್ಯಾನೆಲ್, ಕಂಪ್ಯೂಟರ್ ಹಾರ್ಡ್‍ವೇರ್ ಅಂಡ್ ನೆಟ್‍ವರ್ಕಿಂಗ್, ಆಟೋಮೋಟಿವ್ ಸರ್ವಿಸ್ ಟೆಕ್ನೀಷಿಯನ್, ರೆಫ್ರಿಜರೇಷನ್, ವಾಷಿಂಗ್ ಮೆಷನ್ ರಿಪೈರ್ ಟೆಕ್ನೀಷಿಯನ್ ವೃತ್ತಿ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳಲಿರುವವರಿಗೆ ಕೇಂದ್ರ ಸರ್ಕಾರದ ಕೌಶಲ್ಯ ತರಬೇತಿ ಇಲಾಖೆ ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದರಿಂದ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್‍ಗಳಿಂದ ಸಾಲ ಪಡೆಯಬಹುದಾಗಿದೆ ಎಂದು ಹೇಳಿದ ಅವರು, ಒಟ್ಟು 4 ಬ್ಯಾಚ್‍ಗಳಲ್ಲಿ ಶಿಬಿರ ನಡೆಯಲಿದ್ದು, ಮೊದಲ ಬ್ಯಾಚ್‍ನ ಖರ್ಚು ವೆಚ್ಚವನ್ನು ಎನ್‍ಐಇನ ಹಳೆಯ ವಿದ್ಯಾರ್ಥಿಗಳು ಭರಿಸಲಿದ್ದಾರೆ. ಆಸಕ್ತರು ಹೆಚ್ಚಿನ ವಿವರಗಳಿಗೆ 0821- 2480137, 2972237 ಸಂಪರ್ಕಿಸುವಂತೆ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಎನ್‍ಐಇ ಸೊಸೈಟಿ ಪದಾಧಿಕಾರಿಗಳಾದ ಜಿ.ಎಸ್. ರಾಮಚಂದ್ರ, ಶ್ರೀಕಂಠಯ್ಯ, ಮಲ್ಲರಾಜೇ ಅರಸ್, ಟಿ.ಕೆ. ಚಿತ್ತರಂಜನ್ ಇದ್ದರು.

Translate »