ಅತಿಥಿ ಉಪನ್ಯಾಸಕರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಿದ್ದರೆ ಕೋರ್ಟ್ ಮೊರೆ
ಮೈಸೂರು

ಅತಿಥಿ ಉಪನ್ಯಾಸಕರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಿದ್ದರೆ ಕೋರ್ಟ್ ಮೊರೆ

May 30, 2018

ಮೈಸೂರು: ಜೂನ್ 8ರಂದು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಮತದಾನ ಹಕ್ಕು ಮೊಟಕುಗೊಳಿಸಲಾಗಿದ್ದರೂ ಮತದಾರರ ಪಟ್ಟಿಯಿಂದ ಅತಿಥಿ ಉಪನ್ಯಾಸಕರ ಹೆಸರುಗಳನ್ನು ತೆಗೆದು ಹಾಕಿಲ್ಲ. ಕೂಡಲೇ ಮತದಾರರ ಪಟ್ಟಿಯನ್ನು ಪರಿಷ್ಕರಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಿ ಚುನಾವಣೆಗೆ ತಡೆಯಾಜ್ಞೆ ತರುವುದಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಶರತ್ ರಾಜಾ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಬಾರಿ ಅತಿಥಿ ಉಪನ್ಯಾಸಕರಿಗೆ ಮತದಾನದ ಹಕ್ಕು ನೀಡದೆ ಇರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಇದನ್ನು ಸ್ಪಷ್ಟಪಡಿಸುವುದಕ್ಕಾಗಿ ಮೇ 30ರಂದು ಚುನಾವಣಾಧಿಕಾರಿಗಳು ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು. ಆದರೆ ಚುನಾವಣೆಗೆ ಸಂಬಂಧಪಡದೆ ಇರುವ ಕೆಲವು ವ್ಯಕ್ತಿಗಳು ಅತಿಥಿ ಉಪನ್ಯಾಸಕರಿಗೆ ಮತದಾನ ಹಕ್ಕು ಇಲ್ಲವೆಂದು ಸುಳ್ಳು ಹೇಳಿಕೆಗಳನ್ನು ನೀಡುತ್ತ ಮಾಧ್ಯಮಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಇದರಿಂದ ಚುನಾವಣೆಯ ದಿನ ಉಪನ್ಯಾಸಕರು ಮತದಾನ ಮಾಡಲು ಮತಕೇಂದ್ರಗಳಿಗೆ ಬರದಿರುವ ಸಾಧ್ಯತೆ ಇವೆ. ಇದನ್ನು ಮನಗಂಡು ಅಪಪ್ರಚಾರ ಮಾಡುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಅವರು ಹೇಳಿದರು.

ಶಿಕ್ಷಕರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ, ಸಮೂಹ ವಿಮೆ ಯೋಜನೆ, ಅಪಘಾತದ ಸಂದರ್ಭದಲ್ಲಿ ಹಣಕಾಸು ನೆರವು, ಅತಿಥಿ ಉಪನ್ಯಾಸಕರಿಗೆ ಇಎಸ್‍ಐ, ಪಿಎಫ್ ಸೌಲಭ್ಯಗಳನ್ನು ಕೊಡಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲು ಬಯಸಿದ್ದೇನೆ. ಈ ಅಂಶಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದೇನೆ ಎಂದರು.

Translate »