ಸಿದ್ದರಾಮಯ್ಯರಿಗೆ ಅಧಿಕಾರದ ಆಸೆ ಇಲ್ಲ
ಮೈಸೂರು

ಸಿದ್ದರಾಮಯ್ಯರಿಗೆ ಅಧಿಕಾರದ ಆಸೆ ಇಲ್ಲ

August 26, 2018

ಬೆಂಗಳೂರು: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಹೇಳಿಕೆಯನ್ನು ಯಾವ ಕಾರಣಕ್ಕೆ ನೀಡಿದ್ದಾರೋಗೊತ್ತಿಲ್ಲ, ಅವರಿಗೆ ಅಧಿಕಾರದ ಆಸೆ ಇಲ್ಲ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾರ್ಮಿಕವಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ರಾಜಕೀಯದಾರಿ ಹೇಗಿರುತ್ತದೆಯೋ ಗೊತ್ತಿಲ್ಲ, ಸದ್ಯಕ್ಕೆ ಮೈತ್ರಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಕಾಂಗ್ರೆಸ್‍ನಿಂದ ಯಾವುದೇ ಸಂದರ್ಭದಲ್ಲೂ ಸರ್ಕಾರಕ್ಕೆ ಧಕ್ಕೆ ಇಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಸರ್ಕಾರದ ಬೆನ್ನಿಗಿದ್ದಾರೆ.

ಕುಮಾರಸ್ವಾಮಿ ಸರ್ಕಾರ ಬಂದ ದಿನದಿಂದಲೂ ಅಸ್ಥಿರ ಗೊಳಿಸಲು ಬಿಜೆಪಿ ನಿರಂತರ ಪ್ರಯತ್ನ ನಡೆಸಿದೆ, ಅದು ಅಷ್ಟು ಸುಲಭವಲ್ಲ. ನಾವು ಅವರಂತೆ ರಾಜಕೀಯ ಮಾಡುತ್ತೇವೆ. ನಮಗೆ ನಮ್ಮ ಸರ್ಕಾರ ಉಳಿಸುವುದೂಗೊತ್ತಿದೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಚುನಾವಣೆ ಯಲ್ಲಿ ನಾವು ನಂಬರ್ ಒನ್ ಆಗುತ್ತೇವೆ ಎಂದು ಹೇಳಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಲಿದೆ, ವಿಧಾನಸಭಾ ಚುನಾವಣೆಯಲ್ಲಿ ಸೋಲು ಉಂಟಾಗಿದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವೇ ಮೊದಲ ಸ್ಥಾನ ಪಡೆಯುತ್ತೇವೆ ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ 5 ವರ್ಷಗಳ ಕಾಲ ಆಡಳಿತ ನಡೆಸುತ್ತದೆ. ಮೈತ್ರಿ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ಮೋದಿ ಭ್ರಷ್ಟಾಚಾರಿಗಳಿಗೆ ಆಶ್ರಯ ನೀಡಿದ್ದಾರೆ. ಹಿಂದುತ್ವ ಮತ್ತು ಭಾವನಾತ್ಮಕ ವಿಚಾರಗಳಿಗೆ ಕೈ ಹಾಕಿದ್ದಾರೆ.ಯುವ ಜನರಿಗೆ ಪ್ರಧಾನಿ ಮೋದಿ ಉದ್ಯೋಗ ನೀಡಲಿಲ್ಲ, ವಿದೇಶದಿಂದ ಕಪ್ಪುಹಣ ತಂದು ದೇಶದ ಜನರಿಗೆ ಕೊಟ್ಟಿಲ್ಲ ಎಂದು ಟೀಕಿಸಿದರು.

ರಾಜ್ಯದ ಬಿಜೆಪಿ ಸಂಸದರು ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ, ರಾಜ್ಯಕ್ಕೆ ಅವರು ಯಾವುದೇ ಕೊಡುಗೆ ನೀಡಿಲ್ಲ, ಬಿಜೆಪಿಯ ನೈಜ ಮುಖವನ್ನು ನಾವು ಅನಾವರಣಗೊಳಿಸುತ್ತೇವೆ ಎಂದು ಹೇಳಿದರು. ಮುಖಂಡರೊಂದಿಗೆ ಚರ್ಚಿಸಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು. ಕಾಂಗ್ರೆಸ್ ಪಕ್ಷ ಈಗಲೂ ಗಟ್ಟಿ ನೆಲೆ ಹೊಂದಿದೆ. ಶವ ರಾಜಕೀಯದಿಂದ ಬಿಜೆಪಿ ಇದೀಗ ಕೊಳಕು ರಾಜಕೀಯಕ್ಕೆ ಇಳಿದಿದೆ. ಇವುಗಳನ್ನೆಲ್ಲಾ ಜನರು ನೋಡುತ್ತಿದ್ದಾರೆ. ಚುನಾವಣೆಯಲ್ಲಿ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

Translate »