10 ರಾಯಲ್ ಎನ್‍ಫೀಲ್ಡ್ ಸೇರಿ  15 ಲಕ್ಷ ರೂ. ಮೌಲ್ಯದ 17 ವಾಹನ ವಶ
ಮೈಸೂರು

10 ರಾಯಲ್ ಎನ್‍ಫೀಲ್ಡ್ ಸೇರಿ  15 ಲಕ್ಷ ರೂ. ಮೌಲ್ಯದ 17 ವಾಹನ ವಶ

August 26, 2018

ಮೈಸೂರು: ಕುಖ್ಯಾತ ಬುಲೆಟ್ ಬೈಕ್ ಖದೀಮರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 10 ರಾಯಲ್ ಎನ್‍ಫೀಲ್ಡ್ ಸೇರಿ 15 ಲಕ್ಷ ರೂ. ಮೌಲ್ಯದ ಒಟ್ಟು 17 ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕು ಬಿ.ಮಟಗೆರೆ ಎಸ್‍ಸಿ ಕಾಲೋನಿ, 1ನೇ ಕ್ರಾಸ್ ನಿವಾಸಿ ರಾಮಚಂದ್ರನ ಮಗ ಆರ್.ದಿನೇಶ್ ಕುಮಾರ್ ಅಲಿಯಾಸ್ ದಿನೇಶ್ ಅಲಿಯಾಸ್ ದಿನಿ(20) ಮತ್ತು ಮಂಡ್ಯ ಜಿಲ್ಲೆ, ಕೆ.ಗೌಡಗೆರೆ ನಿವಾಸಿ ಟಿ.ರಾಮೇಗೌಡನ ಮಗ ಜಿ.ಆರ್.ಶರತ್ ಅಲಿಯಾಸ್ ಚಿನ್ನು(20) ಬಂಧಿತ ಆರೋಪಿಗಳು.

ಅವರಿಂದ ದುಬಾರಿ ಬೆಲೆಯ 10 ರಾಯಲ್ ಎನ್‍ಫೀಲ್ಡ್ ಬುಲೆಟ್‍ಗಳು, 2 ಹೋಂಡಾ ಆಕ್ಟೀವಾ ಮತ್ತು 5 ಹೋಂಡಾ ಡಿಯೋ ಸ್ಕೂಟರ್ ಸೇರಿ 15 ಲಕ್ಷ ರೂ. ಮೌಲ್ಯದ ಒಟ್ಟು 17 ವಾಹನಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದಲ್ಲಿ ಇತ್ತೀಚೆಗೆ ದುಬಾರಿ ಬೆಲೆಯ ರಾಯಲ್ ಎನ್‍ಫೀಲ್ಡ್ ಬುಲೆಟ್ ಬೈಕುಗಳು ಕಳ್ಳತನವಾಗುತ್ತಿರುವುದು ವರದಿಯಾಗುತ್ತಿದ್ದವು. ಬುಲೆಟ್ ಖದೀಮರ ಪತ್ತೆಗಾಗಿ ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ರಾಮಕೃಷ್ಣನಗರ ಸರ್ಕಲ್ ಬಳಿ ನಂಬರ್ ಪ್ಲೇಟ್ ಇಲ್ಲದೆ ರಾಯಲ್ ಎನ್‍ಫೀಲ್ಡ್ ಚಾಲನೆ ಮಾಡುತ್ತಿದ್ದ ಇಬ್ಬರು ಆಸಾಮಿಗಳನ್ನು ಆಗಸ್ಟ್ 19ರಂದು ವಶಕ್ಕೆ ತೆಗೆದುಕೊಂಡರು.
ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಮತ್ತೋರ್ವನೊಂದಿಗೆ ಸೇರಿ ಮೈಸೂರು, ಮಂಡ್ಯ, ರಾಮನಗರ, ತರೀಕೆರೆ, ಬೆಂಗಳೂರು ಹಾಗೂ ಇತರೆಡೆ ಒಟ್ಟು 17 ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ದಿನೇಶ್ ಕುಮಾರ್, ಶರತ್ ತಿಳಿಸಿದರು.

ತನಿಖೆ ಮುಂದುವರಿಸಿದ ಪೊಲೀಸರು, ಬಂಧಿತ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ 10 ಬುಲೆಟ್ ಸೇರಿ 17 ವಾಹನಗಳನ್ನು ವಶಪಡಿಸಿಕೊಂಡರು. ಇದರಿಂದ ಮೈಸೂರಿನ ಸರಸ್ವತಿಪುರಂ, ಹೆಬ್ಬಾಳು, ಕೆ.ಆರ್., ವಿವಿ ಪುರಂ, ಮೇಟಗಳ್ಳಿ, ರಾಮನಗರ, ಕೆ.ಎಂ.ದೊಡ್ಡಿ, ಮಂಡ್ಯ ಗ್ರಾಮಾಂತರ, ಮದ್ದೂರು, ಐಜೂರು, ಚಂದ್ರ ಲೇಔಟ್, ಜೀವನ್ ಭೀಮನಗರ, ಬೊಮ್ಮನಹಳ್ಳಿ, ಮೈಕೋ ಲೇ ಔಟ್ ಹಾಗೂ ತರೀಕೆರೆ ಪೊಲೀಸ್ ಠಾಣೆಗಳ ಬೈಕ್ ಕಳವು ಪ್ರಕರಣ ಪತ್ತೆಯಾದಂತಾಗಿದೆ.

ಡಿಸಿಪಿ ಡಾ. ವಿಕ್ರಂ ಅಮಟೆ ಅವರ ಸೂಚನೆ ಮೇರೆಗೆ ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಇನ್ಸ್‍ಪೆಕ್ಟರ್ ಪ್ರಸನ್ನ ಕುಮಾರ್, ಎಎಸ್‍ಐಗಳಾದ ರಾಜು, ಚಂದ್ರೇಗೌಡ, ಸಿಬ್ಬಂದಿಗಳಾದ ನಾಗೇಶ, ಅರುಣ್ ಕುಮಾರ್, ಪುರುಷೋತ್ತಮ್, ಅಸ್ಗರ್ ಖಾನ್, ರಾಮಸ್ವಾಮಿ, ಚಿಕ್ಕಣ್ಣ, ಯಾಕೂಬ್ ಷರೀಫ್, ಎಂ.ಆರ್.ಗಣೇಶ, ಲಕ್ಷ್ಮೀಕಾಂತ, ಶಿವರಾಜು, ಶ್ರೀನಿವಾಸಪ್ರಸಾದ್, ರಘು, ನಿರಂಜನ್, ಪ್ರಕಾಶ್, ರಾಜೇಂದ್ರ, ಪುನೀತ್, ಆನಂದ್, ಶ್ಯಾಂ ಸುಂದರ್, ಮಂಜು, ಮಧು, ನರಸಿಂಗರಾವ್, ನಾಗರಾಜು, ಚಾಮುಂಡಮ್ಮ, ವಾಹನ ಚಾಲಕರಾದ ಧನಂಜಯ, ಶ್ರೀನಿವಾಸ ಹಾಗೂ ಶಿವಕುಮಾರ್ ಪಾಲ್ಗೊಂಡಿದ್ದರು.

Translate »