ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ
ಮೈಸೂರು

ಮೈಸೂರು ಪಾಲಿಕೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ

August 26, 2018

ಮೈಸೂರು: ಪಾಲಿಕೆ ಚುನಾವಣೆಯಲ್ಲಿ ಕೆಆರ್ ಕ್ಷೇತ್ರದ ಒಟ್ಟು ಇರುವ 20 ವಾರ್ಡ್‍ಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಹೊಂದಿದ್ದು, ಈ ಬಾರಿ ಪಾಲಿಕೆಯಲ್ಲಿ 38ರಿಂದ 40 ಸ್ಥಾನಗಳನ್ನು ಗಳಿಸಿ, ಬಿಜೆಪಿ ಸ್ವಂತ ಶಕ್ತಿ ಮೇಲೆ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಸಚಿವರೂ ಆದ ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ರಚನೆಯಾದ ಬಳಿಕ ಈವರೆಗೂ ಬಿಜೆಪಿ ಸ್ವಂತ ಶಕ್ತಿಯಿಂದ ಮೇಯರ್ ಹುದ್ದೆ ಅಲಂಕರಿಸಲು ಸಾಧ್ಯವಾಗಿಲ್ಲ. ಸ್ವತಂತ್ರವಾಗಿ ಆಡಳಿತ ಮಾಡಲಾಗದ ನೋವೂ ಇದೆ. ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 38ರಿಂದ 40 ಸ್ಥಾನಗಳಲ್ಲಿ ಜಯಭೇರಿ ಭಾರಿಸುವ ವಿಶ್ವಾಸ ಹೊಂದಿದ್ದೇನೆ. ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಮೈಸೂರು ಜನತೆ ಆಶೀರ್ವದಿಸಬೇಕೆಂದು ಕೋರಿದರು.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಹೊರತಂದಿರುವ ಪ್ರಣಾಳಿಕೆಯಲ್ಲಿನ ಅಂಶಗಳನ್ನು ವಿವರಿಸಿದ ಎಸ್.ಎ.ರಾಮದಾಸ್, ಮತ್ತೊಮ್ಮ ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗಿ ಹೊರಹೊಮ್ಮಬೇಕು. ಇದಕ್ಕಾಗಿ `ಶೂನ್ಯ ಕಸ’ ಯೋಜನೆ ರೂಪಿಸಲಾಗುವುದು. ಕೆಆರ್ ಕ್ಷೇತ್ರದಲ್ಲಿ 518 ಬೋರ್‍ವೆಲ್‍ಗಳಿದ್ದು, ಇವುಗಳನ್ನು ಮುಚ್ಚಿ ಪಾಲಿಕೆ ಕೊಳಾಯಿಯಲ್ಲೇ ಶುದ್ಧ ನೀರು ಪೂರೈಕೆ ಮಾಡಲಾಗುವುದು. ಕ್ಷೇತ್ರದಲ್ಲಿ 1 ಲಕ್ಷದ 8 ಸಾವಿರ ಖಾಲಿ ನಿವೇಶನಗಳಿದ್ದು, 4 ತಿಂಗಳಿಗೊಂದು ಬಾರಿ ಸ್ವಚ್ಛ ಮಾಡಿಸಿ ಸಾಮಾಜಿಕ ಜಾಲತಾಣದ ಮೂಲಕ ಅನುಪಾಲನಾ ವರದಿ ಪ್ರಕಟಿಸಲಾಗುವುದು ಎಂದರು.

ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಕ್ರೀಡಾ ಪಟುಗಳಿಗೆ ಅನುಕೂಲವಾಗಲು ಪ್ರತಿ ವಾರ್ಡ್‍ನಲ್ಲಿ ಆಟದ ಮೈದಾನ ನಿರ್ಮಿಸಲಾಗುವುದು. ಮನೆ, ನಿವೇಶನ ಖಾತೆ ಬದಲಾವಣೆ ಪ್ರಕ್ರಿಯೆ ಸಕಾಲ ವ್ಯಾಪ್ತಿಗೆ ತಂದಿಲ್ಲದ ಹಿನ್ನೆಲೆಯಲ್ಲಿ ಅನಗತ್ಯ ವಿಳಂಬ ಹಾಗೂ ಭ್ರಷ್ಟಾಚಾರ ಹೆಚ್ಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಕಾಲ ವ್ಯಾಪ್ತಿಗೆ ಒಳಪಡಿಸಿ ಆನ್‍ಲೈನ್ ವ್ಯವಸ್ಥೆ ಮಾಡಲಾಗುವುದು. ಕೆಆರ್ ಕ್ಷೇತ್ರದಲ್ಲಿ 26,800 ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿವೆ. ಇವರಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಸೂರು ಕಲ್ಪಿಸಲಾಗುವುದು ಎಂದರು.

ಪ್ರತಿ ಶನಿವಾರ ನಮ್ಮ ಪಾಲಿಕೆ ಸದಸ್ಯರು ಪಾದಯಾತ್ರೆ ನಡೆಸಿ ಜನತೆಯ ಸಮಸ್ಯೆ ಆಲಿಸಲಿದ್ದಾರೆ. ಜೊತೆಗೆ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಿ ಉತ್ತಮ ಆಡಳಿತ ನಡೆಸಲು ಮುಂದಾಗಲಿದ್ದಾರೆ. ನಗರದಲ್ಲಿ ಸ್ವಚ್ಛ ಶೌಚಾಲಯಗಳನ್ನು ನಿರ್ಮಿಸಿ ಉಚಿತವಾಗಿ ಬಳಸಲು ವ್ಯವಸ್ಥೆ ಮಾಡಲಾಗುವುದು. ಹಿರಿಯ ನಾಗರಿಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ವಾರ್ಡ್ ರಕ್ಷಕರ ಸಮಿತಿ ರಚನೆ ಮಾಡಿ ಅವರ ನಿರ್ದೇಶನದಂತೆ ಪಾಲಿಕೆ ಸದಸ್ಯರು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ನಗರದಲ್ಲಿ ನಡೆಯುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾಮಗಾರಿ ಸ್ಥಳದಲ್ಲಿ ಎಲ್ಲಾ ವಿವರವನ್ನು ಫಲಕದಲ್ಲಿ ಪ್ರಕಟಿಸುವ ವ್ಯವಸ್ಥೆ ತರಲಾಗುವುದು ಎಂದು ವಿವರಿಸಿದರು.
ಇದೇ ವೇಳೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಬಳಿಕ ಹೋಟೆಲ್ ಎದುರಲ್ಲಿ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಜೇಶ್, 51ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಬಿ.ವಿ.ಮಂಜುನಾಥ್ ಮತ್ತಿತರರು ಹಾಜರಿದ್ದರು.

ಕೆಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ಬಂಡಾಯವಿಲ್ಲ

ಕೆಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ಬಂಡಾಯದ ಭೀತಿ ಇಲ್ಲ. 59ನೇ ವಾರ್ಡಿನಲ್ಲಿ ಪಕ್ಷದ ಸೀಮಾ ಪ್ರಸಾದ್ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆ ಬಳಿಕ ಅವರು ನಿವೃತ್ತಿ ಘೋಷಣೆ ಮಾಡಿದ್ದು, ವಾರ್ಡಿನ ಅಧಿಕೃತ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರ ಗೆಲುವಿಗೆ ಶ್ರಮಿಸಲಿದ್ದಾರೆ. ಅದೇ ರೀತಿ ಪಕ್ಷದ ಬಿ.ಹೆಚ್.ಆಶಾ ಅವರು 61ನೇ ವಾರ್ಡಿನಲ್ಲಿ ಸ್ವತಂತ್ರವಾಗಿ ಕಣಕ್ಕೀಳಿದಿದ್ದರು. ಈಗ ಅವರು ಕೂಡ ನಿವೃತ್ತಿ ಘೋಷಿಸಿ, ಅಧಿಕೃತ ಬಿಜೆಪಿ ಅಭ್ಯರ್ಥಿ ಎ.ವಿ.ವಿದ್ಯಾಅರಸ್ ಪರ ಕೆಲಸ ಮಾಡಲಿದ್ದಾರೆ. ಜೊತೆಗೆ 55ನೇ ವಾರ್ಡಿಗೆ ಸಂಬಂಧಿಸಿದಂತೆ ಮ.ವಿ.ರಾಮ್‍ಪ್ರಸಾದ್ ಅವರೊಂದಿಗೆ ಮಾತನಾಡಿದ್ದು, ಅವರ ಬಂಡಾಯವೂ ಶಮನವಾಗಿ ಅಧಿಕೃತ ಅಭ್ಯಥಿ ಪುರುಷೋತ್ತಮ್ ಅವರಿಗೆ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ.

ಕೊಡಗು ಪುನರ್ ನಿರ್ಮಾಣಕ್ಕೆ ಕೇಂದ್ರ ಬದ್ಧ

ಕೊಡಗು ನೆರೆಪೀಡಿತ ಪ್ರದೇಶದಲ್ಲಿ ಖುದ್ದು ಹಾಜರಿದ್ದು, ಅಲ್ಲಿನ ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು. ಆದರೆ ಪಾಲಿಕೆ ಚುನಾವಣೆಯಿಂದ ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ. ಸೆ.5ರಂದು ಕೊಡಗು ಜಿಲ್ಲೆಗೆ ಭೇಟಿ ನೀಡಿ ಪ್ರಾಥಮಿಕವಾಗಿ 11 ಲಕ್ಷ ರೂ. ನೆರವನ್ನು ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಕೊಡಗಿಗೆ ಭೇಟಿ ನೀಡಿದ್ದರು. ಕೊಡಗು ಪುನರ್ ನಿರ್ಮಾಣದ ವಿಷಯದಲ್ಲಿ ಎಲ್ಲಾ ಸಹಕಾರ ನೀಡಲು ಪ್ರಧಾನಿಗಳು ಬದ್ಧರಾಗಿದ್ದಾರೆ.

ಸರ್ವೇ ನಂ.4ರ ಮುಡಾ ಬಡಾವಣೆ ಸಮಸ್ಯೆ ನಿವಾರಣೆ

ಕುರುಬಾರಹಳ್ಳಿ ಸರ್ವೇ ನಂ.4 ಹಾಗೂ ಆಲನಹಳ್ಳಿ ಸರ್ವೇ ನಂ.41ರ ವ್ಯಾಪ್ತಿಯ ಮುಡಾ ಬಡಾವಣೆಗಳಿಗೆ ಸಂಬಂಧಿಸಿದಂತೆ ಉದ್ಭವವಾಗಿರುವ ಕಾನೂನಾತ್ಮಕ ತೊಡಕುಗಳು ಶೀಘ್ರದಲ್ಲಿ ನಿವಾರಣೆ ಆಗಲಿದೆ. ನ್ಯಾಯಾಲಯದಲ್ಲಿ ಒಂದು ಅಥವಾ ಎರಡು ವಿಚಾರಣೆ ವೇಳೆಗೆ ಬಡಾವಣೆಗಳು ಬಿ ಖರಾಬಿನಿಂದ ಮುಕ್ತಗೊಂಡು ಸಮಸ್ಯೆಗಳು ನಿವಾರಣೆಯಾಗಲಿದೆ.

Translate »