ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಸಿದ್ದರಾಮಯ್ಯ ಅಪಸ್ವರ
ಮೈಸೂರು

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಸಿದ್ದರಾಮಯ್ಯ ಅಪಸ್ವರ

July 24, 2018

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುವ ಬಗ್ಗೆ ಮರುವಿಮರ್ಶೆ ಮಾಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿರುವ ಸಿದ್ದರಾಮಯ್ಯ, ಇಂದು ಸಂಸತ್ ಹಾಲ್‍ನಲ್ಲಿ ರಾಹುಲ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಗೊಂಡ ನಂತರದ ವಿದ್ಯಮಾನಗಳು, ಪಕ್ಷ ಸಂಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಮೈತ್ರಿ ಸರ್ಕಾರದ ನಾಯಕತ್ವ ವಹಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರ ಕೆಲವು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಕುಮಾರಸ್ವಾಮಿ ಅವರು ಈ ಹಿಂದೆ ತಮ್ಮನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮಾಡಿರುವ ಆರೋಪಗಳಿಗೂ ಉತ್ತರ ನೀಡಿದ್ದಲ್ಲದೆ, ಪಕ್ಷ ಮತ್ತು ಕಾರ್ಯಕರ್ತರ ಉಳಿವಿಗಾಗಿ ನಾನು ಕೆಲವು ತೀರ್ಮಾನಗಳನ್ನು ಕೈಗೊಂಡು ಸರ್ಕಾರಕ್ಕೆ ಪತ್ರ ಬರೆದಿದ್ದೆ ಎಂದು ಸಮರ್ಥಿಸಿ ಕೊಂಡಿದ್ದಾರೆ. ಹಾಗೆಂದು ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವ, ಇಲ್ಲವೇ ಭಿನ್ನಮತೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಯಾವುದೇ ವಿಚಾರಕ್ಕೂ ಕೈಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ರಚನೆಗೂ ಮುನ್ನ ಮಾಡಿಕೊಂಡಿರುವ ಒಪ್ಪಂದಗಳನ್ನು ಮೈತ್ರಿ ಪಕ್ಷವೇ ಉಲ್ಲಂಘಿಸುತ್ತಿದೆ, ನಮ್ಮ ಸಚಿವರ ವ್ಯಾಪ್ತಿಗೆ ಬರುವ ಇಲಾಖೆಗಳಲ್ಲೂ ಮುಖ್ಯಮಂತ್ರಿ ಮತ್ತು ಅವರ ಸಹೋದರ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ನನ್ನ ಬಳಿ ನಮ್ಮವರು ದೂರು ಹೇಳಿಕೊಂಡಿದ್ದಾರೆ.

ಮತೀಯ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ನೀವು ಕೈಗೊಂಡಿರುವ ನಿರ್ಧಾರವನ್ನು ನಾನು ಲವಲೇಶವೂ ವಿರೋಧ ಮಾಡುವುದಿಲ್ಲ. ಮೈತ್ರಿ ಪಕ್ಷಕ್ಕೆ ಪೂರ್ಣ ಅಧಿಕಾರ ನೀಡುತ್ತಾ ಹೋದರೆ ಆ ಪಕ್ಷದ ನಾಯಕರು ನಮ್ಮನ್ನು ಮೂಲೆಗುಂಪು ಮಾಡುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂಬ ಭಾವನೆ ನನ್ನದು ಮತ್ತು ಕಾರ್ಯಕರ್ತರದ್ದಾಗಿದೆ. ಮೈತ್ರಿಯೊಂದಿಗೆ ಕಣಕ್ಕಿಳಿದರೆ ನಮಗೇ ನಷ್ಟವಾಗುವುದಲ್ಲದೆ, ಪಕ್ಷ ಸಂಘಟನೆಯೂ ದುರ್ಬಲಗೊಳ್ಳು ತ್ತದೆ. ಮತ್ತೊಂದೆಡೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯ ಅಸ್ತಿತ್ವವೇ ಇಲ್ಲ, ಅಂತಹ ಕಡೆ ನಮ್ಮ ಹೊಂದಾಣಿಕೆ ಆ ಪಕ್ಷಕ್ಕೆ ವರದಾನವಾಗುತ್ತದೆ ಎಂಬ ಚಿತ್ರಣವನ್ನು ಬಿಡಿಸಿಟ್ಟಿ ದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರ ಸಲಹೆಗಳನ್ನು ರಾಹುಲ್ ಗಾಂಧಿ ಆಲಿಸಿ, ನಿಮ್ಮೆಲ್ಲ ಕಳಕಳಿಯ ಬಗ್ಗೆ ರಾಜ್ಯದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.

Translate »