ಮೈಸೂರು: ಹಲ್ಲಿಲ್ಲದ ಹಾವು ಎಂದು ತಮ್ಮನ್ನು ಟೀಕಿಸಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದು, `ಅವಳ ಹಲ್ಲೇನು ಬಿಗಿಯಾಗಿದೆಯಾ? ಅವಳಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಹರಿಹಾಯ್ದಿದ್ದಾರೆ.
ಮೈಸೂರಿನ ತಮ್ಮ ನಿವಾಸದ ಬಳಿ ಭಾನು ವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇದೇ ಶೋಭಾ ಕರಂದ್ಲಾಜೆ ಸೋತಿಲ್ಲವೇ? ಅದನ್ನು ಮರೆತಂತಿದೆ ಎಂದು ಕಿಡಿಕಾರಿದರು.
ಮೈತ್ರಿ ಸರ್ಕಾರ ಮುರಿದು ಬೀಳುತ್ತದೆ ಎಂಬ ಬಿಜೆಪಿಯವರ ಗಡುವು ಮುಗಿ ದಿದೆ. ಬಿಜೆಪಿಯವರು ಇಂತಹ ಒಣ ಜಂಬ ಬಿಟ್ಟರೆ ಒಳಿತು. ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿದ್ದು, ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದು ನುಡಿದರು.
ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಐದು ಕ್ಷೇತ್ರಗಳಲ್ಲೂ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲುವು ಸಾಧಿ ಸಲಿದ್ದಾರೆ. ನಾನು ಐದು ಕ್ಷೇತ್ರಗಳಲ್ಲಿಯೂ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇನೆ.
ಅ.22ರಂದು ಬಳ್ಳಾರಿಯಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದು, ಅ.24 ರಂದು ಮಂಡ್ಯ, ಅ.25 ಶಿವಮೊಗ್ಗ, ಅ.26 ಮತ್ತು 27 ಜಮಖಂಡಿ, ಅ.28, 29 ಬಳ್ಳಾರಿ, ಅ.30ರಂದು ಮತ್ತೆ ಶಿವ ಮೊಗ್ಗ, ಅ.31, ನ.1ರಂದು ಮತ್ತೆ ಜಮ ಖಂಡಿಯಲ್ಲಿ ಪ್ರಚಾರ ಮಾಡಲಿದ್ದೇನೆ ಎಂದು ಮಾಹಿತಿ ನೀಡಿದರು.
ದಸರಾ ಮುಗಿದ ಅಧ್ಯಾಯ: ಈ ಬಾರಿ ದಸರಾ ಮಹೋತ್ಸವದಲ್ಲಿ ಕಾಂಗ್ರೆಸ್ಸಿಗರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿ ಸಿದ ಸಿದ್ದರಾಮಯ್ಯ, ದಸರಾ ಮಹೋತ್ಸವಕ್ಕೆ ಈಗಾಗಲೇ ತೆರೆಬಿದ್ದಿದ್ದು, ಅದು ಮುಗಿದ ಅಧ್ಯಾಯ. ಮುಂಬರುವ 2019ರ ದಸರಾದಲ್ಲಿ ನೋಡೋಣ. ನುಂಗಿದ ತುತ್ತು ರುಚಿ ಹತ್ತುವುದಿಲ್ಲ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೆಚ್ಚು ಮಾತನಾಡಲು ನಿರಾಕರಿಸಿದರು.