ಎಫ್‍ಐಆರ್ ನಲ್ಲಿ ಸಿದ್ದರಾಮಯ್ಯ ಹೆಸರು ಕೈ ಬಿಡುವಂತೆ ಪ್ರಗತಿಪರ ಚಿಂತಕರ ವೇದಿಕೆ ಆಗ್ರಹ
ಮೈಸೂರು

ಎಫ್‍ಐಆರ್ ನಲ್ಲಿ ಸಿದ್ದರಾಮಯ್ಯ ಹೆಸರು ಕೈ ಬಿಡುವಂತೆ ಪ್ರಗತಿಪರ ಚಿಂತಕರ ವೇದಿಕೆ ಆಗ್ರಹ

June 25, 2018

ಮೈಸೂರು: ರಾಜಕೀಯ ಪ್ರೇರಿತವಾಗಿ ಭೂ ಹಗರಣ ಪ್ರಕರಣವೊಂದರ ಎಫ್‍ಐಆರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದ್ದು, ಕೂಡಲೆ ಸಿದ್ದರಾಮಯ್ಯ ಅವರ ಹೆಸರನ್ನು ಕೈಬಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟರಂಗಶೆಟ್ಟಿ ಎಚ್ಚರಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ತೇಜೋವಧೆಗೆ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರು ವ್ಯವಸ್ಥಿತ ಷಡ್ಯಂತರ ನಡೆಸುತ್ತಿದ್ದಾರೆ. 21 ವರ್ಷದ ನಂತರ ಆರ್‍ಟಿಐ ಕಾರ್ಯಕರ್ತರೊಬ್ಬರು ಕೆಲ ಪ್ರಭಾವಿ ರಾಜಕಾರಣಿಗಳಿಂದಾಗಿ ಆರ್‍ಟಿಐ ಹೆಸರಿನಲ್ಲಿ ದಾಖಲೆ ಪಡೆದು ಡಿನೋಟಿಫಿಕೇಷನ್ ಕಾರಣ ನೀಡಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಮಾಡಿದ್ದಾರೆ. ಉಲೇಖಿಸಿರುವ ನಿವೇಶನಕ್ಕೆ ನೋಟಿಪಿಕೇಷನ್ ಆಗಿಲ್ಲ, ಇನ್ನು ಡಿನೋಟಿಫಿಕೇಷನ್ ಆಗುವುದು ಹೇಗೆ. ಇದನ್ನು ಗಮನಿಸಿದರೆ ಎಫ್‍ಆರ್‍ಐನಲ್ಲಿ ಸಿದ್ದರಾಮಯ್ಯ ಅವರ ಹೆಸರು ದಾಖಲಿಸಿರುವುದು ಉದ್ದೇಶ ಪೂರ್ವಕವಾಗಿದೆ ಎಂದು ಸಾಬೀತಾಗುತ್ತದೆ.

ಈ ಹಿನ್ನೆಲೆಯಲ್ಲಿ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವ್ಯಾಪ್ತಿಯಲ್ಲಿ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಅಲ್ಲದೇ ಎಫ್‍ಐಆರ್ ನಲ್ಲಿ ಸಿದ್ದರಾಮಯ್ಯ ಅವರ ಹೆಸರು ದಾಖಲಿಸಿರುವುದನ್ನು ಕೂಡಲೇ ಕೈ ಬಿಡಬೇಕು ಇಲ್ಲವಾದಲ್ಲಿ ನಮ್ಮ ವೇದಿಕೆಯಿಂದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಹೆಚ್.ಬಿ.ಸಂಪತ್, ಬೋರಪ್ಪಶೆಟ್ಟಿ, ಡಾ.ಮಧು, ಗೋವಿಂದಶೆಟ್ಟಿ, ಮಹದೇವ ಗಾಣ ಗ ಇದ್ದರು.

Translate »