ಸಮಾಜದ ತಲ್ಲಣಗಳಿಗೆ ಸಾಹಿತ್ಯದಿಂದ ಪರಿಹಾರ  ಸಾಹಿತಿ ಡಾ.ಸಿ.ನಾಗಣ್ಣ ಅಭಿಮತ
ಮೈಸೂರು

ಸಮಾಜದ ತಲ್ಲಣಗಳಿಗೆ ಸಾಹಿತ್ಯದಿಂದ ಪರಿಹಾರ  ಸಾಹಿತಿ ಡಾ.ಸಿ.ನಾಗಣ್ಣ ಅಭಿಮತ

June 25, 2018

ಮೈಸೂರು: ಎಲ್ಲಾ ಕಾಲಘಟ್ಟಗಳಲ್ಲೂ ಕವಿಯಾದವನಿಗೆ ವಿಶೇಷ ಸ್ಥಾನಮಾನ ಇದ್ದು, ಪ್ರಸ್ತುತ ಸಮಾಜದ ಎಲ್ಲಾ ತಲ್ಲಣಗಳಿಗೆ ಸಾಹಿತ್ಯ ಪರಿಹಾರ ಒದಗಿಸಬಲ್ಲದು ಎಂದು ಸಾಹಿತಿ ಡಾ.ಸಿ.ನಾಗಣ್ಣ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಕೆ.ಗೋವಿಂದರಾಜು ಅವರ `ನಾವೆಲ್ಲರೂ ದುಃಖದ ಮಕ್ಕಳು’ ಕವಿತೆಯ ಓದು-ಸಂವಾದದ ಚಕೋರ-101ರ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ನಿಜವಾದ ಕವಿಯಾದವನಿಗೆ ಎಲ್ಲಾ ಕಾಲದಲ್ಲೂ ವಿಶಿಷ್ಟ ಸ್ಥಾನ ಇದ್ದೇ ಇರುತ್ತದೆ. ಗೌರವಪೂರ್ವಕ ಸ್ಥಾನಮಾನ ಹೊಂದಿರುವ ಕವಿಯು ತನ್ನ ಜವಾಬ್ದಾರಿ ಅರಿತು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾದದ್ದನ್ನು ಕೊಡ ಮಾಡುವ ಅವಕಾಶ ಇನ್ನು ಮುಗಿದಿಲ್ಲ. ಹೀಗಾಗಿ ಎಷ್ಟೇ ಉತ್ತಮ ಸಾಹಿತ್ಯ ಮೂಡಿಬಂದರೂ ಮತ್ತಷ್ಟು ಉತ್ತಮವಾದ ಬರವಣ ಗೆ ಹೊರಹೊಮ್ಮಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮಾಜದ ತಲ್ಲಣಗಳ ನಿವಾರಣೆ ಸಾಹಿತ್ಯದಿಂದ ಸಾಧ್ಯವಾಗಲಿದೆ ಎಂದು ನುಡಿದರು.

ನೋವಿನ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ `ನಾವೆಲ್ಲರೂ ದುಃಖದ ಮಕ್ಕಳು’ ಕವಿತೆಯಲ್ಲಿ ಕೆ.ಗೋವಿಂದರಾಜು ಅವರು ನೋವು ನಂಗಿ ನೀಲಕಂಠನಾಗಿ ಹೊರ ಜಗತ್ತಿಗೆ ಸುಖ ಪ್ರಾಪ್ತಗೊಳ್ಳುವಂತೆ ಮಾಡುವ ಅವಕಾಶವಿತ್ತು ಎಂದು ಅಭಿಪ್ರಾಯಪಟ್ಟರು.

ಪ್ರೀತಿ-ನೋವಿಗೆ ಆದ್ಯತೆ: `ನಾವೆಲ್ಲರೂ ದುಃಖದ ಮಕ್ಕಳು’ ಕವಿತೆ ಕುರಿತು ಪ್ರತಿಕ್ರಿಯೆ ನೀಡಿದ ಶಿಕ್ಷಕ ಡಾ.ಬಿ.ಸಿ.ದೊಡ್ಡೇಗೌಡ, ಜಗತ್ತಿನ ಸಾಹಿತ್ಯ ಲೋಕ ಅವಲೋಕಿಸಿದರೆ, ಅದರಲ್ಲಿ ಪ್ರೀತಿ ಮತ್ತು ನೋವು ಹೆಚ್ಚು ಆದ್ಯತೆ ಪಡೆದುಕೊಂಡಿರುವುದು ಕಾಣಸಿಗುತ್ತದೆ. ಅದೇ ರೀತಿ ಈ ಕವಿತೆಯಲ್ಲೂ ಕವಿಗಳು ನೋವಿನ ನಿವೇದನೆಗೆ ಹೆಚ್ಚು ಪ್ರಾದಾನ್ಯತೆ ನೀಡಿದ್ದಾರೆ. ಇಡೀ ಕವಿತೆ ಪ್ರಶಾಂತತೆಯ ನೆಲೆಯಲ್ಲಿ ಮೂಡಿಬಂದಿದೆ. ಬುದ್ಧ ಆಶಯವೂ ಇಲ್ಲಿ ಹೆಚ್ಚು ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.

ಕವಿತೆಯಲ್ಲಿ ದುಃಖ ನೀಡಿದ ಸಮುದಾಯದ ಬಗ್ಗೆ ದುಃಖಿತ ಸಮಾಜವೇ ಎಲ್ಲವನ್ನೂ ಮನ್ನಿಸುವ ಅನುಕಂಪದ ಭಾವವೂ ಇಲ್ಲಿ ವ್ಯಕ್ತವಾಗಿ ಹೃದಯವಂತಿಕೆಯ ವಿಶಾಲತೆ ಹರಡಿಕೊಂಡಿದೆ. ಆ ಮೂಲಕ ವಿಚಾರಣೆಯ ಕಟಕಟೆಯಂತೆ ಕವಿತೆ ಸಾಗುತ್ತದೆ. ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ದ್ವಂದ್ವವೂ ಇರುವಂತೆ ಗೋಚರಿಸುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಾಹಿತಿ ಕೆ.ಗೋವಿಂದರಾಜು ತಮ್ಮ ಕವಿತೆ ವಾಚಿಸಿದರು. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ, ಅಕಾಡೆಮಿ ಪ್ರತಿನಿಧಿ ನೀ.ಗೂ.ರಮೇಶ್ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

Translate »