ರಾಯಚೂರಿನ ಆರ್‍ಕೆಬಿ ಫೌಂಡೇಷನ್‍ನಿಂದ ಸಾಮಾಜಿಕ ಸೇವಾ ಕಾರ್ಯ
ಮೈಸೂರು

ರಾಯಚೂರಿನ ಆರ್‍ಕೆಬಿ ಫೌಂಡೇಷನ್‍ನಿಂದ ಸಾಮಾಜಿಕ ಸೇವಾ ಕಾರ್ಯ

July 6, 2018
  • ಮೈಸೂರಲ್ಲಿ ನಾಳೆ 221 ಮಂದಿಗೆ ಉಚಿತ ಕೃತಕ ಕಾಲು ಜೋಡಣೆ ಶಿಬಿರ

ಮೈಸೂರು: ಮೈಸೂರಿನ ಹಳ್ಳದಕೇರಿ, ಮಹಾವೀರನಗರ 3ನೇ ಕ್ರಾಸ್‍ನಲ್ಲಿರುವ ಸ್ಥಾನಿಕ ವಾಸಿ ಜೈನ್ ಸಂಘದಲ್ಲಿ ಜು7ರಂದು ಬೆಳಿಗ್ಗೆ 11 ಗಂಟೆಗೆ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣೆ ಮತ್ತು ಪರಿಕರಗಳ ವಿತರಣಾ ಶಿಬಿರ ಆಯೋಜಿಸಲಾಗಿದೆ ಎಂದು ರಾಯಚೂರಿನ ಎಂ.ಕೆ.ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮೊಹಮ್ಮದ್ ರಿಯಾಜುದ್ದೀನ್ ಇಂದಿಲ್ಲಿ ತಿಳಿಸಿದರು.

ರಾಯಚೂರಿನ ರಾಜಮಲ್ ಖೇಮರಾಜ್ ಭಂಡಾರಿ ಫೌಂಡೇಷನ್ ರಾಯಚೂರಿನ ಓಪೆಕ್ ಆಸ್ಪತ್ರೆಯ ಆವರಣದಲ್ಲಿರುವ ಕೃತಕ ಕಾಲು ತಯಾರಕ ಕೇಂದ್ರ ಸ್ಥಾಪಿಸಿ, ಮೂರು ವರ್ಷಗಳಲ್ಲಿ ಇದುವರೆಗೆ ಹಲವು ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿ, ಒಟ್ಟು 3500 ಮಂದಿಗೆ ಉಚಿತ ಕೃತಕ ಕಾಲುಗಳು ಹಾಗೂ ಇನ್ನಿತರ ಅಂಗವಿಕಲತೆಯುಳ್ಳವರಿಗೆ ಉಚಿತ ಸಲಕರಣೆಗಳನ್ನು ವಿತರಿಸಿದೆ. ಅಂತೆಯೇ ಜು.7ರಂದು ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ವಿಕಲ ಚೇತರಿಗೆ ಉಚಿತ ಕಾಲು ಜೋಡಣಾ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಸಂಸ್ಥೆಯ ಕಾರ್ಯಕರ್ತರು ಮೈಸೂರು ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ನಂಜನಗೂಡು, ಮೈಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ, ಹುಣಸೂರು, ಹೆಚ್.ಡಿ.ಕೋಟೆ ತಾಲೂಕುಗಳಿಂದ ಒಟ್ಟು ವಿಕಲಚೇತನರನ್ನು ಗುರುತಿಸಿ, ಅವರಲ್ಲಿ 221 ಮಂದಿಗೆ ಉಚಿತ ಕೃತಕ ಕಾಲು ಹಾಗೂ 164 ಮಂದಿಗೆ ವಿವಿಧ ಪರಿಕರಗಳನ್ನು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ವಿತರಿಸಲಿದೆ ಎಂದರು.

ಎಂ.ಕೆ.ಭಂಡಾರಿ ಆಸ್ಪತ್ರೆಯಲ್ಲಿ ಸ್ಮೈಲ್ ಟ್ರೇನ್ ಎಂಬ ಉಚಿತ ಯೋಜನೆಯಡಿ ಸೀಳು ತುಟಿ ಮತ್ತು ಸೀಳು ಒಳಾಂಗಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಕಳೆದ 9 ವರ್ಷಗಳಲ್ಲಿ 6000 ಉಚಿತ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ. ಇದರ ಪ್ರಯೋಜನವನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಫಲಾನುಭವಿಗಳು ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶಾಮ್ಸ್ ಅಮೀರ್, ಮುನಾವರ್ ಪಾಷಾ, ಮನೋಹರ್ ಸಾಂಕ್ಲಾ, ಜಂಬುಕುಮಾರ್ ಲೂಡ ಉಪಸ್ಥಿತರಿದ್ದರು.

Translate »