ಜೆಎಸ್‍ಎಸ್ ಅರ್ಬನ್ ಹಾಥ್‍ನಲ್ಲಿ ಇಂದಿನಿಂದ  10 ದಿನಗಳ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾಥ್‍ನಲ್ಲಿ ಇಂದಿನಿಂದ  10 ದಿನಗಳ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ

July 6, 2018

ಮೈಸೂರು:  ಜೆಎಸ್‍ಎಸ್ ಮೈಸೂರು ಅರ್ಬನ್ ಹಾಥ್‍ನಲ್ಲಿ ಜು.6ರಿಂದ 15ರವರೆಗೆ ಮೂರನೇ ಬಾರಿಗೆ ಗುಜರಾತ್ ಹ್ಯಾಂಡಿಕ್ರಾಫ್ಟ್ಸ್ ಉತ್ಸವ ಆಯೋಜಿಸಿದ್ದು, ಗುಜರಾತ್ ಸರ್ಕಾರದ ಅಂಗ ಸಂಸ್ಥೆಯಾದ ಇಂಡಸ್ಟ್ರಿಯಲ್ ಎಕ್ಸ್‍ಟೆನ್ಷನ್ ಕಾಟೇಜ್ (ಇಂಡೆಕ್ಸ್ಟ್-ಸಿ) ಸಹಯೋಗದಲ್ಲಿ ಈ ಮೇಳ ನಡೆಯಲಿದೆ ಎಂದು ಗುಜರಾತ್‍ನ ಇಂಡೆಕ್ಸ್ಟ್-ಸಿ ಕಾರ್ಯ ನಿರ್ವಾಹಕ ನಿರ್ದೇಶಕ ಪಿ.ಜಿ.ಪಟೇಲ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ, ಕ್ರಿಯಾಶೀಲತೆಯುಳ್ಳ 60ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಲಿದ್ದು, ಅವರು ತಯಾರಿಸಿದ ಉತ್ಪನ್ನಗಳಾದ ಪಟೋಲ ಸೀರೆ, ಬಾಂಧನಿ ಸೀರೆ, ಕಸೂತಿ ಬೆಡ್‍ಶೀಟ್, ಟವಲ್, ಕುಶನ್ ಕವರ್, ಪರಿಸರ ಸ್ನೇಹಿ ಆಭರಣ, ಡ್ರೆಸ್ ಮೆಟೀರಿಯಲ್ಸ್, ಮಣ್ಣಿನ ವಸ್ತುಗಳು, ಮೆಟಲ್ ವರ್ಕ್, ಕುರ್ತಿ, ಚನಿಯಾ ಚೋಲಿ ಅಲ್ಲದೆ ಆಕರ್ಷಣೀಯ ಕರಕುಶಲ ವಸ್ತುಗಳು ಹಾಗೂ ಕೈಮಗ್ಗಗಳನ್ನು ನೇರವಾಗಿ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಆಸಕ್ತರಿಗಾಗಿ ಗುಜರಾತ್‍ನ ಕುಶಲಕರ್ಮಿಗಳಿಂದ ಕರಕುಶಲ ಕಲೆಗಳ ಉಚಿತ ತರಬೇತಿ ಆಯೋಜಿಸಲಾಗಿದೆ. ಮೇಳಕ್ಕೆ ಉಚಿತ ಪ್ರವೇಶವಿದೆ.

ಜು.6ರಂದು ಸಂಜೆ 4 ಗಂಟೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮೇಳಕ್ಕೆ ಚಾಲನೆ ನೀಡಲಿದ್ದು, ಪ್ರವಾಸೋದ್ಯಮ ಸಚಿವ ಸಚಿವ ಸಾ.ರಾ.ಮಹೇಶ್, ಶಾಸಕ ಎಸ್.ಎ.ರಾಮದಾಸ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಂಡೆಕ್ಸ್ಟ್ ವ್ಯವಸ್ಥಾಪಕ ಆರ್.ಆರ್.ಜಾಧವ್, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ರಂಗನಾಥಯ್ಯ, ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್, ಜೆಎಸ್‍ಎಸ್ ಅರ್ಬನ್ ಹಾಥ್ ಯೋಜನಾ ನಿರ್ದೇಶಕ ಶಿವನಂಜಸ್ವಾಮಿ, ಕರಕುಶಲ ಕರ್ಮಿಗಳ ಸಮನ್ವಯಾಧಿಕಾರಿ ರಾಕೇಶ್ ರೈ ಉಪಸ್ಥಿತರಿದ್ದರು.

Translate »