ಲಯನ್ಸ್ ಪದಗ್ರಹಣ ಸಮಾರಂಭದಲ್ಲಿ ಶಾಸಕ ಎಲ್.ನಾಗೇಂದ್ರ
ಮೈಸೂರು

ಲಯನ್ಸ್ ಪದಗ್ರಹಣ ಸಮಾರಂಭದಲ್ಲಿ ಶಾಸಕ ಎಲ್.ನಾಗೇಂದ್ರ

July 6, 2018

ಮೈಸೂರು: ಪ್ರಪಂಚದ ಮೂಲೆ ಮೂಲೆಯಲ್ಲೂ ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ಕೆಲಸ ನಿರ್ವಹಿಸುತ್ತಿದ್ದು, ಅಪಾರವಾದ ಸದಸ್ಯರನ್ನು ಒಳಗೊಂಡು ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕ ಬೆಂಬಲಕ್ಕೆ ನಿಂತಿದೆ ಎಂದು ಚಾಮರಾಜ ಕ್ಷೇತ್ರದ ನೂತನ ಶಾಸಕ ಲಯನ್‍ಎಲ್.ನಾಗೇಂದ್ರ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಖಾಸಗಿ ಹೊಟೇಲೊಂದರಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಜಯಲಕ್ಷ್ಮೀಪುರಂ ವಲಯ-10, ಕ್ಷೇತ್ರ-1, ಜಿಲ್ಲೆ 317-ಎ ಸಂಸ್ಥೆಯ ನೂತನ ಅಧ್ಯಕ್ಷ ಲಯನ್ ಎಸ್.ಚಂದ್ರಶೇಖರ್, ಕಾರ್ಯದರ್ಶಿ ಲಯನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ), ಖಚಾಂಚಿ ಲಯನ್ ಎ.ಪಿ.ಭರತೇಶ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಈ ಸಂಸ್ಥೆಯ ಸದಸ್ಯನಾಗಿರುವುದು ನನಗೆ ಹೆಮ್ಮೆ ತಂದಿದೆ. ಹೀಗೆ ಈ ನನ್ನ ಸಂಸ್ಥೆ ಮುಂದಿನ ದಿನಗಳಲ್ಲಿ ಅಭಿವೃದ್ಧಿಪಥದತ್ತ ಸಾಗಲಿ ಎಂದು ಅವರು ಹಾರೈಸಿದರು.

ಅವರು ಮುಂದುವರೆದು ಸೇವಾ ಮನೋಭಾವ, ಅರ್ಪಣೆ, ಶ್ರದ್ಧೆ ಈ ಮೂರು ಅಂಶಗಳನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ನಿರಂತರವಾಗಿ ಬೆಳವಣಿಗೆ ಹೊಂದಿ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಲಯನ್ಸ್ ಎಂದು ತಿಳಿಸಿದರು. ಸದಸ್ಯರ ಸಹಕಾರದಿಂದ ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಆರು ಕ್ಷೇತ್ರಗಳಲ್ಲಿ ಸೇವಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ ಎಂದರು.

ಲಯನ್ಸ್ ಅಂತರರಾಷ್ಟ್ರೀಯ ಸಂಸ್ಥೆ ಎರಡನೇ ಜಿಲ್ಲಾ ಉಪ ರಾಜ್ಯಪಾಲ ಲಯನ್ ಡಾ.ಜಿ.ಎ.ರಮೇಶ್ ನೂತನ ಅಧ್ಯಕ್ಷ ಹಾಗೂ ಅವರತಂಡಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಅವರು ಮಾತನಾಡಿ, ಇಂದು ಲಯನ್ಸ್ ಎಂದಾಕ್ಷಣ ಎಲ್ಲರೂ ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸಹಾಯಹಸ್ತ ತೋರುವುದರ ಜೊತೆಗೆ ಸ್ವಚ್ಛ ಭಾರತ್ ಆಂದೋಲನವನ್ನು ಹಮ್ಮಿಕೊಂಡು ದೇಶವನ್ನು ಸ್ವಚ್ಛವಾಗಿಡಲು ಸಹಕರಿಸಬೇಕೆಂದು ಅಭಿಪ್ರಾಯಪಟ್ಟರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಯನ್ ಎಸ್.ಚಂದ್ರಶೇಖರ್ ಮಾತನಾಡಿ, ಇಂದು ನನ್ನ ಜೀವನದ ಅವಸ್ಮರಣೀಯ ದಿನ. ಹಿರಿಯರ ಸಮ್ಮುಖದಲ್ಲಿ ಅಧ್ಯಕ್ಷ ಸ್ಥಾನ ಸ್ವೀಕರಿಸುತ್ತಿರುವುದು ಮರೆಯಲಾಗದ ಕ್ಷಣ. ಜನಪರ ಕಾರ್ಯಗಳಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ನಾನು ನೂರು ವರ್ಷಗಳನ್ನು ಪೂರೈಸಿ ಜಗತ್ತಿನಾದ್ಯಂತ ಸೇವಾ ಸಂಸ್ಥೆಗೆ ಹೆಸರಾಗಿರುವ ಇಂತಹ ಲಯನ್ಸ್ ಸಂಸ್ಥೆಯ ಮೂಲಕ ಮತ್ತಷ್ಟು ಸೇವಾ ಕೈಂಕರ್ಯಗಳನ್ನು ಮಾಡಲು ಸಹಕಾರ ಅತ್ಯಗತ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಕ್ಷಯ ವಿ.ಪ್ರಸಾದ್ ಪ್ರಾರ್ಥನೆ ಸಲ್ಲಿಸಿದರು. ಲಯನ್ ವೀಣಾ ಅರುಣ್‍ಕುಮಾರ್ ನಿರೂಪಿಸಿದರೆ, ಕಾರ್ಯದರ್ಶಿ ಲಯನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ) ವಂದಿಸಿದರು.

Translate »