ಮೈಸೂರಲ್ಲಿ ವಿಶೇಷ ಜನ ಜಾಗೃತಿ
ಮೈಸೂರು

ಮೈಸೂರಲ್ಲಿ ವಿಶೇಷ ಜನ ಜಾಗೃತಿ

June 12, 2018

ದಯವಿಟ್ಟು ವಾಹನ ಚಾಲನೆ ವೇಳೆ ಮೊಬೈಲ್ ಬಳಸಬೇಡಿ… ನೀವು ಮಾಡುವ ತಪ್ಪಿಗೆ ಇತರರ ಬಲಿ ಪಡೆಯಬೇಡಿ…

ಮೈಸೂರು: ಮೈಸೂರಿನ ಗಂಧದಗುಡಿ ಫೌಂಡೇಷನ್ ಕಾರ್ಯಕರ್ತರು ಮೊಬೈಲ್‍ನಲ್ಲಿ ಮಾತನಾಡುತ್ತಾ ಬೈಕ್, ಕಾರು ಇನ್ನಿತರ ವಾಹನ ಚಾಲನೆಯಿಂದ ಆಗುವ ಅನಾಹುತಗಳ ಕುರಿತು ಸೋಮವಾರ ಮೈಸೂರಿನ ಕೆ.ಆರ್.ವೃತ್ತದಲ್ಲಿ ಜನಜಾಗೃತಿ ಮೂಡಿಸಿದರು.

ಗಂಧದಗುಡಿ ಫೌಂಡೇಷನ್‍ನ ಅಧ್ಯಕ್ಷ ಎನ್.ಎಲ್.ಮೋಹನ್‍ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೆ.ಅರ್.ವೃತ್ತದ ನಾಲ್ಕು ಕಡೆಗಳಲ್ಲಿ ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸಿ ತಾವು ಅಪಘಾತಕ್ಕೀಡಾಗಿ ಪಾದಚಾರಿಗಳು ಮತ್ತು ಇನ್ನಿತರರಿಗೂ ವಾಹನ ಗುದ್ದಿಸಿ ಅವರನ್ನೂ ಸಂಕಷ್ಟಕ್ಕೀಡು ಮಾಡುವುದು ಸಾಮಾನ್ಯವಾಗುತ್ತಿದೆ. ಇದರಿಂದ ಅನೇಕರು ಜೀವ ತೆತ್ತಿದ್ದಲ್ಲದೆ, ಇನ್ನಿತರರು ಗಾಯಗೊಂಡಿರುವ ಸಾಕಷ್ಟು ನಿದರ್ಶನಗಳಿವೆ. ಈ ಕಾರಣದಿಂದಾಗಿ ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಸದಿರುವಂತೆ ಮನವಿ ಮಾಡಿದರು.

ಭಾರೀ ಗಾತ್ರದ ಮೊಬೈಲ್‍ಗೆ ಕಾರು ಗುದ್ದಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದಲ್ಲದೆ, ಚಾಲಕನೂ ಜೀವ ಕಳೆದುಕೊಳ್ಳುವ ಕಾಲ್ಪನಿಕ ಚಿತ್ರವಿರುವ ಭಿತ್ತಿಪತ್ರ ಸೇರಿದಂತೆ ಮೊಬೈಲ್ ಬಳಸಿ ಬೈಕ್ ಚಾಲನೆಯಿಂದಾಗುವ ಅಪಘಾತಗಳನ್ನು ಕುರಿತ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಕಾರ್ಯಕರ್ತರು ಪ್ರದರ್ಶಿಸಿದರು.

ಪ್ರತಿನಿತ್ಯ ನೂರಾರು ಜನ ಬೈಕ್‍ಗಳಲ್ಲಿ, ಕಾರುಗಳಲ್ಲಿ ಕಿವಿಗೆ ಮೊಬೈಲ್ ಹಿಡಿದು ಚಾಲನೆ ಮಾಡುತ್ತಿದ್ದಾರೆ. ಈ ವೇಳೆ ಅವರ ಗಮನವೆಲ್ಲಾ ಮೊಬೈಲ್ ಸಂಭಾಷಣೆಯತ್ತ ಇರುವುದರಿಂದ ಅಪಘಾತವಾಗುವ ಸಾಧ್ಯತೆಯೇ ಹೆಚ್ಚು. ಇದರಿಂದ ಚಾಲಕರು ತಾವೂ ತೊಂದರೆಗೊಳಗಾಗಿ ಸಂಬಂಧಪಡದ ಇನ್ನಿತರರನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ. ಇದು ತಪ್ಪಬೇಕೆಂದರೆ ಚಾಲನೆ ವೇಳೆ ಮೊಬೈಲ್ ಬಳಸುವುದನ್ನು ಬಿಡಬೇಕು. – ಎನ್.ಎಲ್.ಮೋಹನ್‍ಕುಮಾರ್, ಅಧ್ಯಕ್ಷ, ಗಂಧದಗುಡಿ ಫೌಂಡೇಷನ್.

ಇದಕ್ಕೂ ಮುನ್ನ ನಗರದ ದೇವರಾಜ ಸಂಚಾರ ವಿಭಾಗದ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಚಾರ ವಿಭಾಗದ ಎಎಸ್‍ಐ ಪುಟ್ಟಸ್ವಾಮಿ, ಯುವರಾಜ ಕಾಲೇಜು ಉಪನ್ಯಾಸಕಿ ಡಾ.ಕೆ.ಸೌಭಾಗ್ಯವತಿ, ಫೌಂಡೇಷನ್‍ನ ಪದಾಧಿಕಾರಿಗಳಾದ ಪಿ.ವಿ.ಮನೋಹರ್, ಅನುಷಾ, ಎ.ಸಿ.ಶಿವಯೋಗಿ, ವಿ.ವಿಕಾಸ್, ನಂದೀಶ್, ಮಿಂಚು ಇನ್ನಿತರರು ಪಾಲ್ಗೊಂಡಿದ್ದರು.

ವಾಹನ ಚಾಲನೆ ವೇಳೆ ಮೊಬೈಲ್ ಬಳಸುವುದರಿಂದ ಹೆಚ್ಚು ಅಪಘಾತಗಳಾಗುತ್ತಿವೆ. ಅಂಥವರಿಗೆ ಜನಜಾಗೃತಿ ಮೂಡಿಸಲು ನಮ್ಮದೊಂದು ಸಣ್ಣ ಪ್ರಯತ್ನ. ಚಾಲಕರು ತಾವು ಮಾಡುವ ತಪ್ಪಿಗೆ ಪಾದಚಾರಿಗಳಿಗೂ ತೊಂದರೆ, ಕಷ್ಟ ಕೊಡುವುದು ಸರಿಯಲ್ಲ. – ಸಂಧ್ಯಾ ನಂದನ್, ಕಾರ್ಯದರ್ಶಿ, ಗಂಧದಗುಡಿ ಫೌಂಡೇಷನ್.

Translate »