ಲಿಂಗಾಂಬುದಿ ಕೆರೆಗೆ ಶಾಸಕ ರಾಮದಾಸ್ ಭೇಟಿ: ಕೆರೆ ಸಂರಕ್ಷಣೆ ಸಂಬಂಧ ಮುಡಾ, ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲನೆ, ಕ್ರಮಕ್ಕೆ ಸೂಚನೆ
ಮೈಸೂರು

ಲಿಂಗಾಂಬುದಿ ಕೆರೆಗೆ ಶಾಸಕ ರಾಮದಾಸ್ ಭೇಟಿ: ಕೆರೆ ಸಂರಕ್ಷಣೆ ಸಂಬಂಧ ಮುಡಾ, ಪಾಲಿಕೆ ಅಧಿಕಾರಿಗಳೊಂದಿಗೆ ಪರಿಶೀಲನೆ, ಕ್ರಮಕ್ಕೆ ಸೂಚನೆ

June 12, 2018

ಮೈಸೂರು:  ಮೈಸೂರಿನ ಶ್ರೀರಾಂಪುರ ಮತ್ತು ರಾಮಕೃಷ್ಣನಗರ ಪ್ರದೇಶಗಳಿಗೆ ಹೊಂದಿಕೊಂಡಂತಿರುವ ಲಿಂಗಾಂಬುದಿ ಕೆರೆಗೆ ಕಲುಷಿತ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಲ ದಿನಗಳಿಂದ ಒಳಚರಂಡಿ ನೀರು ಸೋರಿಕೆಯಾಗಿ ಕೆರೆಗೆ ಹರಿಯುತ್ತಿರುವುದರಿಂದ ನೀರು ಕಲುಷಿತಗೊಂಡು ದುರ್ವಾಸನೆ ಸೂಸುವಂತಾಗಿತ್ತು. ನಿತ್ಯ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರು ಹಾಗೂ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ಕಲುಷಿತ ನೀರಿನ ದುರ್ವಾಸನೆಯಿಂದ ಕಿರಿಕಿರಿ ಅನುಭವಿಸುವಂತೆಯೂ ಆಗಿತ್ತು.

ಈ ಹಿನ್ನೆಲೆಯಲ್ಲಿ ಇಂದು ನಗರಪಾಲಿಕೆ ಸದಸ್ಯರು, ಅಧಿಕಾರಿಗಳು ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಎಸ್.ಎ.ರಾಮದಾಸ್, ಕೆರೆ ಆವರಣ ಸೇರಿದಂತೆ ಸುತ್ತಮುತ್ತಲ ಬಡಾವಣೆ ಹಾಗೂ ಚರಂಡಿ ವ್ಯವಸ್ಥೆ ಪರಿಶೀಲಿಸಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಎಸ್.ಎ.ರಾಮದಾಸ್, ಲಿಂಗಾಂಬುದಿ ಕೆರೆ ಸುಮಾರು 400 ವರ್ಷಗಳ ಇತಿಹಾಸ ಹೊಂದಿದೆ. ಹಿಂದೆ ಮಹಾರಾಜರು ವರ್ಷವಿಡೀ ನೀರು ಕೆರೆಯಲ್ಲಿ ಶೇಖರಣೆ ಇರುವಂತೆ ವ್ಯವಸ್ಥೆ ಮಾಡಿದ್ದರು. ಇದೀಗ ಅನೇಕ ಕಾರಣಗಳಿಂದ ಕೆರೆ ದುಸ್ಥಿತಿಯತ್ತ ಸಾಗುತ್ತಿದೆ. ಕೆರೆಯಲ್ಲಿ ನೀರು ಹೆಚ್ಚಳಗೊಂಡಾಗ ಕೋಡಿ ಹೊಡೆಯದಂತೆ ಕೆರೆಗೆ ನಿರ್ಮಿಸಿದ್ದ ಗೇಟ್ ಅನ್ನು ಹಾಳು ಮಾಡಲಾಗಿದೆ. ಜೊತೆಗೆ 280 ಎಕರೆ ವಿಸ್ತೀರ್ಣ ಹೊಂದಿದ್ದ ಕೆರೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಪರಿಶೀಲನೆ ನಡೆಸಿದ್ದು, ಒಳಚರಂಡಿ ಸಂಪರ್ಕವನ್ನು ಮಳೆ ನೀರು ಚರಂಡಿಗೆ ಬಿಟ್ಟಿರುವುದು ಕಂಡು ಬಂದಿತು. ಇದರ ಪರಿಣಾಮ ಮಳೆ ನೀರಿನೊಂದಿಗೆ ಒಳಚರಂಡಿಯ ಕೊಳಚೆ ನೀರು ಕೆರೆಯ ಒಡಲು ಸೇರುವಂತಾಗಿದೆ. ಹೀಗಾಗಿ ಕೊಳಚೆ ನೀರು ಕೆರೆಗೆ ಹರಿಯದಂತೆ ಒಳಚರಂಡಿಗಳ ದುರಸ್ತಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಮುಡಾ ಮತ್ತು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನಧಿಕೃತವಾಗಿ ಕೆರೆ ಪ್ರದೇಶಗಳನ್ನು ಒತ್ತುವರಿ ಸಹ ಮಾಡಲಾಗಿದೆ. ಇಂತಹ ಒತ್ತುವರಿ ತೆರವುಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದ ಜಗದೀಶ್, ಶಂಕರ್, ಸೀಮಾಪ್ರಸಾದ್, ಪಾಲಿಕೆ ವಲಯ ಕಚೇರಿ-2ರ ಅಭಿವೃದ್ಧಿ ಅಧಿಕಾರಿ ರಘುಪತಿ, ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಅಭಿಯಂತರ ಯಾದವ್, ಸಹಾಯಕ ಅಭಿಯಂತರ ಕೆಂಪೇಗೌಡ, ಮುಡಾ ವಲಯ-7ರ ಸಹಾಯಕ ಆಯುಕ್ತ ರವಿ, ಸಹಾಯಕ ಅಭಿಯಂತರ ಯದುಗಿರಿ ಸೇರಿದಂತೆ ಸ್ಥಳೀಯರು ಹಾಜರಿದ್ದರು.

ಶಾಶ್ವತ ಪರಿಹಾರಕ್ಕೆ ಕ್ರಮ…

ಲಿಂಗಾಂಬುದಿ ಕೆರೆಗೆ ಕಲುಷಿತ ನೀರು ಹರಿಯದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕೆರೆಯನ್ನು ಅರಣ್ಯ ಇಲಾಖೆಗೆ ವಹಿಸಲಾಗಿದ್ದು, ಒತ್ತುವರಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಜೊತೆಗೆ ಶಾಶ್ವತ ಪರಿಹಾರ ಕೈಗೊಳ್ಳುವ ಕುರಿತು ಪಾಲಿಕೆ, ಮುಡಾ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು. ಈ ವೇಳೆ ಒಳಚರಂಡಿ ಮತ್ತು ಮಳೆ ನೀರು ಚರಂಡಿ ನಕ್ಷೆಯನ್ನು ಅವಲೋಕಿಸಿ ಶಾಶ್ವತ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಒಟ್ಟಾರೆ, ಲಿಂಗಾಂಬುದಿ ಕೆರೆಯ ಉಳಿವಿಗೆ ಹಾಗೂ ಇಲ್ಲಿನ ಪರಿಸರ ಸಂರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ. -ಎಸ್.ಎ.ರಾಮದಾಸ್

Translate »