ಚಾಮರಾಜನಗರದಿಂದ ಸ್ಪರ್ಧೆಗೆ ಶ್ರೀನಿವಾಸಪ್ರಸಾದ್ ನಿರ್ಧಾರ
ಮೈಸೂರು

ಚಾಮರಾಜನಗರದಿಂದ ಸ್ಪರ್ಧೆಗೆ ಶ್ರೀನಿವಾಸಪ್ರಸಾದ್ ನಿರ್ಧಾರ

March 16, 2019

ಬೆಂಗಳೂರು: ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್, ತಮ್ಮ ಅಭಿಮಾನಿಗಳು ಹಾಗೂ ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಮ್ಮತಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್‍ಜೀ ಅವರನ್ನು ಭೇಟಿ ಮಾಡಿದ ಶ್ರೀನಿವಾಸಪ್ರಸಾದ್, ಸುಮಾರು 15 ನಿಮಿಷ ಚರ್ಚೆ ಬಳಿಕ ತಾವು ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಗೆ ನೀಡಿದರು. ನಂತರ ಪಕ್ಷದ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ ಪ್ರಸಾದ್, ಅವರ ಜೊತೆಯಲ್ಲೂ ಸುದೀರ್ಘ ಚರ್ಚೆ ನಡೆಸಿ, ಚುನಾವಣೆಯಲ್ಲಿ ಸ್ಪರ್ಧಿ ಸಲು ನಿರ್ಧರಿಸಿದ್ದಾರೆ.

ಪ್ರಸಾದ್ ಅವರ ಸ್ಪರ್ಧೆಯ ಬಗ್ಗೆ ನಿನ್ನೆಯೇ ಬಹುತೇಕ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶ್ರೀನಿವಾಸಪ್ರಸಾದ್ ಅವರ ಸ್ಪರ್ಧೆಯನ್ನು ಖಚಿತಪಡಿಸಿದ್ದಲ್ಲದೇ, ಪ್ರಸಾದ್ ಅವರ ಗೆಲುವಿಗೆ ಶ್ರಮಿಸುವಂತೆ ಇತರ ಆಕಾಂಕ್ಷಿಗಳಿಗೆ ಸೂಚಿಸಿದ್ದಾರೆ.

ಇಂದು ಬೆಳಿಗ್ಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳಾದ ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಶಿವಣ್ಣ, ಚಾಮರಾಜನಗರ ಜಿಪಂ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್ ಅವರನ್ನು ಬಿಜೆಪಿ ಕಚೇರಿಗೆ ಕರೆಸಿಕೊಂಡ ಸಂತೋಷ್‍ಜೀ ಸುದೀರ್ಘ ಮಾತುಕತೆ ನಡೆಸಿದರು.

ಶ್ರೀನಿವಾಸಪ್ರಸಾದ್ ಅವರ ಸ್ಪರ್ಧೆಯನ್ನು ಸ್ವಾಗತಿಸಿದ ಈ ಆಕಾಂಕ್ಷಿಗಳು, ನಾವೆಲ್ಲರೂ ಪ್ರಸಾದ್ ಅವರೇ ಸ್ಪರ್ಧಿಸಬೇಕು ಎಂಬ ಇಚ್ಛೆಯನ್ನು ಹೊಂದಿದ್ದೇವೆ. ಈ ಹಿಂದೆ ಅವರ ಜೊತೆಯಲ್ಲೂ ಮಾತನಾಡಿದ್ದೆವು. ಅವರು ಸ್ಪರ್ಧೆಗೆ ಸಮ್ಮತಿಸದ ಕಾರಣ ನಾವೆಲ್ಲಾ ಆಕಾಂಕ್ಷಿಗಳಾಗಿದ್ದೆವು. ಈಗ ಪ್ರಸಾದ್ ಅವರು ಸ್ಪರ್ಧಿಸಲು ಒಪ್ಪಿರುವುದರಿಂದ ನಾವು ತನು, ಮನ, ಧನ ಅರ್ಪಿಸಿ ಅವರ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ಸಂತೋಷ್‍ಜೀ ಅವರಿಗೆ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಜಿ.ಎನ್. ನಂಜುಂಡಸ್ವಾಮಿ ಹೊರತು ಪಡಿಸಿ ಉಳಿದ ಎಲ್ಲಾ ಆಕಾಂಕ್ಷಿಗಳು ಕಚೇರಿಯಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ಬಂದ ಶ್ರೀನಿವಾಸಪ್ರಸಾದ್, ಸಂತೋಷ್‍ಜೀ ಅವರ ಜೊತೆ ಚರ್ಚೆ ನಡೆಸಿ ಒಪ್ಪಿಗೆ ಸೂಚಿಸಿದ್ದಲ್ಲದೇ, ಅಲ್ಲೇ ಇದ್ದ ನಂಜುಂಡಸ್ವಾಮಿ ಅವರಿಗೂ ತಾವು ಸ್ಪರ್ಧಿಸುವ ಬಗ್ಗೆ ಖಚಿತಪಡಿಸಿದ್ದಾರೆ. ಸೋಮವಾರದಂದು ಪ್ರಸಾದ್ ಅವರು ಮೈಸೂರಿಗೆ ತೆರಳಲಿದ್ದು, ಬಿಜೆಪಿ ಸ್ಥಳೀಯ ಮುಖಂಡರು, ತಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳ ಸಭೆ ಕರೆದು ಚುನಾವಣೆಯ ರೂಪುರೇಷೆಗಳ ಬಗ್ಗೆ ಚರ್ಚಿಸಲಿದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಶ್ರೀನಿವಾಸಪ್ರಸಾದ್ 5 ಬಾರಿ ಪ್ರತಿನಿಧಿಸಿದ್ದರು. ಅದರಲ್ಲಿ 1 ಬಾರಿ ಸಂಯುಕ್ತ ಜನತಾ ದಳದಿಂದ ಸ್ಪರ್ಧಿಸಿ ಕೇಂದ್ರ ಸಚಿವರಾದರು. ನಂತರ ನಡೆದ ಚುನಾವಣೆಯಲ್ಲಿ ತಾವು ಸ್ಪರ್ಧಿಸದೇ ತಮ್ಮ ಬೆಂಬಲಿಗರಾದ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿದ್ದರು. ತದನಂತರ ನಡೆದ ಚುನಾವಣೆಯಲ್ಲಿ ಕೊಳ್ಳೇಗಾಲ ಶಾಸಕರಾಗಿದ್ದ ಆರ್. ಧ್ರುವನಾರಾಯಣ ಅವರನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಕೂಡ ಶ್ರೀನಿವಾಸಪ್ರಸಾದ್ ಅವರೇ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಸಾದ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದ ಅವರು ಈಗ ತಮ್ಮ ಅಭಿಮಾನಿಗಳ ಒತ್ತಡದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಇದರಿಂದಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರವು ಗುರು-ಶಿಷ್ಯರ ನಡುವಿನ ಹಣಾಹಣಿಗೆ ಸಾಕ್ಷಿಯಾಗಲಿದೆ.

ಚಾಮರಾಜನಗರ ಸಂಸದ ಪ್ರಬಲರಾಗಿದ್ದಾರೆ. ಅವರ ವಿರುದ್ಧ ಗೆಲುವು ಸಾಧಿಸಬೇಕಾದರೆ ನಾನೇ ಸ್ಪರ್ಧಿಸಬೇಕು ಎಂದು ಪಕ್ಷದ ಹಿರಿಯ ಮುಖಂಡರು ನಿರ್ಧರಿಸಿದ್ದರು. ಕೆಲವು ಸರ್ವೆಗಳ ಮೂಲಕ ವರದಿ ತರಿಸಿಕೊಂಡಿದ್ದ ಮುಖಂಡರು, ಬೇರೆ ಯಾರು ಸ್ಪರ್ಧಿಸಿದರು ಗೆಲುವು ಕಷ್ಟವಾಗುತ್ತದೆ. ಆದ್ದರಿಂದ ನಾನೇ ಸ್ಪರ್ಧಿಸಬೇಕು ಎಂದು ಹೇಳಿದರು. ಅದು ಮಾತ್ರವಲ್ಲದೇ ಎಲ್ಲಾ ಆಕಾಂಕ್ಷಿಗಳು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತ್ತು ನನ್ನ ಹಿತೈಷಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರಿದರು. ನಾನು ಆರೋಗ್ಯ ದೃಷ್ಟಿಯಿಂದ ಚುನಾವಣಾ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರೂ ನನ್ನ ರಾಜಕೀಯ ಜೀವನದಲ್ಲಿ ಬೆನ್ನೆಲುಬಾಗಿ ನಿಂತಿದ್ದ ಅಭಿಮಾನಿಗಳು ಮತ್ತು ಹಿತೈಷಿಗಳ ಭಾವನೆಗಳಿಗೆ ಗೌರವ ಕೊಡುವುದು ಒಬ್ಬ ನಾಯಕನ ಕರ್ತವ್ಯ. ಅದರಂತೆ ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಒಪ್ಪಿದ್ದೇನೆ. ಸೋಮವಾರ ಮೈಸೂರಿನ ನನ್ನ ನಿವಾಸದಲ್ಲಿ ಸಭೆ ಕರೆದು ನನ್ನ ನಿರ್ಧಾರವನ್ನು ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ತಿಳಿಸಲಿದ್ದೇನೆ. – ವಿ. ಶ್ರೀನಿವಾಸಪ್ರಸಾದ್, ಮಾಜಿ ಸಚಿವರು

Translate »