ತುಮಕೂರು ಕ್ಷೇತ್ರ ಪಡೆಯಲು ಡಿಸಿಎಂ ಪರಮೇಶ್ವರ್ ಹರಸಾಹಸ
ಮೈಸೂರು

ತುಮಕೂರು ಕ್ಷೇತ್ರ ಪಡೆಯಲು ಡಿಸಿಎಂ ಪರಮೇಶ್ವರ್ ಹರಸಾಹಸ

March 16, 2019

ಬೆಂಗಳೂರು: ತುಮಕೂರಿನಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಸ್ಪರ್ಧಿಸಿದರೆ ತಾವೂ ಅವರಿಗೆ ಬೆಂಬಲ ನೀಡಲು ಸಿದ್ದರಿದ್ದೇವೆ. ಸ್ಪರ್ಧಿಸದಿದ್ದರೆ ಕ್ಷೇತ್ರವನ್ನು ಕಾಂಗ್ರೆಸ್‍ಗೆ ವಾಪಸ್ ನೀಡುವಂತೆ ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಇಂದು ನಗರದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿ ಗಾರರೊಂದಿಗೆ

ಮಾತನಾಡಿದ ಡಾ.ಪರಮೇಶ್ವರ್, 10 ಹಾಲಿ ಸಂಸದರಿಗೆ ಟಿಕೆಟ್ ನೀಡುವಂತೆ ಪರಿಶೀಲನಾ ಸಮಿತಿ ರಾಹುಲ್ ಗಾಂಧಿ ಅವರಿಗೆ ಶಿಫಾರಸ್ಸು ಮಾಡಿತ್ತು. ಆದರೆ ದೇವೇಗೌಡ ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿ ತುಮಕೂರನ್ನು ಜೆಡಿಎಸ್ ತೆಕ್ಕೆಗೆ ಪಡೆದು ಕೊಂಡಿದ್ದಾರೆ. ಒಂದು ವೇಳೆ ದೇವೇಗೌಡ ಅವರೇ ತುಮಕೂರಿನಿಂದ ಸ್ಪರ್ಧಿಸುವುದಾದರೆ ಸ್ವಾಗತಾರ್ಹ. ಅವರಿಗಾಗಿ ನಾವೆಲ್ಲರೂ ಕೆಲಸ ಮಾಡುತ್ತೇವೆ. ಇಲ್ಲವಾದರೆ ನಮ್ಮ ಹಾಲಿ ಸಂಸದರಿಗೇ ಕ್ಷೇತ್ರ ಬಿಟ್ಟುಕೊಡುವಂತೆ ದೇವೇಗೌಡರಲ್ಲಿಯೂ ಮನವಿ ಮಾಡಿದ್ದೇನೆ. ಅಗತ್ಯ ಬಿದ್ದರೆ ರಾಹುಲ್ ಗಾಂಧಿ ಅವರನ್ನು ಸಹ ಭೇಟಿ ಮಾಡುವುದಾಗಿ ಅವರು ತಿಳಿಸಿದರು.

ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ತುಮಕೂರು ಕ್ಷೇತ್ರ ವಾಪಾಸ್ ಕಾಂಗ್ರೆಸ್‍ಗೆ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಸಂಸದ ಮುದ್ದಹನುಮೇಗೌಡ, ಕ್ಷೇತ್ರ ಏಕೆ, ಹೇಗೆ ಕೈ ತಪ್ಪಿತು ಎಂದು ತಾವು ಹೇಳುವುದು ಸರಿಯಾದ ಕ್ರಮವಲ್ಲ. ತಮಗೆ ಮತ್ತೆ ಕ್ಷೇತ್ರವನ್ನು ವಾಪಸ್ ನೀಡುತ್ತಾರೆ ಎಂಬ ಭರವಸೆಯಿದೆ. ತಾವೂ ಸಹ ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತನಾಡಿರುವುದಾಗಿ ತಿಳಿಸಿದರು.

Translate »