ಬೆಂಗಳೂರು ಉತ್ತರದಿಂದ ದೇವೇಗೌಡರ ಸ್ಪರ್ಧೆ ಖಚಿತ
ಮೈಸೂರು

ಬೆಂಗಳೂರು ಉತ್ತರದಿಂದ ದೇವೇಗೌಡರ ಸ್ಪರ್ಧೆ ಖಚಿತ

March 16, 2019

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟು ಸೂಕ್ತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ದೇವೇಗೌಡರ ಸ್ಪರ್ಧೆ ಖಚಿತವಾಗುತ್ತಿದ್ದಂತೆಯೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಜೊತೆ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ರೇಸ್ ಕೋರ್ಸ್ ಸರ್ಕಾರಿ ನಿವಾಸದಲ್ಲಿಂದು ಸಭೆ ನಡೆಸಿದರು.

ಇಂದಿನ ಸಭೆಯಲ್ಲಿ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಗೋಪಾ ಲಯ್ಯ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ರಾಜ ರಾಜೇಶ್ವರಿನಗರದ ಶಾಸಕ ಮುನಿರತ್ನ, ಜೆಡಿಎಸ್‍ನ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಭಾಗವಹಿಸಿದ್ದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಅವರು, ದೇವೇಗೌಡ ಅವರು ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸಿದರೆ ತಾವು ಅವರನ್ನು ಬೆಂಬಲಿಸುತ್ತೇವೆ. ಅಲ್ಲದೆ ಅವರನ್ನು ಗೆಲ್ಲಿಸಿ ಸಂಸತ್‍ಗೆ ಕಳಿಸಿ ಕೊಡಲು ತಾವುಗಳು ಸನ್ನದ್ಧರಾಗಿದ್ದೇವೆ. ಪಕ್ಷ ವಹಿಸಿದ ಕೆಲಸವನ್ನು ಶಿರಸಾ ವಹಿಸಿ ನಿರ್ವಹಿಸುವುದು ನಮ್ಮ ಕರ್ತವ್ಯವಾಗಿದೆ.

ಪಕ್ಷದ ಅಧ್ಯಕ್ಷರ ಸೂಚನೆಯ ಮೇರೆಗೆ ಸಭೆ ನಡೆಸಿ ಚರ್ಚಿಸಿದ್ದೇವೆ ಎಂದರು. ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ರೂಪಿಸ ಬೇಕಾದ ಕಾರ್ಯತಂತ್ರಗಳು, ಸೀಟು ಹಂಚಿಕೆ ಬಗ್ಗೆ, ಸಮ್ಮಿಶ್ರ ಸರ್ಕಾರದಲ್ಲಿ ಹೇಗೆ ಒಟ್ಟಿಗೆ ಕೆಲಸ ಮಾಡಬೇಕು. ಅಭಿವೃದ್ದಿ ದೃಷ್ಟಿಯಿಂದ ಹಾಗೂ ಬಿಜೆಪಿ ಅಭ್ಯರ್ಥಿಯನ್ನು ಮಣಿಸಲು ಮಾಡಬೇಕಾದ ರಣ ನೀತಿಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿರುವುದಾಗಿ ಅವರು ತಿಳಿಸಿದರು.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಇದುವರೆಗೂ ಯಾವುದೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ .ದೇವೇಗೌಡರ ಸ್ಪರ್ಧೆ ವಿಚಾರವಾಗಿ ಪಕ್ಷದ ವರಿಷ್ಠರ ಹಂತದಲ್ಲಿ ಚರ್ಚೆ ಆಗ ಬೇಕಿದೆ. ಬೆಂಗಳೂರಿನ ಒಟ್ಟು 8 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿದ್ದಾರೆ. ಈ ಬಾರಿ ಸಮ್ಮಿಶ್ರ ಸರ್ಕಾರ ಒಮ್ಮತದ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಇದೇ ವೇಳೆ ಸಿದ್ದರಾಮಯ್ಯ ಟ್ವಿಟ್ ಬಗ್ಗೆ ಪ್ರತಿಕ್ರಿಯಿಸಿದ ಕೃಷ್ಣಭೈರೇಗೌಡ, ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಈ ಹಿಂದಿನಿಂದಲೂ ಕೇಳಿ ಬಂದಿದೆ.

ಈ ಬಾರಿಯೂ ಅದೇ ಪುನರಾವರ್ತನೆಯಾಗಿದೆ. ಒಂದು ವೇಳೆ ರಾಹುಲ್ ಗಾಂಧಿ ರಾಜ್ಯದಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದರೆ ನಾವು ಎರಡು ಪಕ್ಷದವರು ಸೇರಿ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸಿಕೊಡುತ್ತೇವೆ ಎಂದರು.

Translate »