ಮಾರ್ಚ್ 18ಕ್ಕೆ ನನ್ನ ನಿರ್ಧಾರ: ಸುಮಲತಾ
ಮೈಸೂರು

ಮಾರ್ಚ್ 18ಕ್ಕೆ ನನ್ನ ನಿರ್ಧಾರ: ಸುಮಲತಾ

March 16, 2019

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಮುಗಿದ ಅಧ್ಯಾಯ. ನನ್ನ ನಿರ್ಧಾರ ಮಾರ್ಚ್ 18 ರಂದು ಪ್ರಕಟಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಇಂದಿಲ್ಲಿ ತಿಳಿಸಿದ್ದಾರೆ.

ಕೇಂದ್ರ ವಿದೇಶಾಂಗ ಮಾಜಿ ಸಚಿವ ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕೆಂಬ ಇಚ್ಛೆ ಹೊಂದಿದ್ದೇನೆ. ನನ್ನ ಪತಿ ಅಂಬರೀಶ್‍ರ ಅಭಿಮಾನಿಗಳ ಒತ್ತಾಸೆ ಮೇರೆಗೆ ರಾಜಕೀಯ ಪ್ರವೇಶ ಮಾಡಿದ್ದೇನೆ. ಮೊದಲು ಕಾಂಗ್ರೆಸ್ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ಇದೀಗ ಬಹಳ ಮುಂದೆ ಹೋಗಿದ್ದೇನೆ. ನನ್ನ ನಿರ್ಧಾರ ತಿಳಿಸಿ, ಮುಂದೆ ಜನರ ಬಳಿ ಹೋಗುತ್ತೇನೆ ಎಂದರು.

ಕೃಷ್ಣ ನಮ್ಮ ಹಿರಿಯ ನಾಯಕರು. ಅವರ ಆಶೀರ್ವಾದ ಪಡೆದು ಮಂಡ್ಯದ ವಸ್ತುಸ್ಥಿತಿ ಯನ್ನು ಅವರಿಗೆ ವಿವರಿಸಿದ್ದೇನೆ. ಅವರ ಆಶೀರ್ವಾದ ಪಡೆದರೆ ಒಳ್ಳೆಯದಾಗಲಿದೆ ಎನ್ನುವ ನಂಬಿಕೆಯಿದೆ. ಅವರಲ್ಲಿ ಬಹಳ ಗೌರವ, ಪ್ರೀತಿಯನ್ನು ನಮ್ಮ ಇಡೀ ಕುಟುಂಬ ಇಟ್ಟುಕೊಂಡಿದೆ. ಹಾಗಾಗಿ ಅವರನ್ನು ಭೇಟಿ ಮಾಡುವುದುನನ್ನ ಕರ್ತವ್ಯವಾಗಿತ್ತು ಎಂದರು.

ನನ್ನ ಅನಿಸಿಕೆಯನ್ನು ಅವರಿಗೆ ತಿಳಿಸಿದ್ದೇನೆ. ಕೃಷ್ಣ ಅವರಲ್ಲದೆ ಕೆಲವು ಆಯ್ದ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳುತ್ತೇನೆ. ನನಗೆ ಬೆಂಬಲ ಕೊಡುವುದಾಗಿ ಅಧಿಕೃತವಾಗಿ ಯಾರೂ ಹೇಳಿಲ್ಲ. ಇಂದಿನ ಸ್ಥಿತಿಯಲ್ಲಿ ಎಲ್ಲರ ಬೆಂಬಲದ ಅಗತ್ಯವಿದೆ. ಗೆಲುವು, ಸೋಲು ನಂತರದ್ದು. ಆದರೆ ಒಳ್ಳೆಯ ಉದ್ದೇಶ ಇಟ್ಟುಕೊಂಡು ಪ್ರಚಾರ ಆರಂಭಿಸಬೇಕು. ಒಳ್ಳೆಯ ರೀತಿ ಪ್ರಚಾರ ನನ್ನ ಆಸೆ ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಸುಮಲತಾ ಕಿಡಿಕಾರಿದರು. ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ಕೊಂಡೊಯ್ಯುವ ವಿಷಯದಲ್ಲಿ ನನ್ನ ಜೊತೆ ಯಾರೂ ಮಾತನಾಡಿರಲಿಲ್ಲ. ಅಂಬರೀಶ್ ಹೆಸರನ್ನು ಎಲ್ಲರೂ ಬಳಸಿಕೊಳ್ಳುವ ಸನ್ನಿವೇಶ ಇದೆ. ಯಾರೇ ಆಗಲಿ, ಪದೇ ಪದೆ ಅಂಬರೀಶ್ ಮತ್ತು ನನ್ನ ಹೆಸರು ತರದೇ ಇರೋದು ಒಳ್ಳೆಯದು ಎಂದು ಸುಮಲತಾ ಇದೇ ವೇಳೆ ಹೇಳಿದರು.

ಜೆಡಿಎಸ್ ಟಿಕೆಟ್ ಕೊಡಲು ಸಿದ್ಧವಿದ್ದೆವು ಎನ್ನುವ ಸಚಿವ ಡಿ.ಸಿ. ತಮ್ಮಣ್ಣ ಹೇಳಿಕೆ ಸುಳ್ಳು. ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅನುಕಂಪದ ಲಾಭಕ್ಕೆ ಯಾರು ಬೇಕಾದರೂ ಯತ್ನಿಸಬಹುದು. ಇದನ್ನೆಲ್ಲಾ ನಾನು ಎದುರಿಸುತ್ತೇನೆ ಎಂದು ಸುಮಲತಾ ಹೇಳಿದರು.

ನಂತರ ಎಸ್.ಎಂ ಕೃಷ್ಣ ಮಾತನಾಡಿ, ಸುಮಲತಾ ಚುನಾವಣೆಗೆ ನಿಲ್ಲುವ ಪ್ರಸ್ತಾಪ ಮಾಡಿದ್ದಾರೆ. ನಾನು ಬಿಜೆಪಿ ವರಿಷ್ಠರ ಜೊತೆ ಮಾತನಾಡುತ್ತೇನೆ. ಈಗಾಗಲೇ ಸುಮಲತಾ 18 ರಂದು ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದಾರೆ. ಆ ಹೊತ್ತಿಗಾಗಲೇ ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸಬೇಕಾ ಅಥವಾ ಸುಮಲತಾಗೆ ಬೆಂಬಲ ಘೋಷಣೆ ಮಾಡುತ್ತಾರಾ ಅನ್ನುವ ನಿರ್ಧಾರ ಕೈಗೊಳ್ಳಲಿದೆ ಎಂದರು. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಹಾಕಬೇಕು ಎನ್ನುವ ಬೇಡಿಕೆ ಇದೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.

Translate »