ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ಗೆ ಸ್ಪರ್ಧಿ-ಪ್ರತಿಸ್ಪರ್ಧಿ ತಲೆನೋವು
ಮೈಸೂರು

ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ಗೆ ಸ್ಪರ್ಧಿ-ಪ್ರತಿಸ್ಪರ್ಧಿ ತಲೆನೋವು

March 16, 2019

ಬೆಂಗಳೂರು: ಕಾಂಗ್ರೆಸ್‍ಗೆ ನಾಲ್ಕು ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಕಾಡುತ್ತಿದ್ದರೆ, ಮಿತ್ರ ಪಕ್ಷ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಕುಟುಂಬ ವ್ಯಾಮೋಹಕ್ಕೆ ಒಳಗಾಗಿರುವ ಆರೋಪ ಎದುರಿಸುತ್ತಿದ್ದು, ಮೊದಲ ಬಾರಿಗೆ 28 ಕ್ಷೇತ್ರಗಳಲ್ಲೂ ನೇರ ಪೈಪೋಟಿ ಬಿಜೆಪಿಗೆ ತಲೆನೋವು ತಂದಿದೆ.

ಕರ್ನಾಟಕದಲ್ಲಿ 20 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿ ಸಲು ನಿರ್ಧರಿಸಿರುವ ಕಾಂಗ್ರೆಸ್ ಕೊಪ್ಪಳ, ಬೆಂಗಳೂರು ದಕ್ಷಿಣ, ಬೆಳಗಾವಿ ಹಾಗೂ ಹಾವೇರಿ ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಡುತ್ತಿದೆ. ಇದೇ 16ಕ್ಕೆ ಪಟ್ಟಿ ಬಿಡುಗಡೆ ಮಾಡಲು ಪಕ್ಷ ನಿರ್ಧರಿಸಿದ್ದರೂ, ರಾಜ್ಯ ಘಟಕ ಈ ನಾಲ್ಕು ಕ್ಷೇತ್ರಗಳಿಗೆ ಮಾಡಿರುವ ಶಿಫಾರಸ್ಸು ವರಿಷ್ಠರಿಗೆ ತೃಪ್ತಿ ತಂದಿಲ್ಲ. ಇದರ ಮಧ್ಯೆ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರ ವಿರುದ್ಧ ವಿರೋಧಿ ಅಲೆ ಇರುವುದು ಕಾಂಗ್ರೆಸ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಲವು ನಾಯಕರು ಭೇಟಿ ಮಾಡಿ ಮಾತುಕತೆ ನಡೆಸಿದರೂ, ತಮ್ಮ ನಿರ್ಧಾರ ವನ್ನು ಗೌಪ್ಯವಾಗಿಟ್ಟಿದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ ಕೆಲವರು ಅಪಪ್ರಚಾರ ನಡೆಸುತ್ತಿರುವುದು ಗೌಡರಿಗೆ ತುಂಬಾ ಇರಿಸುಮುರಿಸು ಉಂಟು ಮಾಡಿದೆ. ಇದರಿಂದ ನೊಂದಿರುವ ಅವರು ನಾಳೆ ಸಂಜೆ ಪ್ರವಾಸದಿಂದ ಹಿಂತಿರುಗಿದ ನಂತರ ತಮ್ಮ ನಿರ್ಧಾರವನ್ನು ಪ್ರಕಟಿಸಿ, ತಮ್ಮ ಪಾಲಿನ ಎಂಟು ಕ್ಷೇತ್ರಗಳಿಗೆ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಇತರ ಪಕ್ಷಗಳಿ ಗಿಂತ ಎಲ್ಲದರಲ್ಲೂ ಒಂದು ಹೆಜ್ಜೆ ಮುಂದಿಟ್ಟಿದ್ದರೂ, ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲಿ ನೇರ ಪೈಪೋಟಿ ಎದುರಾಗಿದೆ.

ಅವರು ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಆರು ಕ್ಷೇತ್ರಗಳ ಬಗ್ಗೆ ಅಂತಹ ಒಲವನ್ನು ತೋರುತ್ತಿಲ್ಲ. ಉಳಿದ ಕ್ಷೇತ್ರಗಳಲ್ಲಿ ಹೋರಾಟ ಮಾಡಿ, ಎಲ್ಲವನ್ನೂ ಉಳಿಸಿಕೊಳ್ಳಬೇಕೆಂದು ಲೆಕ್ಕಾಚಾರ ನಡೆದಿದೆ.

ನೇರ ಪೈಪೋಟಿಯಿಂದ ನಮಗೆ ಕೆಲವೆಡೆ ಲಾಭವಾ ದರೂ, ಮತ್ತೆ ಕೆಲವೆಡೆ ನಮ್ಮ ಕ್ಷೇತ್ರಗಳೇ ಕೈ ತಪ್ಪಬಹು ದೆಂಬ ಭಯವಿದೆ. ಇಂತಹ ಕ್ಷೇತ್ರಗಳಲ್ಲಿ ಪ್ರತಿಪಕ್ಷದ ಮುಖಂಡರುಗಳನ್ನು ಸೆಳೆದುಕೊಂಡು ಮತ ಗಟ್ಟಿಮಾಡಿಕೊಳ್ಳುವ ಚಿಂತನೆ ಇದ್ದರೆ, ಮತ್ತೊಂದೆಡೆ ರಾಷ್ಟ್ರೀಯ ನಾಯಕರ ಸಮಾವೇಶ ಏರ್ಪಡಿಸಿ ಮತದಾರರನ್ನು ಸೆಳೆಯಲು ಲೆಕ್ಕಾಚಾರ ಹಾಕಿದೆ.

ಮತ್ತೊಂದೆಡೆ ಮಾಜಿ ಪ್ರಧಾನಿ ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ, ಅವರು ಕಣಕ್ಕಿಳಿದರೆ, ಅಭ್ಯರ್ಥಿ ಯಾರಾಗಬೇಕೆಂಬುದರ ಬಗ್ಗೆ ಚರ್ಚೆ ನಡೆದಿದೆ.

ತಮ್ಮ ವಶದಲ್ಲಿರುವ ಬೆಂಗಳೂರು ಉತ್ತರ ಇಲ್ಲವೆ ಕೊನೆಗಳಿಗೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿದರೆ ಹೇಗೆ, ಒಂದು ವೇಳೆ ತುಮಕೂರಿನಿಂದ ಸ್ಪರ್ಧಿಸಿದರೆ, ಆ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಳ್ಳದಂತೆ ನಿರ್ಧರಿಸಿದೆ.

ತುಮಕೂರು ಕಾಂಗ್ರೆಸ್‍ನ ಅಧೀನದಲ್ಲಿದೆ. ಅಲ್ಲಿ ಕೆಲವರು ಟಿಕೆಟ್‍ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ ಯಾರೇ ಅಭ್ಯರ್ಥಿಯಾದರೂ, ಒಬ್ಬರನ್ನೊಬ್ಬರು ಕಾಲೆಳೆದು ಪಕ್ಷಕ್ಕೆ ಹಿನ್ನಡೆ ಮಾಡುತ್ತದೆ ಎಂಬ ಭಯ ಬಿಜೆಪಿ ರಾಜ್ಯ ಘಟಕಕ್ಕಿದೆ. ಒಂದು ವೇಳೆ ಗೌಡರೇ ನಿಂತರೆ ಆ ಕ್ಷೇತ್ರದ ಬಗ್ಗೆ ಏನು ನಿರ್ಧಾರ ಕೈಗೊಳ್ಳಬೇಕೆಂದು ವರಿಷ್ಠರ ಸಲಹೆ ಪಡೆಯಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.

Translate »