ಗುಂಡ್ಲುಪೇಟೆ: ಯಾವುದೇ ಕಾರಣಕ್ಕೂ ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಡಬಾರದು ಎಂದು ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜು ಆಗ್ರಹಿಸಿದರು.
ತಾಲೂಕಿನ ಬಂಡೀಪುರ ರಾಷ್ಟ್ರೀಯ ಹೆದ್ದಾರಿ ಯಲ್ಲಿ ರಾತ್ರಿ ನಿಷೇಧವನ್ನು ತೆರವುಗೊಳಿಸಲು ಯತ್ನಿಸುತ್ತಿರುವ ಕೇರಳ ರಾಜ್ಯದ ಮನವಿಯನ್ನು ರಾಜ್ಯ ಸರ್ಕಾರ ಗಣನೆಗೆ ತೆಗೆದುಕೊಳ್ಳಬಾರದು ಮತ್ತು ರಾತ್ರಿ ನಿಷೇ ಧವನ್ನು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿ ಕನ್ನಡಪರ ಹೋರಾಟಗಾರರು ಬಂಡೀಪುರ ಹೆದ್ದಾರಿ ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್, ಈಗಾಗಲೇ ರಾತ್ರಿ ಸಂಚಾರದಿಂದ ವನ್ಯಜೀವಿಗಳ ಮಾರಣ ಹೋಮವಾಗುತ್ತಿದೆ ಎನ್ನುವುದನ್ನು ಅರಿತು ನ್ಯಾಯಾಲಯ ರಾತ್ರಿ 9 ರಿಂದ ಮುಂಜಾನೆ 6 ಗಂಟೆಯವರೆವಿಗೆ ಕೇರಳ ಹೆದ್ದಾರಿ ಮತ್ತು ತಮಿಳುನಾಡಿನ ಹೆದ್ದಾರಿ ಯಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸಿದೆ. ಇದು ಉತ್ತಮವಾದ ಕ್ರಮವಾಗಿದೆ.
ಆದರೆ ಇತ್ತೀಚೆಗೆ ಕೇರಳ ತನ್ನ ಕಳ್ಳ ದಂಧೆಯನ್ನು ಮಾಡಲು ರಾತ್ರಿ ಸಂಚಾರ ವನ್ನು ಸುಗಮಗೊಳಿಸಿಕೊಳ್ಳಲು ಹವಣಿಸುತ್ತಿದೆ. ಇದಕ್ಕೆ ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದರು.
ರಾತ್ರಿ ಸಂಚಾರ ನಿಷೇಧದ ನಂತರ ಬಂಡೀಪುರ ರಾಷ್ಟ್ರೀಯ ಉದ್ಯಾನದ ವನ್ಯಜೀವಿಗಳು ಹಾಗೂ ಅರಣ್ಯ ಪ್ರದೇ ಶದ ಉಳಿವಿಗೆ ಸಾಧ್ಯವಾಗಿದೆ. ಅಪಘಾತ ಗಳಲ್ಲಿ ವನ್ಯಜೀವಿಗಳ ಸಾವು ಕಡಿಮೆ ಯಾಗಿ ಸಂತತಿ ಹೆಚ್ಚಳವಾಗಿದೆ. ನಿರಂತರವಾಗಿ ನಡೆಯುತ್ತಿದ್ದ ಮರಳು, ಟಿಂಬರ್ ಹಾಗೂ ಕಲ್ಲು ಕಳ್ಳಸಾಗಾಣಿಕೆಗಳು ನಿಯಂತ್ರಣಕ್ಕೆ ಬಂದಿವೆ. ಆದರೂ ಕೇರಳದ ಮಾಫಿಯಾದವರು ಸಂಚಾರ ತೆರವಿಗೆ ಪ್ರಯತ್ನಿಸುತ್ತಿರುವುದಕ್ಕೆ ಸರ್ಕಾರವು ಒಪ್ಪಿಗೆ ನೀಡುವುದು ಹಾಗೂ ಫ್ಲೈಓವರ್ ನಿರ್ಮಾಣಕ್ಕೆ ಒಪ್ಪಿಗೆ ನೀಡುವುದು ಸರಿಯಲ್ಲ. ಇದಕ್ಕೆ ಒಪ್ಪಿಕೊಂಡರೆ ಅಪಾರ ಅರಣ್ಯ ಸಂಪತ್ತು ನಾಶವಾಗಲಿದೆ. ಇದರ ವಿರುದ್ಧ ಬೃಹತ್ ಹೋರಾಟ ಅನಿವಾರ್ಯ ವಾಗುತ್ತದೆ. ರಾಜ್ಯ ಬಂದ್‍ಗೆ ಕರೆ ನೀಡ ಬೇಕಾಗುತ್ತದೆ ಎಂದು ಎಚ್ಚರಿಸಿದ ವಾಟಾಳ್, ಈಗಿರುವ ಸಂಚಾರ ನಿಷೇಧವನ್ನು ರಾತ್ರಿ 9ರ ಬದಲಾಗಿ ಸಂಜೆ 6ರಿಂದ ಬೆಳಗಿನ 6ರ ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರರಾದ ಸತೀಶ್, ಕೇಶವ, ಸುರೇಶ್, ಕನ್ನಡ ಜಾಗೃತಿ ವೇದಿಕೆಯ ಮಂಜುನಾಥ, ದೇವ ಸೇರಿದಂತೆ ಇತರರಿದ್ದರು.