ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ಅಧ್ಯಯನ ಅತ್ಯಗತ್ಯ: ಜೋಹರ್ ಜಬೀನ್ ಅಭಿಮತ
ಮೈಸೂರು

ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ಅಧ್ಯಯನ ಅತ್ಯಗತ್ಯ: ಜೋಹರ್ ಜಬೀನ್ ಅಭಿಮತ

July 9, 2018

ಮೈಸೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲಿ ಪುಸ್ತಕ ನೋಡಿ ಉತ್ತರ ಬರೆಯುವ ಪರೀಕ್ಷಾ ಪದ್ಧತಿ ಜಾರಿಗೊಳಿಸಲು ಚಿಂತನೆ ನಡೆಯುತ್ತಿದ್ದು, ಇದಕ್ಕೆ ತಳಮಟ್ಟದಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಆದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕಿ ಜೋಹರ್ ಜಬೀನ್ ಅಭಿಪ್ರಾಯಪಟ್ಟರು.

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ ಮೈಸೂರು ವಿಭಾಗೀಯ ಮಟ್ಟದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಮಕ್ಕಳು ಪುಸ್ತಕ ನೋಡಿ ಪರೀಕ್ಷೆ ಬರೆಯುವ ವ್ಯವಸ್ಥೆ ಸೂಕ್ತ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಒಮ್ಮೆಲೇ ಜಾರಿಗೊಳಿಸಿದರೆ ಸಫಲವಾಗಲು ಸಾಧ್ಯವಿಲ್ಲ. ಹೀಗಾಗಿ ಇದಕ್ಕೆ ಅಧ್ಯಯನ ಅಗತ್ಯವಾಗುತ್ತದೆ. ಈ ವ್ಯವಸ್ಥೆ ಬಗ್ಗೆ ಶಿಕ್ಷಣ ತಜ್ಞರ ಕಾರ್ಯಾಗಾರ ಹಾಗೂ ಸಂವಾದದಂತಹ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದಿಂದ ಆಯೋಜಿಸಿದರೆ ಅಗತ್ಯ ರೂಪುರೇಷೆಗಳು ಹೊರಹೊಮ್ಮಲಿವೆ ಎಂದು ನುಡಿದರು.

ಈ ಪದ್ಧತಿ ಅಳವಡಿಸಿಕೊಂಡು ಯಶಸ್ವಿಯಾಗಿರುವ ದೇಶಗಳಿಗೆ ನಮ್ಮ ಶಿಕ್ಷಣ ತಜ್ಞರು ಭೇಟಿ ನೀಡಿ ಅಧ್ಯಯನ ಮಾಡುವಂತಹ ಚಟುವಟಿಕೆಗಳು ನಡೆಯಬೇಕಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದ ಅವರು, ಸಂಘದ ಚಟುವಟಿಕೆ ಕೆಲವು ವರ್ಷಗಳ ಕಾಲ ಇಲ್ಲವಾಗಿತ್ತು. ಇದೀಗ ಮತ್ತೆ ಸಂಘ ಕ್ರಿಯಾಶೀಲವಾಗುತ್ತಿರುವುದು ಉತ್ತಮ ಬೆಳವಣಿಗೆ. ಶಿಕ್ಷಣಾಧಿಕಾರಿಗಳು ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ಸಂಘದ ಮೂಲಕ ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.

ಹಾಡಿ ಸರ್ಕಾರಿ ಶಾಲೆಗೆ ಕೊಡುಗೆ: ಹೆಚ್‍ಡಿ ಕೋಟೆ ತಾಲೂಕಿನ ಬೋಗಾಪುರ ಹಾಡಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಶಶಿಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಗೌಡ ಕೊಡುಗೆಯನ್ನು ಸ್ವೀಕರಿಸಿದರು. ತಾಲೂಕು ಕೇಂದ್ರದಿಂದ 50 ಕಿ.ಮೀ. ದೂರದಲ್ಲಿರುವ ಬೋಗಾಪುರ ಹಾಡಿಯ ಈ ಶಾಲೆಯನ್ನು ಸಂಘದ ರಾಜ್ಯ ಘಟಕ ದತ್ತು ಪಡೆದುಕೊಂಡಿದೆ ಎಂದು ಪ್ರಕಟಿಸಲಾಯಿತು.

10 ಶಾಲೆಗಳಿಗೆ ಪ್ರೋತ್ಸಾಹ ಪುರಸ್ಕಾರ: ಇದೇ ವೇಳೆ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಮೈಸೂರು ಜಿಲ್ಲೆಯ 10 ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ಪುರಸ್ಕಾರ ನೀಡಲಾಯಿತು. ಇದಕ್ಕೂ ಮುನ್ನ ಸಂಘದ ರಾಜ್ಯ ಘಟಕದ ಖಜಾಂಚಿ ಪಂಕಜ ಸಂಘದ ಲೆಕ್ಕಪತ್ರಗಳನ್ನು ಮಂಡಿಸಿ, ಸದಸ್ಯರಿಂದ ಅನುಮೋದನೆ ಪಡೆದರು. 2017ರ ಅ.14ರಂದು ರಾಜ್ಯ ಸಂಘಕ್ಕೆ ಹೊಸ ಕಾರ್ಯಕಾರಿ ಸಮಿತಿ ರಚನೆಯಾಯಿತು. ಆ ಬಳಿಕ ಅನೇಕ ಚಟುವಟಿಕೆಗಳು ಸಂಘದಿಂದ ನಡೆದಿದೆ. ಜಿಲ್ಲಾ ಘಟಕಗಳಿಗೆ ಹೆಚ್ಚು ಸದಸ್ಯತ್ವ ನೋಂದಣಿ ಯಾಗಬೇಕಿದ್ದು, ಮೈಸೂರು ಜಿಲ್ಲಾ ಘಟಕದಲ್ಲಿ 186 ಸದಸ್ಯರಿದ್ದಾರೆ ಎಂದ ಅವರು, ರಾಜ್ಯದ ಜಿಲ್ಲಾ ಘಟಕಗಳ ಸದಸ್ಯರ ಅಂಕಿ-ಅಂಶಗಳನ್ನು ಸಭೆಗೆ ಮಂಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಕೆ.ಜಿ.ಆಂಜನಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋವಿಂದಯ್ಯ, ವಿಭಾಗೀಯ ಕಾರ್ಯದರ್ಶಿ ಎಂ.ಆರ್.ಅಕ್ಕಿ, ಮೈಸೂರು ಜಿಲ್ಲಾಧ್ಯಕ್ಷ ಎಂ.ರಾಜು, ಉಪಾಧ್ಯಕ್ಷೆ ಜಿ.ಶೋಭಾ, ಶಿಕ್ಷಣಾಧಿಕಾರಿ ಡಿ.ಉದಯಕುಮಾರ್ ಮತ್ತಿತರರು ವೇದಿಕೆಯಲ್ಲಿದ್ದರು. ಮೈಸೂರು ವಿಭಾಗದ 8 ಜಿಲ್ಲೆಗಳ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಹುತಾತ್ಮ ರೈತನ ಪುತ್ರಿ ಶಿಕ್ಷಣಕ್ಕೆ ನೆರವು

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ಹುತಾತ್ಮ ರೈತ ಶೈಲೇಂದ್ರ ಅವರ ಪುತ್ರಿ ಧನುಶ್ರೀ ಪೂರ್ಣ ವಿದ್ಯಾಭ್ಯಾಸದ ಖರ್ಚು ವೆಚ್ಚವನ್ನು ಸಂಘದ ರಾಜ್ಯ ಘಟಕ ವಹಿಸಿಕೊಳ್ಳಲು ನಿರ್ಧರಿಸಿದೆ ಎಂದು ಇದೇ ವೇಳೆ ಪ್ರಕಟಿಸಲಾಯಿತು. ಜೊತೆಗೆ ಮಳವಳ್ಳಿ ತಾಲೂಕಿನ ಕಾಗೆಪುರ ಗ್ರಾಮದಲ್ಲಿ ಪೂರ್ಣ ಪ್ರಜ್ಞಾ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧನುಶ್ರೀಗೆ ಶಾಲಾ ಸಮವಸ್ತ್ರದೊಂದಿಗೆ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಯಿತು. ಧನುಶ್ರೀ ತನ್ನ ತಾಯಿ ಪವಿತ್ರ ಅವರೊಂದಿಗೆ ಗಣ್ಯರಿಂದ ಪ್ರೋತ್ಸಾಹ ಧನ ಸ್ವೀಕರಿಸಿದಳು.

Translate »