ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯಪುಸ್ತಕ ನೋಡಿಕೊಂಡೆ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಚಿಂತನೆ: ಶಿಕ್ಷಣ ಸಚಿವ ಎನ್.ಮಹೇಶ್
ಚಾಮರಾಜನಗರ, ಮೈಸೂರು

ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯಪುಸ್ತಕ ನೋಡಿಕೊಂಡೆ ಪರೀಕ್ಷೆ ಬರೆಯುವ ವ್ಯವಸ್ಥೆ ಜಾರಿಗೆ ಚಿಂತನೆ: ಶಿಕ್ಷಣ ಸಚಿವ ಎನ್.ಮಹೇಶ್

June 25, 2018

ಚಾಮರಾಜನಗರ: ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳು ಪಠ್ಯಪುಸ್ತಕ ನೋಡಿಕೊಂಡೇ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಜಾರಿಗೊಳಿಸುವ ಚಿಂತನೆ ನಡೆಸಿದ್ದೇನೆ ಎಂದು ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು. ನಗರದ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್)ದ ವತಿಯಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ನಗರದ ಜೆ. ಹೆಚ್.ಪಾಟೀಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.80, ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿ ದರು. ಪ್ರಾಥಮಿಕ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಪಠ್ಯಪುಸ್ತಕ ನೋಡಿಕೊಳ್ಳದೆ ಪ್ರಶ್ನೆಗಳಿಗೆ ಉತ್ತರ ಬರೆದರೆ ಬುದ್ಧಿವಂತರು, ಉತ್ತರ ಬರೆಯ ದವರು ಪೆದ್ದರು ಎಂಬ ಸ್ಥಿತಿ ನಿರ್ಮಾಣ ಆಗಿದೆ. ಇದು ಶಿಕ್ಷಣದ ನಿಜವಾದ ಪದ್ಧತಿ ಅಲ್ಲ. ಇದೊಂದು ಅವೈಜ್ಞಾನಿಕ ಪದ್ಧತಿ. ಶೇ.2ರಿಂದ 3ರಷ್ಟು ಇರುವ ವರ್ಗ ಈ ಪದ್ಧತಿಯನ್ನು ಜಾರಿಗೊಳಿಸಿದೆ. ಈಗಿನ ಶಿಕ್ಷಣದ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕಾಗಿದೆ. ಶಿಕ್ಷಕರು ಪಾಠ ಮಾಡಿದ ನಂತರ ಅದನ್ನು ಬರೆಸುವ ಪದ್ಧತಿ ಹೋಗಬೇಕು. ಇದರ ಬದಲು ಶಿಕ್ಷಕರು ಒಂದು ಪಾಠ ಮುಗಿದ ನಂತರ ಆ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಸಿದ್ಧಪಡಿಸ ಬೇಕು. ಈ ಪ್ರಶ್ನೆಗಳನ್ನು ಮಕ್ಕಳಿಗೆ ನೀಡಿ, ಪಠ್ಯ ಪುಸ್ತಕ ವನ್ನು ನೋಡಿಕೊಂಡು ಉತ್ತರ ಬರೆಯಲು ತಿಳಿಸ ಬೇಕು. ಪಠ್ಯ ಪುಸ್ತಕವನ್ನು ನೋಡಿಕೊಂಡು ಉತ್ತರ ಬರೆಯದ ಮಕ್ಕಳು ಇದ್ದರೆ, ಅಂತಹವರಿಗೆ ಪಕ್ಕ ದಲ್ಲಿ ಕುಳಿತಿರುವ ವಿದ್ಯಾರ್ಥಿಯನ್ನು ನೋಡಿಕೊಂಡು ಉತ್ತರ ಬರೆಯಲು ತಿಳಿಸಬೇಕು. ಆಗ ವಿದ್ಯಾರ್ಥಿ ಬರೆಯುತ್ತಾ ಬರೆಯುತ್ತಾ ಕಲಿಯು ತ್ತಾನೆ. ಈ ಮೂಲಕ ವಿದ್ಯಾರ್ಥಿ ಹೆಚ್ಚು ಹೆಚ್ಚು ಸೃಜನಶೀಲ ನಾಗುತ್ತಾನೆ ಎಂದು ಸಚಿವರು ಹೇಳಿದರು.

ಇದಕ್ಕೆಲ್ಲಾ ನಾನು ಭಾವುಕನಾಗಿ ಹೇಳುತ್ತಿಲ್ಲ. ನಾನೊಬ್ಬ ಶಿಕ್ಷಣ ಸಚಿವನಾಗಿಯೇ ಹೇಳುತ್ತಿದ್ದೇನೆ. ಇದು ಅಷ್ಟು ಸುಲಭವೂ ಅಲ್ಲ ಎಂಬುದೂ ಸಹ ಗೊತ್ತಿದೆ. ಆದರೂ ಸಹ ಮಕ್ಕಳು ಪಠ್ಯಪುಸ್ತಕ ನೋಡಿ ಕೊಂಡು ಉತ್ತರ ಬರೆಯುವ ಪದ್ಧತಿಯನ್ನು ಜಾರಿಗೊಳಿ ಸುವ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಸುತ್ತೇನೆ. ಇದಲ್ಲದೇ ಈ ಬಗ್ಗೆ ಕಾರ್ಯಾಗಾರವೊಂದನ್ನು ನಡೆಸಿ ಇವರ ಸಾಧಕ-ಬಾಧಕಗಳನ್ನು ನೋಡುವು ದಾಗಿ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

ಮೊದಲ ಹಂತದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ತಿಂಗಳಿಗೆ 5 ಲಕ್ಷ ರೂ. ಸಂಬಳ ಪಡೆಯುವ ವ್ಯಕ್ತಿಯೊಬ್ಬ ತನಗೆ ಆದ ಲವ್ ಅಫೇರ್‍ನಿಂದ ತಾನಿದ್ದ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವ್ಯಕ್ತಿ ಪಡೆದಿದ್ದ ಶಿಕ್ಷಣ ಎಂತಹದು ಎಂಬುದನ್ನು ನೀವೇ ಊಹಿಸಿ. ಇಂತಹ ಶಿಕ್ಷಣ ಪದ್ಧತಿ ನಮಗೆ ಬೇಕಾ ಎಂದು ಪ್ರಶ್ನಿಸಿದ ಎನ್.ಮಹೇಶ್, ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣ ದೊರೆಯಬೇಕಾಗಿದೆ ಎಂದು ತಮ್ಮ ಮನೆದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ಶಿಕ್ಷಕರು ಕ್ಲಾಸ್ ರೂಂಗೆ ತೆರಳುವ ಮುನ್ನ ತಮ್ಮ ಮನೆಯ ಎಲ್ಲಾ ಗೋಜಲುಗಳನ್ನು ಬಿಟ್ಟು ಹೋಗಬೇಕು. ಮನೆಯ ಗೋಜಲುಗಳನ್ನು ತಲೆಯಲ್ಲಿ ಇಟ್ಟುಕೊಂಡು ತರಗತಿಗೆ ಹೋದರೆ, ವಿದ್ಯಾರ್ಥಿಗಳು ಕೇಡಿ ರೀತಿ ಕಾಣುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬೇಕಾದರೆ, ಶಿಕ್ಷಕರು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಪ್ಲೀಸ್ ಶಿಕ್ಷಕರೇ ಉತ್ತಮವಾಗಿ ಕೆಲಸ ಮಾಡಿ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಮನವಿ ಮಾಡಿಕೊಂಡರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ, ಸಂಸದ ಆರ್.ಧ್ರುವನಾರಾಯಣ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಐಎಎಸ್ ತರಬೇತು ದಾರ ಡಾ.ಶಿವಕುಮಾರ್, ರ್ಯಾಂಕ್ ವಿಜೇತ ವೆಂಕಟೇಶನಾಯ್ಕ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಉಪನಿರ್ದೇಶಕರಾದ ಕೆ.ಮಹದೇವಪ್ಪ, ವಿ.ಆರ್.ಶ್ಯಾಮಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಲಕ್ಷ್ಮಿಪತಿ, ಉದ್ಯಮಿ ಸಂತೇಮರಹಳ್ಳಿ ಮಾದಪ್ಪ, ಜೆಎಸ್‍ಎಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ರೋಟರಿ ಅಧ್ಯಕ್ಷ ಆರ್.ಸುಭಾಷ್, ಬಿಎಸ್‍ಪಿ ಜಿಲ್ಲಾ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಂಗರಾಮು, ಯೂನಿವರ್ಸಿಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ, ಎಂ.ವೈ.ಎಫ್ ಆಂಗ್ಲ ಶಾಲೆಯ ಆಡಳಿತಾಧಿಕಾರಿ ಮೊಹಮ್ಮದ್ ಸಾಬೀರ್, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್‍ರಾಜ್, ತಾಪಂ ಅಧ್ಯಕ್ಷ ದೊಡ್ಡಮ್ಮ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Translate »