ಸ್ವಚ್ಛನಗರ: 8ನೇ ಸ್ಥಾನಕ್ಕೆ ಕುಸಿದ ಮೈಸೂರು
ಮೈಸೂರು

ಸ್ವಚ್ಛನಗರ: 8ನೇ ಸ್ಥಾನಕ್ಕೆ ಕುಸಿದ ಮೈಸೂರು

June 25, 2018

ಮೈಸೂರು:  ಪ್ರಥಮ ಸ್ವಚ್ಛನಗರಿ ಎಂಬ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಮೈಸೂರು ಜನತೆಗೆ ನಿರಾಸೆಯಾಗಿದ್ದು, 2018ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ 8ನೇ ಸ್ಥಾನಕ್ಕೆ ಕುಸಿದಿದೆ.

ಆದರೆ 3 ರಿಂದ 10 ಲಕ್ಷ ಜನ ಸಂಖ್ಯೆಹೊಂದಿರುವ ದೇಶದ 220 ನಗರಗಳ ಪೈಕಿ ಪಾರಂಪರಿಕ ನಗರಿ ಮೈಸೂರಿಗೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಬಂದಿರುವುದು ಹೆಗ್ಗಳಿಕೆಯಾಗಿದೆ. ಮಧ್ಯಪ್ರದೇಶದ ಇಂದೂರಿನಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛನಗರ ಪ್ರಶಸ್ತಿ ಪ್ರದಾನ ಮಾಡಿದರು.

ಮೈಸೂರು ಮೇಯರ್ ಬಿ.ಭಾಗ್ಯವತಿ, ಪಾಲಿಕೆ ಕಮೀಷ್ನರ್ ಜಗದೀಶ್, ಮಾಜಿ ಕಮೀಷ್ನರ್ ಜಿ.ಜಗದೀಶ್ ಹಾಗೂ ಆರೋಗ್ಯಾಧಿಕಾರಿ ಡಾ.ನಾಗರಾಜು ಅವರು ಪ್ರಧಾನಿಗಳಿಂದ ಪ್ರಶಸ್ತಿ ಸ್ವೀಕರಿಸಿ ಇಂದು ಮುಂಜಾನೆ 3 ಗಂಟೆ ವೇಳೆ ಮೈಸೂರು ತಲುಪಿದ್ದಾರೆ

ಈ ಕುರಿತು ‘ಮೈಸೂರು ಮಿತ್ರ’ ಸಂಪರ್ಕಿಸಿದಾಗ ಮಾಹಿತಿ ನೀಡಿದ ಡಾ.ನಾಗರಾಜು ಅವರು, ಮಧ್ಯಮ ನಗರಗಳ ವಿಭಾಗದಲ್ಲಿ ಮೈಸೂರು ನಗರ ದೇಶದ ಪ್ರಥಮ ಸ್ಥಾನಗಳಿಸಿದೆ ಎಂದರು.

ಕಳೆದ ವರ್ಷ 2017ರಲ್ಲಿ ಮೈಸೂರಿಗೆ ಸ್ವಚ್ಛತೆಯಲ್ಲಿ 5ನೇ ಸ್ಥಾನ ಲಭಿಸಿತ್ತು. 2014 ಮತ್ತು 2015ರಲ್ಲಿ ಸ್ವಚ್ಛನಗರಿ ಎಂಬ ಖ್ಯಾತಿ ಗಳಿಸಿದ್ದ ಮೈಸೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಈ ಬಾರಿ ಇಂದೋರ್ ಪ್ರಥಮ, ಬೋಪಾಲ್ ದ್ವಿತೀಯ, ಚಂಡೀಘಡ ತೃತೀಯ, ನವದೆಹಲಿ ನಾಲ್ಕನೇ ಸ್ಥಾನ, ತಿರುಪತಿ 6ನೇ ಸ್ಥಾನ ಹಾಗೂ ವಿಶಾಖಪಟ್ಟಣಂ ಕ್ರಮವಾಗಿ 7ನೇ ಸ್ಥಾನ ಗಳಿಸಿದ್ದು, ಮೈಸೂರು ನಗರ 8ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ರಾಜ್ಯ ರ್ಯಾಂಕಿಂಗ್‍ನಲ್ಲಿ ಕರ್ನಾಟಕ 14ನೇ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ 5, ತೆಲಂಗಾಣ 7 ಮತ್ತು ತಮಿಳುನಾಡು ರಾಜ್ಯ 13ನೇ ಸ್ಥಾನಗಳಿಸಿದೆ. ಪ್ರಧಾನ ಮಂತ್ರ ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆಯಲ್ಲಿ ಪ್ರಮುಖವಾಗಿರುವ ‘ಸ್ವಚ್ಛ ಭಾರತ ಮಿಷನ್’ ಅಡಿ ಜನವರಿ 4ರಿಂದ ಮಾರ್ಚ್ 10ರವರೆಗೆ ದೇಶಾದ್ಯಂತ ಸ್ವಚ್ಛ ಸರ್ವೇಕ್ಷಣಾ ಕಾರ್ಯ ನಡೆದಿತ್ತು.

ಸ್ವಚ್ಛತೆಯಲ್ಲಿ ಈ ಭಾರಿ ಪ್ರಥಮ ಎನಿಸಿಕೊಳ್ಳಬೇಕೆಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ನಗರದಾದ್ಯಂತ ಸ್ವಚ್ಛತೆ ಕಾಪಾಡಿ ಸರ್ವೇಕ್ಷಣಾಧಿಕಾರಿಗಳಿಗೆ ಅಗತ್ಯ ದಾಖಲೆ ಹಾಗೂ ಮಾಹಿತಿಗಳನ್ನು ಪೂರೈಸಿದ್ದರು.
ಶೌಚಾಲಯಗಳ ನಿರ್ವಹಣೆ, ಘನ ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಕಾಪಾಡಲು ಕೈಗೊಂಡಿರುವ ವಿಧಾನಗಳು, ಆರ್ಥಿಕ ಸಭಲತೆ, ನಾಗರೀಕರ ಅನಿಸಿಕೆ ಹಾಗೂ ಪಾಲಿಕೆ ಸೇವೆಗಳ ಬಗ್ಗೆ ಜನಾಭಿಪ್ರಾಯಗಳನ್ನು ಪಡೆದು ಸ್ವಚ್ಛ ಸರ್ವೇಕ್ಷಣಾಧಿಕಾರಿಗಳು ಕಲೆಹಾಕಿ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದರು.

ಸ್ವಚ್ಛ ನಗರಿ ಪ್ರಶಸ್ತಿ ಸ್ವೀಕರಿಸಿ ಹಿಂದಿರುಗಿರುವ ಮೇಯರ್ ಹಾಗೂ ಪಾಲಿಕೆ ಕಮೀಷ್ನರ್ ನಾಳೆ (ಜೂ.25) ಮೈಸೂರಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಸಮಗ್ರ ಮಾಹಿತಿ ನೀಡಲಿದ್ದಾರೆ.

ಘನತ್ಯಾಜ್ಯ ನಿರ್ವಹಣೆಯಲ್ಲಿ ಹುಣಸೂರು ಉತ್ತಮ ಪಟ್ಟಣ

ಮೈಸೂರು:  ಮೈಸೂರು ಜಿಲ್ಲೆ ಹುಣಸೂರು ಘನತ್ಯಾಜ್ಯ ನಿರ್ವಹಣೆ ಯಲ್ಲಿ ಉತ್ತಮ ಪಟ್ಟಣ ಎಂದೆನಿಸಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ 476 ಅಂಕಗಳಿಗೆ ಹುಣಸೂರು ಪಟ್ಟಣ 280 ಅಂಕಗಳನ್ನು ಗಳಿಸಿದ್ದು, ಎಲ್ಲಾ ವಾರ್ಡ್‍ಗಳಲ್ಲೂ ಘನ ತ್ಯಾಜ್ಯ ಸಂಗ್ರಹಣೆ, ಸಾಗಣೆ ಹಾಗೂ ನಿರ್ವಹಣೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂಬ ಕಾರಣಕ್ಕೆ ಹುಣಸೂರು ಪ್ರಥಮ ಎನಿಸಿದೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಹುಣಸೂರು ನಗರ ಮುನಿಸಿ ಪಲ್ ಕೌನ್ಸಿಲ್ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಸ್ವಚ್ಛ ಸರ್ವೇಕ್ಷಣಾ ನೋಡಲ್ ಅಧಿಕಾರಿ ಪಾರ್ವತಿದೇವಿ ಅವರು, ಹುಣಸೂರಿನಲ್ಲಿ ದಿನಕ್ಕೆ 21.9 ಟನ್ ಘನ ತ್ಯಾಜ್ಯ ಸಂಗ್ರಹಿಸಲಾಗುತ್ತಿದ್ದು, ಒಣ ಮತ್ತು ಹಸಿ ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ಅದೇ ದಿನ ವಿಲೇವಾರಿ ಮಾಡುವ ಪದ್ಧತಿ ಅನುಸರಿಸಲಾಗುತ್ತಿದೆ ಎಂದರು. 1 ಲಕ್ಷ ಜನಸಂಖ್ಯೆಗಿಂತಲೂ ಹೆಚ್ಚು ನಗರಗಳ ವಿಭಾಗದಲ್ಲಿ ಹುಣಸೂರು ಮನೆ-ಮನೆಯಲ್ಲಿ ಕಸ ಸಂಗ್ರಹಣೆ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂಬುದನ್ನು ಪರಿಗಣ ಸಲಾಗಿದೆ. ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕ ವಾಹನಗಳಲ್ಲಿ ಸಾಗಿಸಲಾಗು ತ್ತಿದೆ ಎಂದು ತಿಳಿಸಿದರು. ಹುಣಸೂರು ಸಿಟಿ ಮುನಿಸಿಪಲ್ ಕೌನ್ಸಿಲ್ ಪರಿಸರ ಇಂಜಿನಿ ಯರ್ ರವಿಕುಮಾರ್ ಮಾತನಾಡಿ, ಹುಣಸೂರಲ್ಲಿ 27 ವಾರ್ಡ್‍ಗಳಿದ್ದು, ಪೌರ ಕಾರ್ಮಿಕರು ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಕಳೆದ ಐದಾರು ವರ್ಷಗಳಿಂದ ತ್ಯಾಜ್ಯ ವಿಂಗಡಣೆ ಕಾರ್ಯನಿರ್ವಹಣೆಯಾಗುತ್ತಿದೆ ಎಂದರು

Translate »