ಯೋಗ, ಆಯುರ್ವೇದ ಚಿಕಿತ್ಸೆಯಲ್ಲಿ ಮತ್ತಷ್ಟು ಸಂಶೋಧನೆ ಅವಶ್ಯ
ಮೈಸೂರು

ಯೋಗ, ಆಯುರ್ವೇದ ಚಿಕಿತ್ಸೆಯಲ್ಲಿ ಮತ್ತಷ್ಟು ಸಂಶೋಧನೆ ಅವಶ್ಯ

July 9, 2018

ಮೈಸೂರು: ಇತ್ತೀಚೆಗೆ ಜಗತ್ತಿನ ಬಹುತೇಕ ಜನರು ಯೋಗ ಮತ್ತು ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಒಲವು ತೋರುತ್ತಿರುವುದರಿಂದ, ಈ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆ ಅಗತ್ಯ ಎಂದು ಹಿರಿಯ ಆಯುರ್ವೇದ ವೈದ್ಯ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ) ಡಾ.ಎ.ಎಸ್.ಚಂದ್ರಶೇಖರ ಅಭಿಪ್ರಾಯಪಟ್ಟರು.

ಚಾಮುಂಡಿಬೆಟ್ಟ ತಪ್ಪಲಿನ ಜೆಎಸ್‍ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕಾಲೇಜು ವತಿಯಿಂದ ಆಯೋಜಿಸಿದ್ದ `ವೈದ್ಯ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆದಂತೆ ಹೆಚ್ಚಿನ ಜನರಲ್ಲಿ ಆರೋಗ್ಯ ಸಮಸ್ಯೆ, ಒತ್ತಡದ ಬದುಕು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳು ಮನುಷ್ಯನನ್ನು ಆವರಿಸುತ್ತಿವೆ. ಇವುಗಳಿಂದ ಮುಕ್ತಿ ಹೊಂದಬೇಕಾದರೆ, ರಾಸಾಯನಿಕ ವಸ್ತುಗಳಿರುವ ಔಷಧಿಗಳನ್ನು ತ್ಯಜಿಸಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮೂಲಕ ಗುಣಪಡಿಸಿಕೊಳ್ಳಲು ಹೆಚ್ಚಿನ ಜನರು ಒಲವು ವ್ಯಕ್ತಪಡಿಸುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ ಎಂದರು.

ನಾನು ಹಲವು ವರ್ಷಗಳಿಂದ ಮಡಿಕೇರಿ, ಮೈಸೂರು ಸೇರಿದಂತೆ ಇತರೆ ನಗರಗಳಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಚಿಕಿತ್ಸೆ ನೀಡಿ ಗುಣ ಪಡಿಸಿದ್ದೇನೆ. ಅದರಲ್ಲೂ ಮಡಿಕೇರಿಯಲ್ಲಿ ಆಯುರ್ವೇದ ಕ್ಲಿನಿಕ್ ಸ್ಥಾಪಿಸಿ, ಸಾಕಷ್ಟು ಮಂದಿಗೆ ಚಿಕಿತ್ಸೆ ನೀಡಿದ್ದೇನೆ ಎಂದು ತಮ್ಮ ವೃತ್ತಿ ಬದುಕಿನ ಹಾದಿಯನ್ನು ನೆನೆದರು.

ಹೊಸದಾಗಿ ಆಯುರ್ವೇದ ವೈದ್ಯ ಪದ್ಧತಿ ಅಧ್ಯಯನ ಮಾಡುತ್ತಿರುವ ಯುವ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಅಗತ್ಯ ಸಂಶೋಧನೆಯನ್ನು ಕೈಗೊಂಡು ಮತ್ತಷ್ಟು ಬೆಳೆಸಲು ಪ್ರಯತ್ನಿಸಬೇಕು. ಈ ಮೂಲಕ ಹೊಸಹೊಸ ಆವಿಷ್ಕಾರಗಳು ಕ್ಷೇತ್ರದಲ್ಲಿ ನಡೆದರೆ, ಚಿಕಿತ್ಸೆಗಾಗಿ ಹೆಚ್ಚಿನ ಜನರು ಈ ಕ್ಷೇತ್ರದತ್ತ ಮುಖ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಂದಿಗೂ ದೊಡ್ಡ ನಗರಗಳಲ್ಲಿ ಅಸ್ತಮಾ, ಶೀತ ಸೇರಿದಂತೆ ಇತರೆ ಗಂಭೀರ ಕಾಯಿಲೆಗಳಿಗೆ ಆಯುರ್ವೇದ ಚಿಕಿತ್ಸೆಯನ್ನೆ ಹೆಚ್ಚಿನ ಜನರು ಬಯಸುತ್ತಾರೆ ಎಂದರು.

ವೇದಿಕೆಯಲ್ಲಿ ಜೆಎಸ್‍ಎಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಶ್ ಎ. ಉದಪುಡಿ, ಹಿರಿಯ ಪ್ರಾಧ್ಯಾಪಕ ಡಾ.ಗವಿಮಠ ಶಿವಾನಂದ, ಡಾ.ಬಿ.ಗುರು ಬಸವರಾಜು, ಡಾ.ಜ್ಯೋತ್ನ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಲಾವಣ್ಯ ಪ್ರಾರ್ಥಿಸಿದರೆ, ಡಾ.ಕೆ.ಲಕ್ಷ್ಮೀಶ್ ಉಪಾಧ್ಯ ಸ್ವಾಗತಿಸಿದರು. ಡಾ.ಎಂ.ಎಲ್.ರಾಜೇಂದ್ರ ಪ್ರಸಾದ್ ವಂದಿಸಿದರು.

Translate »