ದಕ್ಷಿಣ ಕನ್ನಡ ಜಿಪಂನಿಂದ  ಬಾಲಕಿಯರಿಗೊಂದು ಭಾಗ್ಯ ‘ಸ್ವಚ್ಛ ಗೆಳತಿ’
ಮೈಸೂರು

ದಕ್ಷಿಣ ಕನ್ನಡ ಜಿಪಂನಿಂದ  ಬಾಲಕಿಯರಿಗೊಂದು ಭಾಗ್ಯ ‘ಸ್ವಚ್ಛ ಗೆಳತಿ’

June 19, 2018

ಮೈಲಿಗಲ್ಲಾಗುವ ಸಿಇಓ ಡಾ.ಎಂ.ಆರ್. ರವಿ  ಅವರ ಮತ್ತೊಂದು ವಿಶೇಷ ಕಾರ್ಯಕ್ರಮ

– ಎಂ.ಬಿ.ಪವನ್‍ಮೂರ್ತಿ

ಮೈಸೂರು: ಹದಿಹರೆಯಕ್ಕೆ ಕಾಲಿಡುವ ಹೆಣ್ಣು ಮಕ್ಕಳಿಗೆ ಇದ್ದಕ್ಕಿದ್ದಂತೆ ಎದುರಾಗುವ ಋತುಸ್ರಾವ ಅವರಲ್ಲಿ ಅನೇಕ ಬಗೆಯಲ್ಲಿ ಮಾನಸಿಕ ತುಮುಲಗಳಿಗೆ ಕಾರಣವಾಗಿ ಅಂಜಿಕೆ-ಆತಂಕ, ಮುಜುಗರಕ್ಕೀಡು ಮಾಡುತ್ತದೆ.

ಇಂತಹ ಆತಂಕ ನಿವಾರಿಸಿ ಆ ಬಗ್ಗೆ ವೈಜ್ಞಾನಿಕ ರೀತಿ ವಿವರಿಸಿ, ಅಂತಹ ಹೆಣ್ಣು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಪ್ಯಾಡ್ ಬಳಕೆಯನ್ನು ಪರಿಸರಕ್ಕೆ ಪೂರಕವಾಗಿ ಸೂಕ್ತ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಸಮರ್ಪಕ ಮಾಹಿತಿ ನೀಡುವ ವಿಶಿಷ್ಟ ಯೋಜನೆ ಅನು ಷ್ಠಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ಸ್ವಚ್ಛ ಭಾರತ್ ಅಭಿಯಾನದಡಿ 2018-19ನೇ ಸಾಲಿಗೆ ವಿನೂತನ ಹಾಗೂ ಉಪಯುಕ್ತ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕೈಗೆತ್ತಿಕೊಳ್ಳುತ್ತಿದೆ. `ಸ್ವಚ್ಛ ಗೆಳತಿ’ ಶೀರ್ಷಿಕೆಯ ಋತುಸ್ರಾವ ಜಾಗೃತಿ ಅಭಿಯಾನ ಹಾಗೂ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮ ಇದಾಗಿದೆ. ಇದು ಉಪಯುಕ್ತ ಹಾಗೂ ಮಾದರಿ ಕಾರ್ಯ ಕ್ರಮ ಎಂದೇ ವಿಶ್ಲೇಷಿಸಲಾಗಿದ್ದು, ಎಲ್ಲಾ ಜಿಲ್ಲಾ ಪಂಚಾ ಯಿತಿಗಳು ಅಳವಡಿಸಿಕೊಂಡರೆ ಪ್ರಯೋಜನಕಾರಿ ಆಗಲಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ.

ಹಾಗಾದರೆ ಏನೀ ಕಾರ್ಯಕ್ರಮದ ತಿರುಳು ಎಂದರೆ, ಆಪ್ತ ಸಮಾಲೋಚನಾ ಮಾದರಿಯ ಕಾರ್ಯಕ್ರಮ ಎಂದು ಸರಳವಾಗಿ ಹೇಳಬಹುದು. ಹದಿಹರೆಯದ ಬಾಲಕಿಯರಲ್ಲಿ ಆಗುವ ನೈಸರ್ಗಿಕ ಹಾಗೂ ಸಹಜ ಬದಲಾವಣೆಗಳ ಬಗೆಗೆ ವೈಜ್ಞಾನಿಕ ವಿವರಣೆ ನೀಡು ವುದು ಇದರ ಮುಖ್ಯ ಉದ್ದೇಶ. ಜೊತೆಗೆ ಋತುಚಕ್ರದ ವೇಳೆ ಬಳಸುವ ಪ್ಯಾಡ್‍ಗಳನ್ನು ಪರಿಸರ ಮಾಲಿನ್ಯಕ್ಕೆ ಆಸ್ಪದ ನೀಡದೇ ಸೂಕ್ತವಾಗಿ ನಿರ್ವಹಿಸುವ ವಿಧಾನಗಳ ಪರಿಚಯವೂ ಇದರಲ್ಲಿ ದೊರೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ 6 ಮತ್ತು 7ನೇ ತರಗತಿಯ ವಿದ್ಯಾರ್ಥಿನಿಯರಿಗೆ ಋತುಸ್ರಾವದ ವೈಜ್ಞಾನಿಕ ಹಿನ್ನೆಲೆ ಯನ್ನು ತಿಳಿಸಿ ಅವರ ಆತಂಕ ದೂರ ಮಾಡುವ ಈ ಕಾರ್ಯಕ್ರಮಕ್ಕೆ ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ (ಎನ್‍ಎಸ್‍ಎಸ್) ವಿದ್ಯಾರ್ಥಿ ನಿಯರು (ಮಾರ್ಗದರ್ಶಿನಿಯರು) ಆಪ್ತ ಸಮಾ ಲೋಚಕರ ಪಾತ್ರ ನಿರ್ವಹಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ.

ನುರಿತ ವೈದ್ಯರಿಂದ ಸಮಗ್ರ ಮಾಹಿತಿ ಪಡೆದು ಕೊಳ್ಳುವ ಮಾರ್ಗದರ್ಶಿನಿಯರು ಪ್ರೌಢಾವಸ್ಥೆಗೆ ಕಾಲಿಡುತ್ತಿರುವ ಹದಿಹರೆಯದ ಬಾಲಕಿಯರಿಗೆ ಋತುಸ್ರಾವದ ಬಗ್ಗೆ ಮಾಹಿತಿ ನೀಡಿ ಅವರಲ್ಲಿನ ತುಮುಲಗಳನ್ನು ಆಲಿಸಿ ಪರಿಹಾರ ಮಾರ್ಗಗಳನ್ನು ತಿಳಿಸಿಕೊಡಲಿದ್ದಾರೆ. ಹದಿಹರೆಯ ದಾಟಿ ಬಂದಿರುವ ಮಾರ್ಗದರ್ಶಿನಿಯರು ಋತುಚಕ್ರ ಯಾತನೆಯನ್ನು ಸ್ವತಃ ಅನುಭವಿಸಿರುವ ಹಿನ್ನೆಲೆಯಲ್ಲಿ ಬಾಲಕಿಯರ ದುಃಖ ದುಮ್ಮಾನಗಳನ್ನು ಬಹುಬೇಗ ಗ್ರಹಿಸಲಿದ್ದಾರೆ.

ಪ್ರಮುಖ ಪಾತ್ರ ವಹಿಸಲಿರುವ ಮಾರ್ಗದರ್ಶಿ ನಿಯರು: ಎನ್‍ಎಸ್‍ಎಸ್ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಮಾರ್ಗದರ್ಶಿನಿಯರಾಗಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇವರು ನಿಗದಿಪಡಿಸಿದ ಶಾಲೆಗಳಲ್ಲಿ ತರಗತಿ ತೆಗೆದುಕೊಂಡು ಪ್ರತಿ ಹೆಣ್ಣು ಮಕ್ಕಳು ವೈಯಕ್ತಿಕ ಆರೋಗ್ಯ ಕಾರ್ಡ್ ನಿರ್ವಹಿಸಬೇಕು. ಜೊತೆಗೆ ವರದಿ ಗಳನ್ನು ಸಿದ್ಧಪಡಿಸಿ ಪ್ರತಿ ತಿಂಗಳು ಸಂಬಂಧಿಸಿದ ಶಿಕ್ಷಣ ಇಲಾಖೆಯ ಬಿಆರ್‍ಪಿಗೆ ನೀಡಬೇಕಾಗುತ್ತದೆ. ಅನಂತರ ಕ್ಲಸ್ಟರ್ ಮಟ್ಟದಲ್ಲಿ ಮಾಹಿತಿಯನ್ನು ಬಿಆರ್‍ಪಿ ಕಲೆ ಹಾಕಿಕೊಂಡು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ಆ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿಯನ್ನು ಆಯಾಯ ತಾಪಂಗಳ ಇಓಗಳಿಗೆ ನೀಡಿದರೆ, ಅವರ ಮೂಲಕ ಜಿಲ್ಲಾ ಸಮಿತಿಗೆ ಅಂತಿಮವಾಗಿ ತಲುಪುವಂತೆ ಕಾರ್ಯತಂತ್ರ ರೂಪಿಸಲಾಗಿದೆ.

ಜಿಲ್ಲೆಯ ಒಟ್ಟು 32 ವೈದ್ಯಾಧಿಕಾರಿಗಳನ್ನು ಹೊಂದಿರುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ತಂಡವು ಪ್ರತಿ ಶಾಲೆಗೆ ಭೇಟಿ ನೀಡಿ ಹೆಣ್ಣು ಮಕ್ಕಳ ವೈದ್ಯಕೀಯ ತಪಾಸಣೆ ನಡೆಸುವುದು ಈ ಕಾರ್ಯಕ್ರಮದ ಮತ್ತೊಂದು ಕಾರ್ಯ ವಿಧಾನ. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳು ಜಿಲ್ಲೆಯಲ್ಲಿ 1182 ಇದ್ದು, ಈ ಶಾಲೆಗಳ 6 ಮತ್ತು 7ನೇ ತರಗತಿಯ ಒಟ್ಟು 30,734 ಹೆಣ್ಣು ಮಕ್ಕಳು ಈ ಅಭಿಯಾನದ ವ್ಯಾಪ್ತಿಗೆ ಬರಲಿದ್ದಾರೆ. ಈ ಒಟ್ಟು ಹೆಣ್ಣು ಮಕ್ಕಳಲ್ಲಿ 10ರಿಂದ 25 ಮಕ್ಕಳ ಒಳಗೊಂಡಂತೆ 1,604 ತಂಡಗಳನ್ನು ರಚನೆ ಮಾಡಲಾಗುತ್ತದೆ. ಈ ಶೈಕ್ಷಣ ಕ ಸಾಲಿನಲ್ಲಿ ಒಟ್ಟು 12,832 ತರಗತಿಗಳನ್ನು ನಡೆಸಲು ಉದ್ದೇಶಿಸಿದ್ದು, 1,604 ಮಂದಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಸಲಿದ್ದಾರೆ. 20 ಲಕ್ಷ ರೂ. ವೆಚ್ಚದಲ್ಲಿ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗುತ್ತಿದೆ.

ಮುಟ್ಟಿನ ನೈರ್ಮಲ್ಯದ ಅರಿವು, ತ್ಯಾಜ್ಯಗಳ ಸೂಕ್ತ ನಿರ್ವಹಣೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಓ ಡಾ. ಎಂ.ಆರ್. ರವಿ ‘ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಇದೇ ಜುಲೈನಲ್ಲಿ ಈ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ಶಾಲೆ ಗಳಲ್ಲಿ ಚಾಲನೆ ಪಡೆದುಕೊಳ್ಳುತ್ತಿದೆ. ಈ ಕಾರ್ಯಕ್ರಮ ಎರಡು ಉದ್ದೇಶಗಳನ್ನು ಒಳಗೊಂಡಿದೆ. ಒಂದು-ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು, ಮುಟ್ಟಿನ ಬಗೆಗೆ ಇರುವ ಮೂಢನಂಬಿಕೆಗಳು ಹಾಗೂ ಆತಂಕಗಳನ್ನು ದೂರ ಮಾಡಿ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಸುವುದು. ಮತ್ತೊಂದು-ಮುಟ್ಟಿನ ತ್ಯಾಜ್ಯ ಗಳ ಸೂಕ್ತ ನಿರ್ವಹಣೆಯ ಬಗ್ಗೆ ಶಿಕ್ಷಣ ನೀಡು ವುದಾಗಿದೆ. ಇದೇ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯ ಋತುಸ್ರಾವ ನೈರ್ಮಲ್ಯದ ಬಗ್ಗೆ ಮಾದರಿ ಸಮೀಕ್ಷೆಯನ್ನು ನಡೆಸಲಾ ಯಿತು. ಒಟ್ಟು 1291 ಆಶಾ ಕಾರ್ಯಕರ್ತೆ ಯರ ಮೂಲಕ ನಡೆಸಲಾದ ಈ ಸಮೀಕ್ಷೆಯಲ್ಲಿ ವಿವಿಧ ವಯೋಮಾನದ ಮಹಿಳೆಯರು ಹಾಗೂ ವಿದ್ಯಾರ್ಥಿ ನಿಯರ ಪೈಕಿ ಮಾಸಿಕ ಋತುಸ್ರಾವದ ವೇಳೆ ಶೇ.79 ಮಂದಿ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದರೆ, ಶೇ.20.24ರಷ್ಟು ಮಂದಿ ಬಟ್ಟೆ ಉಪಯೋಗಿಸುತ್ತಿರುವ ಅಂಶ ಕಂಡುಬಂದಿದೆ.

Dr. M.R. Ravi

ಇದರಲ್ಲಿ ಶೇ.7.99ರಷ್ಟು ಮಂದಿ 4 ಅಥವಾ ಹೆಚ್ಚು ಬಾರಿ ಪ್ಯಾಡ್ ಇಲ್ಲವೇ ಬಟ್ಟೆ ಬದಲಾವಣೆ ಮಾಡುತ್ತಾರೆ. ಶೇ.24.78ರಷ್ಟು ಮಂದಿ 3 ಬಾರಿ ಹಾಗೂ ಶೇ.67.21ರಷ್ಟು ಮಂದಿ ಎರಡು ಬಾರಿ ಪ್ಯಾಡ್ ಇಲ್ಲವೇ ಬಟ್ಟೆ ಬದಲಾಯಿ ಸುತ್ತಾರೆ. ಈ ಪೈಕಿ ಶೇ.18.55ರಷ್ಟು ಮಂದಿ ತೆಂಗಿನ ಮರದ ಗುಂಡಿ ಅಥವಾ ಕಸದ ಗುಂಡಿಗಳಿಗೆ ಹಾಕಿ ಮಣ್ಣು ಮುಚ್ಚಿದರೆ, ಶೇ.24.84ರಷ್ಟು ಮಂದಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಹಾಕುತ್ತಾರೆ. ಶೇ.14.03ರಷ್ಟು ಮಂದಿ ಶೌಚಾಲಯಕ್ಕೆ ಹಾಕುತ್ತಾರೆ. ಬಚ್ಚಲು ಮನೆಯಲ್ಲಿ ಒಲೆಯಲ್ಲಿ ಸುಡುವವರು ಶೇ.29.52ರಷ್ಟಿ ದ್ದರೆ, ಶೇ.13.01ರಷ್ಟು ಮಂದಿ ರಸ್ತೆ ಬದಿಯಲ್ಲಿ ಬಿಸಾಡು ತ್ತಾರೆ. ಹೀಗೆ ಬೃಹತ್ ಪ್ರಮಾಣದಲ್ಲಿ ಹೊರಹೊಮ್ಮುವ ಮುಟ್ಟಿನ ತ್ಯಾಜ್ಯವನ್ನು ಪರಿಸರ ಮಾಲಿನ್ಯಕ್ಕೆ ಎಡೆಮಾಡದಂತೆ ನಿರ್ವಹಿ ಸುವುದು ಮುಖ್ಯವಾಗುತ್ತದೆ. ಹೀಗಾಗಿ ಈ ತ್ಯಾಜ್ಯಗಳ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

Translate »