ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಕಾಳಜಿ ವಹಿಸಿ: ಸಚಿವ ಜೆ.ಸಿ.ಮಾಧುಸ್ವಾಮಿ
ಹಾಸನ

ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಕಾಳಜಿ ವಹಿಸಿ: ಸಚಿವ ಜೆ.ಸಿ.ಮಾಧುಸ್ವಾಮಿ

January 21, 2020

ಹಾಸನ,ಜ.20-ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತಾವು ಜ.24ರಂದು ನಡೆಸಲಿರುವ ತ್ರೈಮಾಸಿಕ ಕೆಡಿಪಿ ಸಭೆಗೆ ಪೂರಕವಾಗಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿದ ಸಚಿವರು, ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ತಲುಪಿಸುವಂತೆ ನಿರ್ದೇಶನ ನೀಡಿದರು.

ಪ್ರಧಾನ ಮಂತ್ರಿ ಕೃಷಿಕ್ ಸಮ್ಮಾನ್ ಯೋಜನೆ ಹಾಗೂ ರಾಜ್ಯ ಸರ್ಕಾರದ ನೆರವು ಯೋಜನೆಗಳನ್ನು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಬೆಳೆ ಪದ್ಧತಿ, ರಸಗೊಬ್ಬರ, ವಿಮೆ ಯೋಜನೆ ಸೇರಿದಂತೆ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ತಲುಪಬೇಕು ಎಂದು ಹೇಳಿದರು.

ಎಲ್ಲಾ ಇಲಾಖೆಗಳು ಶೀಘ್ರವಾಗಿ ಆರ್ಥಿಕ, ಭೌತಿಕ ಗುರಿಯನ್ನು ಪೂರ್ಣಗೊಳಿಸಬೇಕು. ಹಣ ಸಂಪೂರ್ಣ ಸದ್ಬಳಕೆಯಾಗಬೇಕು. ವಿಶೇಷ ಘಟಕ ಯೋಜನೆ ಹಾಗೂ ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪಬೇಕು, ಅರ್ಜಿ ವಿಲೇವಾರಿ ವಿಳಂಬವಾಗಬಾರದು. ಎಲ್ಲಾ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೆಚ್ಚಿನ ಪಿಂಚಣಿ ಅದಾಲತ್ ಹಾಗೂ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಹೋಬಳಿಗಳಲ್ಲಿ ಕಂದಾಯ ಅದಾಲತ್ ನಡೆಸಲು ಸಚಿವರು ಸೂಚಿಸಿದರು.

ಆರೋಗ್ಯ ಇಲಾಖೆಯಲ್ಲಿ ವೈದ್ಯಕೀಯ ಸೌಲಭ್ಯ ಸುಧಾರಣೆ, ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಭರ್ತಿ, ಗರ್ಭಿಣಿ ಬಾಣಂತಿಯರಿಗೆ ಉತ್ತಮ ಚಿಕಿತ್ಸೆ ಹಾಗೂ ಎಲ್ಲಾ ಬಿಪಿಎಲ್ ಕುಟುಂಬಗಳಿಗೂ ಆರೋಗ್ಯ ಕಾರ್ಡ್ ತಲುಪಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಚುರುಕುಗೊಳಿಸಿ ವಸತಿ ಯೋಜನೆಗಳನ್ನು ಅವಧಿಯೊಳಗೆ ಮುಗಿಸಬೇಕು ಎಂದ ಸಚಿವರು, ಬರ ನಿರ್ವಹಣೆ ಬಗ್ಗೆ ಈಗಲೇ ಸಿದ್ಧತೆ ನಡೆಸಿ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗದಂತೆ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.

ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಕೂಡಲೇ ಪೂರ್ಣಗೊಳ್ಳಬೇಕು. ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಜಿಲ್ಲೆ ಕಳೆದ ಬಾರಿ ಮೊದಲ ಸ್ಥಾನ ಪಡೆದಿದೆ. ಈ ಬಾರಿಯೂ ಆ ಸ್ಥಾನ ಉಳಿಸಿಕೊಳ್ಳಲು ಶ್ರಮಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಹಾಗೂ ಜಿಪಂ ಸಿಸಿಓ ಬಿ.ಎ.ಪರಮೇಶ್ ಸಭೆಯಲ್ಲಿ ಯೋಜನೆಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸೆಪಟ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿದ್ದರು.

Translate »