ದೇಶದ ಅಭಿವೃದ್ಧಿಗೆ ಶಿಕ್ಷಕರೇ ಜೀವಾಳ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಮತ
ಮಂಡ್ಯ

ದೇಶದ ಅಭಿವೃದ್ಧಿಗೆ ಶಿಕ್ಷಕರೇ ಜೀವಾಳ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅಭಿಮತ

September 6, 2018

ಮಂಡ್ಯ: ‘ದೇಶ ಅಭಿವೃದ್ಧಿ ಹೊಂದ ಬೇಕಾದರೆ ಅದಕ್ಕೆ ಶಿಕ್ಷಕರೇ ಜೀವಾಳ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿ ಕೊಡುವಲ್ಲಿ ಗುರುವಿನ ಪಾತ್ರ ಅಪಾರವಾದದ್ದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಉಪರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 130ನೇ ಜನ್ಮದಿನವನ್ನು ಇಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ದೇವರ ರೂಪದ ಮಕ್ಕಳನ್ನು ರಾಷ್ಟ್ರದ ಸತ್ಪ್ರಜೆಯನ್ನಾಗಿಸುವ ನಿಟ್ಟಿನಲ್ಲಿ ದಾರಿ ತೋರುವ ಗುರುಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸ ಬೇಕು ಎಂದು ಸಲಹೆ ನೀಡಿದರು.

ನಾನು ಜಿಲ್ಲಾ ಪಂಚಾಯತಿ ಸದಸ್ಯನಾಗಿ, ಮಂಡ್ಯ ಲೋಕಸಭಾ ಸದಸ್ಯನಾಗಿ ಹಾಗೂ ಇಂದು ಸಚಿವರಾಗಿರಲು ಮೂಲ ಕಾರಣ ನನ್ನ ಪಾಠ ಹೇಳಿದ ಗುರುಗಳಾಗಿದ್ದಾರೆ ಎಂದ ಅವರು, ಶಿಕ್ಷಕರ ದಿನಾಚರಣೆ ಮಾಡು ವುದರ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು. ಶಿಕ್ಷಕರು ರಾಜಕಾರಣಿ ಗಳ ಜೊತೆ ಗುರುತಿಸಿಕೊಳ್ಳದೇ ತಮ್ಮ ಜವಾ ಬ್ದಾರಿಯನ್ನು ನಿರ್ವಹಿಸಬೇಕು ಎಂದರು.
ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರಾಮಕೃಷ್ಣ ಮಾತನಾಡಿ, ಶಿಕ್ಷಕರ ವೃತ್ತಿ ಗೌರವಯುತವಾದದ್ದು ಹಾಗೂ ಪವಿತ್ರವಾದದ್ದಾಗಿದೆ. ಮೌಲ್ಯ ಧಾರಿತ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಕರು ಮಕ್ಕಳಿಗೆ ಪ್ರೀತಿಯಿಂದ ಪಾಠ ಕಲಿಸಬೇಕು. ಶಿಕ್ಷಕರು ಹೆಚ್ಚು ಕಲಿಯುವುದರ ಮೂಲಕ ಮಕ್ಕಳಿಗೆ ಸರಿಯಾಗಿ ವಿಷಯ ಮುಟ್ಟಿಸಬಹುದು. ಮಕ್ಕಳನ್ನು ಸರಿದಾರಿಗೆ ತರಲು ಶಿಕ್ಷಕರು ನಡವಳಿಕೆ ಚೆನ್ನಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಜ್ಞಾನಿಯಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಮರಿ ತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿ ಗೌಡ, ಎಂ.ಶೀನಿವಾಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಸ್.ನಾಗರತ್ನ ಸ್ವಾಮಿ, ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಉಪಾಧ್ಯಕ್ಷೆ ರೇಖಾ ಸುರೇಶ್, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಯಾಲಕ್ಕಿಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಇತರರು ಹಾಜರಿದ್ದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಅವಶ್ಯಕವಾಗಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಶಾಲೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. – ಸಿ.ಎಸ್.ಪುಟ್ಟರಾಜುಜಿಲ್ಲಾ ಉಸ್ತುವಾರಿ ಸಚಿವ

Translate »