ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!
ಮಂಡ್ಯ

ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!

September 6, 2018

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದ ಕಚೇರಿಯಲ್ಲಿ ಅಕ್ರಮವಾಗಿ ಲೆಕ್ಕಪತ್ರ ಗುಮಾಸ್ತ ಎಂಬ ಅನಗತ್ಯ ಹುದ್ದೆ ಸೃಷ್ಟಿಸಿಕೊಂಡು ಹೊರಗುತ್ತಿಗೆ ಮೇಲೆ ನೇಮಕವಾಗಿರುವ ವ್ಯಕ್ತಿಯನ್ನು ಸೇವೆಯಿಂದ ಬಿಡುಗಡೆ ಮಾಡಿ ಹುದ್ದೆರದ್ದುಪಡಿಸುವ ಸಂಬಂಧ ಕ್ರಮ ಜರುಗಿಸುವಂತೆ ಧಾರ್ಮಿಕ ದತ್ತಿ ಆಯುಕ್ತರು ದೇಗುಲದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ ಮತ್ತು ಮುಜರಾಯಿ ಇಲಾಖೆಯ ಸಚಿವರು ನೀಡಿರುವ ಆದೇಶದಂತೆ ದೇವಾಲಯದಲ್ಲಿ ಅನಗತ್ಯವಾದ ಲೆಕ್ಕಪತ್ರ ಗುಮಾಸ್ತ ಹುದ್ದೆ ಸೃಷ್ಟಿಸಿ ನೇಮಕವಾಗಿರುವ ಹೇಮಂತಕುಮಾರ್ ಅವರನ್ನು ವಿಮುಕ್ತಿಗೊಳಿಸಿ ಹುದ್ದೆಯನ್ನು ರದ್ದು ಮಾಡುವಂತೆ ಆಯುಕ್ತರು ಸೂಚಿಸಿದ್ದಾರೆ.

ದೇವಾಲಯದ ಮುಜರಾಯಿ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಈರೇಗೌಡ ಮತ್ತು ನೌಕರರು ಈ ಸಂಬಂಧ ದೂರು ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಾರ್ಯಾಲಯದ ಆದೇಶದಂತೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೆ ಧಾರ್ಮಿಕ ದತ್ತಿ ಇಲಾಖೆ ನಿರ್ದೇಶನ ನೀಡಿದೆ.

ನೇಮಕಾತಿ ವಯೋಮಿತಿ ಮೀರಿದ ನಂತರ ದೇವಾಲಯದಲ್ಲಿ ಲೆಕ್ಕಪತ್ರ ಗುಮಾಸ್ತ ಹುದ್ದೆ ಸೃಷ್ಟಿಸಿಕೊಂಡು ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ಹೊರ ಗುತ್ತಿಗೆಯಲ್ಲಿ ಹೇಮಂತ್ ನೇಮಕ ವಾಗಿದ್ದಾರೆ. ಕಚೇರಿಯಲ್ಲಿ 4 ಸರ್ಕಾರಿ ಹುದ್ದೆಗಳಿರುವಾಗ ಈ ಹುದ್ದೆ ಅನಾ ವಶ್ಯಕವಾಗಿದ್ದು, ದೇಗುಲಕ್ಕೆ ಆರ್ಥಿಕ ಹೊರೆ ಉಂಟುಮಾಡುತ್ತಿದೆ. ಅಲ್ಲದೆ ಈತನೇ ಕಡತ ನಿರ್ವಹಿಸುವ ಕಾರಣ ಅಧಿಕಾರಿಗಳಿಗೆ ತಪ್ಪು ಮಾರ್ಗದರ್ಶನ ನೀಡಿ ನಿಯಮ ಬಾಹಿರವಾಗಿ 4 ರಿಂದ 15 ಸಾವಿರಕ್ಕೆ ವೇತನ ಹೆಚ್ಚಳ ಮಾಡಿಸಿ ಕೊಂಡಿದ್ದಾರೆ. ಆದರೆ, ಇತರೆ 20 ವರ್ಷಗಳಿಂದ ಕೆಲಸ ಮಾಡುವ ನೌಕರರಿಗೆ ಕೇವಲ ಮೂರು-ನಾಲ್ಕು ಸಾವಿರ ವೇತನವಿದೆ.

ದೇಗುಲದ ನೌಕರರಿಗೆ ಮಾಡುವ ವಾರ್ಷಿಕ ಶೇ. 7ರಷ್ಟು ವೇತನ ಹೆಚ್ಚಳವನ್ನು ಆಯುಕ್ತರ ಆದೇಶಕ್ಕೆ ವಿರುದ್ಧವಾಗಿ ಇವರು ಮಾಡಿಕೊಳ್ಳುತ್ತಿದ್ದಾರೆ. ಮೇಲಧಿಕಾರಿಗಳಿಗೆ ಸಲ್ಲಿಸುವ ಕಡತಗಳಲ್ಲಿ ಗೊಂದಲದ ಅಂಶಗಳನ್ನು ಸೇರಿಸಿ ಪತ್ರ ವ್ಯವಹಾರಗಳು ವಿಳಂಬ ವಾಗುವಂತೆ ಮಾಡುತ್ತಿದ್ದಾರೆ. ಇದರಿಂದ ದೇವಾಲಯದ ನೌಕರರು ಮತ್ತು ಅಭಿವೃದ್ಧಿಗೆ ತೊಂದರೆಯಾಗುತ್ತಿರುವ ಕಾರಣ ಹೇಮಂತ್ ಅವರನ್ನು ಬಿಡುಗಡೆ ಮಾಡಿ ಹುದ್ದೆ ರದ್ದುಪಡಿಸಿ ಎಂದು ಮನವಿ ಮಾಡಿದ್ದರು.
ಈ ಮೂಲಕ ಆಯುಕ್ತರ ನಿರ್ದೇಶನ ದೇವಾಲಯ ತಲುಪಿದ್ದು ಹೊಸ ವಿವಾದ ಬೆಳಕಿಗೆ ಬಂದಿದೆ.

ಅಕ್ರಮ ಹುದ್ದೆ ರದ್ದು ಮಾಡಲೇಬೇಕು: ಪ್ರಕರಣದ ಸಂಬಂಧ ಪ್ರತಿಕ್ರಿಯೆ ನೀಡಿದ ಧಾರ್ಮಿಕದತ್ತಿ ಇಲಾಖೆಯ ಆಯುಕ್ತರ ಕಚೇರಿಯ ಕೇಂದ್ರ ಸ್ಥಾನೀಕ ಸಹಾಯಕ ಜಯಪ್ರಕಾಶ್ ಅವರು, ಈ ಮಾದರಿಯ ಹುದ್ದೆ ಸೃಷ್ಟಿ ಹಾಗೂ ಮುಂದುವರಿಕೆಗೆ ಇಲಾಖೆಯಲ್ಲಿ ಅವಕಾಶವೇ ಇಲ್ಲ. ಸರ್ಕಾರದಿಂದ ಮಂಜೂರಾಗಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ನಿಯಮಾನುಸಾರ ನೇಮಕ ಮಾಡಿಕೊಂಡು ಆಯುಕ್ತರಿಂದ ಅನುಮೋದನೆ ಪಡೆದುಕೊಳ್ಳ ಬೇಕು. ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಇಲಾಖೆಯ ನಿರ್ದೇಶನ ದಂತೆ ಕ್ರಮವಹಿಸಬೇಕಿದೆ. ಮತ್ತೆ ಈ ವಿಚಾರದಲ್ಲಿ ಪತ್ರ ವ್ಯವಹಾರ ಮಾಡಲು ಬರುವುದಿಲ್ಲ. ವಿವಾದ ಸೃಷ್ಟಿಸದೆ ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.

Translate »