ಜೈಲು ಸೇರಿದ ಪತ್ನಿ, ಪುತ್ರಿ ಕೊಂದ ಟೆಕ್ಕಿ
ಮೈಸೂರು

ಜೈಲು ಸೇರಿದ ಪತ್ನಿ, ಪುತ್ರಿ ಕೊಂದ ಟೆಕ್ಕಿ

May 29, 2018

ಮೈಸೂರು: ಪತ್ನಿ ಹಾಗೂ ಪುತ್ರಿಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಟೆಕ್ಕಿ ಪ್ರಜ್ವಲ್‍ನನ್ನು ಬಂಧಿಸಿ ವಿಜಯನಗರ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.

ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜೋಡಿ ಕೊಲೆ ಆರೋಪಿ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಇಂದು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ಎನ್.ಆರ್. ಉಪ ವಿಭಾಗದ ಎಸಿಪಿ ಸಿ. ಗೋಪಾಲ್ ತಿಳಿಸಿದ್ದಾರೆ.

ಮೈಸೂರಿನ ವಿಜಯನಗರ 4ನೇ ಹಂತದ ನಿವಾಸಿಯಾದ ಆರ್. ಪ್ರಜ್ವಲ್ ಮೇ 23 ರಂದು ಪತ್ನಿ ಸವಿತಾ ಹಾಗೂ 10 ವರ್ಷದ ಸಿಂಚನಾರನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದು, ಎರಡು ದಿನಗಳ ನಂತರ ಮದ್ಯದೊಂದಿಗೆ ವಿಷ ಬೆರೆಸಿ ಕುಡಿದಿದ್ದಲ್ಲದೆ, ಚಾಕುವಿನಿಂದ ಕೈ ಮತ್ತು ಕುತ್ತಿಗೆ ಭಾಗಕ್ಕೆ ಲಘುವಾಗಿ ಕೊಯ್ದುಕೊಂಡು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಸ್ವಸ್ಥನಾಗಿದ್ದ ಕಾರಣ ಅವನನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಠಾಣೆ ಪೊಲೀಸರು, ಆಸ್ಪತ್ರೆಯಲ್ಲಿ ಆತನ ಕಾವಲಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದರು.

Translate »