ಮೈಸೂರಲ್ಲಿ ಶೂಟೌಟ್: ಗ್ಯಾಂಗ್‍ಸ್ಟರ್ ಬಲಿ
ಮೈಸೂರು

ಮೈಸೂರಲ್ಲಿ ಶೂಟೌಟ್: ಗ್ಯಾಂಗ್‍ಸ್ಟರ್ ಬಲಿ

May 17, 2019

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರ್ಥಿಕ ಅಪರಾಧ ಕೃತ್ಯದಲ್ಲಿ ತೊಡಗಿದ್ದ ಉತ್ತರ ಭಾರತದ ಗ್ಯಾಂಗ್‍ಸ್ಟರ್ ಓರ್ವ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆತನ ಜೊತೆಗಿದ್ದ ಮತ್ತಿ ಬ್ಬರು ಶಸ್ತ್ರಸಜ್ಜಿತ ಗ್ಯಾಂಗ್‍ಸ್ಟರ್‍ಗಳು ಪರಾರಿ ಯಾಗಿದ್ದು, ಅವರ ಸೆರೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಹೆಬ್ಬಾಳು ರಿಂಗ್ ರಸ್ತೆ ಬಳಿ ಉತ್ತರ ಭಾರತದ ಗ್ಯಾಂಗ್‍ಸ್ಟರ್‍ಗಳನ್ನು ವಿಜಯ ನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿ ಬಂಧಿಸಲು ಮುಂದಾ ದಾಗ ಪೊಲೀಸರ ಮೇಲೆಯೇ ಪಿಸ್ತೂಲ್ ನಿಂದ ಗುಂಡು ಹಾರಿಸಲು ಮುಂದಾದ ಗ್ಯಾಂಗ್‍ಸ್ಟರ್‍ವೊಬ್ಬನನ್ನು ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಶೂಟೌಟ್ ಮಾಡಿದ್ದಾರೆ.

ಆತನ ಜೊತೆ ಇದ್ದ ಇಬ್ಬರು ರಿವಾಲ್ವರ್ ಹೊಂದಿದ್ದರು. ಅವರೂ ಕೂಡ ಪೊಲೀ ಸರ ಮೇಲೆ ದಾಳಿ ನಡೆಸಲು ಮುಂದಾಗಿ ದ್ದರು. ಆದರೆ ಇನ್ಸ್‍ಪೆಕ್ಟರ್ ಕುಮಾರ್ ಅವರು ಓರ್ವನ ಮೇಲೆ ಗುಂಡು ಹಾರಿಸಿ, ಆತ ನೆಲಕ್ಕೊರಗಿದ್ದರಿಂದ ಮತ್ತಿಬ್ಬರು ಹೆದರಿ ಪರಾರಿಯಾದರು ಎಂದು ಹೇಳಲಾಗಿದೆ.ಈ ವೇಳೆ ಗ್ಯಾಂಗ್‍ಸ್ಟರ್‍ಗಳು ಬಳಸಿದ ಟಯೋಟೋ ಈಟಿಯೋಸ್ ಕಾರು(ಕೆಎ 09 ಸಿ 6031) ಅದರ ಚಾಲಕ ಮತ್ತು ಗ್ಯಾಂಗ್ ಸ್ಟರ್‍ಗಳ ಜೊತೆ ಸಂಪರ್ಕ ಹೊಂದಿದ್ದ ಮೈಸೂರಿನ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿವರ: ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮೂವರು ಗ್ಯಾಂಗ್‍ಸ್ಟರ್‍ಗಳು ಮೈಸೂರಿನ ಕೆಲವರ ಸಹಕಾರದೊಂದಿಗೆ ಅಮಾನ್ಯೀಕರಣಗೊಂಡ ನೋಟುಗಳನ್ನು ಪಡೆದು ಹೊಸ ನೋಟುಗಳನ್ನು ನೀಡುವ ದಂಧೆಯಲ್ಲಿ ತೊಡಗಿದ್ದಾರೆ. ಇವರು ತನ್ನಿಂದಲೂ ಹಳೇ ನೋಟು ಪಡೆದು ಹೊಸ ನೋಟು ನೀಡದೇ ವಂಚಿಸಿದ್ದಾರೆ. ಇಂದು 500 ಕೋಟಿ ರೂ. ಅಮಾನ್ಯೀಕರಣ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ವಿಜಯನಗರದ ಎಸ್.ವಿ.ಅಪಾರ್ಟ್‍ಮೆಂಟ್ ಬಳಿ ಬರುವುದಾಗಿ ತಿಳಿಸಿದ್ದಾರೆ ಎಂದು ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಅವರಿಗೆ ಇಂದು ಬೆಳಿಗ್ಗೆ 8 ಗಂಟೆ ಸುಮಾರಿನಲ್ಲಿ ಮಾಹಿತಿದಾರರೊಬ್ಬ ಮೆಸೇಜ್ ಮಾಡಿದ್ದ. ಅಲ್ಲದೇ ಗ್ಯಾಂಗ್‍ಸ್ಟರ್‍ಗಳು ಕೆಎ-09 ಸಿ-6031 ಸಂಖ್ಯೆಯ ಟಯೋಟೋ ಈಟಿಯೋಸ್ ಕಾರಿನಲ್ಲಿ ಬರುತ್ತಿದ್ದಾರೆ ಎಂದು ಆತ ತಿಳಿಸಿದ್ದ. ಅಲ್ಲದೇ ಬೇಗನೇ ಬರುವಂತೆ ಪದೇ ಪದೆ ಮೆಸೇಜ್ ಮಾಡುತ್ತಿದ್ದ. ಸರಗಳ್ಳರ ಸೆರೆಗಾಗಿ `ಫಾಸ್ಟ್ ಟ್ರ್ಯಾಕ್’ ಕಾರ್ಯಾಚರಣೆಯಲ್ಲಿದ್ದ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಅವರು ಬೆಳಿಗ್ಗೆ 9.15ರ ಸುಮಾರಿನಲ್ಲಿ ಮಾಹಿತಿದಾರ ನೀಡಿದ ಮಾಹಿತಿ ಆಧರಿಸಿ ತಮ್ಮ ಸಿಬ್ಬಂದಿಯೊಂದಿಗೆ ಹೆಬ್ಬಾಳು ರಿಂಗ್ ರಸ್ತೆಗೆ ತೆರಳಿದ್ದಾರೆ. ಅಲ್ಲಿನ ಎಸ್.ವಿ.ಅಪಾರ್ಟ್‍ಮೆಂಟ್ ಕಡೆ ತೆರಳಿದಾಗ ಪಕ್ಕದ ಮಣ್ಣಿನ ರಸ್ತೆಯಲ್ಲಿ ಮಾಹಿತಿದಾರ ತಿಳಿಸಿದ್ದ ಈಟಿಯೋಸ್ ಕಾರು ನಿಂತಿತ್ತು. ಅದರ ಮುಂದಿನ ಸೀಟ್‍ಗಳಲ್ಲಿ ಮಾಹಿತಿದಾರ ಮತ್ತು ಚಾಲಕ ಕುಳಿತಿದ್ದರೆ, ಹಿಂಬದಿ ಸೀಟ್‍ನಲ್ಲಿ ಮೂವರು ಗ್ಯಾಂಗ್‍ಸ್ಟರ್‍ಗಳು ಕುಳಿತಿದ್ದರು.

ತಕ್ಷಣವೇ ಆ ಕಾರನ್ನು ಪೊಲೀಸರು ಸುತ್ತುವರೆದಿದ್ದಾರೆ. ಆ ವೇಳೆ ಕಾರಿನಲ್ಲಿದ್ದ ಇಬ್ಬರು ಗ್ಯಾಂಗ್‍ಸ್ಟರ್‍ಗಳು ಪೊಲೀಸ್ ಸಿಬ್ಬಂದಿಯನ್ನು ದೂಡಿದರು. ಆಗ ಅವರನ್ನು ಹಿಡಿಯಲು ಹೋದಾಗ ಆಜಾನುಬಾಹುವಾಗಿದ್ದ ಗ್ಯಾಂಗ್‍ಸ್ಟರ್‍ವೊಬ್ಬ ಪೊಲೀಸರಿಗೆ ಪಿಸ್ತೂಲ್ ತೋರಿಸಿ ಹೆದರಿಸಿದ. ಅಲ್ಲದೇ ಇನ್ಸ್‍ಪೆಕ್ಟರ್ ಬಿ.ಜಿ.ಕುಮಾರ್ ಮತ್ತು ಕಾನ್ಸ್‍ಟೇಬಲ್ ವೀರಭದ್ರ ಅವರಿಗೆ ಪಿಸ್ತೂಲಿನ ಹಿಂಬದಿಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ವೀರಭದ್ರ ಅವರ ಕುತ್ತಿಗೆಯನ್ನು ಉಸಿರಾಡಲು ಆಗದಂತೆ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಅವರನ್ನು ಬಿಡಿಸಲು ಹೋದ ಎಎಸ್‍ಐ ವೆಂಕಟೇಶ್‍ಗೌಡರ ಎದೆಗೆ ಹೊಡೆದು ತಳ್ಳಿದ್ದಾನೆ. ನಂತರ ಕುಮಾರ್ ಅವರ ಬಳಿ ಇದ್ದ ಪಿಸ್ತೂಲ್ ಕಸಿಯಲು ಮುಂದಾಗಿದ್ದಾನೆ. ಅವರಿಂದ ತಪ್ಪಿಸಿಕೊಂಡ ಕುಮಾರ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದಾಗ ಆತ ತನ್ನ ಪಿಸ್ತೂಲ್‍ನಿಂದ ಕುಮಾರ್ ಅವರ ಮೇಲೆ ಗುರಿಯಿಟ್ಟು ಗುಂಡು ಹಾರಿಸಲು ಮುಂದಾಗುತ್ತಿದ್ದಂತೆಯೇ ಇನ್ಸ್‍ಪೆಕ್ಟರ್ ಕುಮಾರ್ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟು ಬಿದ್ದ ವ್ಯಕ್ತಿ ರಸ್ತೆಗೊರಗಿದ್ದಾನೆ. ಆತನ ಜೊತೆ ಇದ್ದ ಮತ್ತಿಬ್ಬರು ರಿವಾಲ್ವರ್ ಹೊರ ತೆಗೆದು ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದರಾದರೂ, ತಮ್ಮ ಜೊತೆಗಿದ್ದ ಓರ್ವನ ಮೇಲೆ ಶೂಟೌಟ್ ಆಗಿದ್ದರಿಂದ ಹೆದರಿ ಸ್ಥಳದಿಂದ ಓಟ ಕಿತ್ತರೆಂದು ಹೇಳಲಾಗಿದೆ. ಶೂಟೌಟ್‍ನಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಆಂಬುಲೆನ್ಸ್‍ನಲ್ಲಿ ಕೆ.ಆರ್.ಆಸ್ಪತ್ರೆಗೆ ಕರೆತರಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಶೂಟೌಟ್ ವಿಷಯ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ದಕ್ಷಿಣ ವಲಯ ಐಜಿಪಿ ಉಮೇಶ್ ಕುಮಾರ್, ಪ್ರಭಾರ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ರಾಜ್ಯ ಗುಪ್ತಚರ ವಿಭಾಗದ ಎಸ್ಪಿ ಕೆ.ಟಿ.ಕವಿತಾ, ಡಿಸಿಪಿ ಎಂ.ಮುತ್ತುರಾಜ್ ಮತ್ತಿತರರು ಘಟನಾ ಸ್ಥಳ ಹಾಗೂ ಕೆ.ಆರ್.ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ವಿವರ ಪಡೆದರಲ್ಲದೇ, ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.

ಪರಾರಿಯಾಗಿರುವ ಇಬ್ಬರು ಗ್ಯಾಂಗ್‍ಸ್ಟರ್‍ಗಳ ಸೆರೆಗಾಗಿ ನಗರದಾದ್ಯಂತ ನಾಕಾ ಬಂದಿ ರಚಿಸಲಾಗಿತ್ತು. ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೂ ಗ್ಯಾಂಗ್‍ಸ್ಟರ್ ಗಳ ಬಗ್ಗೆ ಮಾಹಿತಿ ನೀಡಿ ಆಯಾ ಜಿಲ್ಲೆಯ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣೆ ಕಾರ್ಯ ಚುರುಕುಗೊಳಿಸುವಂತೆ ಸೂಚಿಸಲಾಯಿತು. ಶೂಟೌಟ್‍ನಲ್ಲಿ ಮೃತಪಟ್ಟ ಗ್ಯಾಂಗ್‍ಸ್ಟರ್‍ನ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಂಡಿ ಠಾಣೆ ಇನ್ಸ್‍ಪೆಕ್ಟರ್ ಬಸವರಾಜು ನೇತೃತ್ವದಲ್ಲಿ ಶವಾಗಾರದ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮೈಸೂರಿನ ಖಾಸಗಿ ಹೋಟೆಲಿನಲ್ಲಿ ತಂಗಿದ್ದರೆ?
ಮೈಸೂರು: ಹಣ ವಿನಿಮಯ ವೇಳೆ ಪೊಲೀಸರ ಗುಂಡೇಟಿಗೆ ಬಲಿಯಾದ ಸುಖವೇಂದ್ರ ಸಿಂಗ್ ಅಲಿಯಾಸ್ ದುರ್ಗೇಶ್ ಎಂದು ಹೇಳಲಾದ ವ್ಯಕ್ತಿ, ತನ್ನ ಇಬ್ಬರು ಸಹಚರರೊಂದಿಗೆ ಮೈಸೂರಿನ ಖಾಸಗಿ ಹೋಟೆಲೊಂದರಲ್ಲಿ ಕಳೆದ ಒಂದು ವಾರದಿಂದ ವಾಸ್ತವ್ಯ ಹೂಡಿರುವ ಮಾಹಿತಿ ಲಭ್ಯವಾಗಿದೆ.

ಈ ಮೊದಲೇ ಮೈಸೂರಿನ ಕುವೆಂಪುನಗರದ ವ್ಯಕ್ತಿಯೋರ್ವನೊಂದಿಗೆ ಸಂಪರ್ಕ ಹೊಂದಿದ್ದ, ಪಂಜಾಬಿನ ಫರಿದಾಕೋಟ್ ಮೂಲದ ಆ ಗ್ಯಾಂಗ್ ವಾರದ ಹಿಂದೆಯೇ ಬಂದು ನ್ಯೂ ಸಯ್ಯಾಜಿರಾವ್ ರಸ್ತೆಯ ಹೋಟೆಲೊಂದರಲ್ಲಿ ವಾಸ್ತವ್ಯ ಹೂಡಿ, ಮೈಸೂರಿನ ವ್ಯಕ್ತಿಯ ಸಹಾಯದಿಂದ ಹಳೇ ನೋಟು ಹೊಂದಿರುವವರಿಂದ ಲಿಖಿತ ಒಪ್ಪಂದ (ಂgಡಿeemeಟಿಣ) ಮಾಡಿಕೊಳ್ಳುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಅಂಗ್ರಿಮೆಂಟ್ ಮಾಡಿರುವ ವ್ಯಕ್ತಿಗಳಿಂದ ಅಮಾನ್ಯೀಕರಣಗೊಂಡ ನೋಟುಗಳನ್ನು ಬದಲಾಯಿಸಿಕೊಳ್ಳಲು ಕುವೆಂಪುನಗರದ ವ್ಯಕ್ತಿ ಟಯೋಟಾ ಈಟಿಯಸ್ ಕಾರಿನಲ್ಲಿ ಹೆಬ್ಬಾಳು ರಿಂಗ್ ರಸ್ತೆಯ ಅಪಾರ್ಟ್‍ಮೆಂಟ್ ಬಳಿ ತೆರಳಿದರೆ, ಸುಖವೇಂದ್ರ ಸಿಂಗ್, ಇಬ್ಬರು ಸಹಚರದೊಂದಿಗೆ ಬಾಡಿಗೆಗೆ ಪಡೆದಿದ್ದ ಟಾಟಾ ಇಂಡಿಕಾ ಕಾರಿನಲ್ಲಿ ಆ ಸ್ಥಳಕ್ಕೆ ಹೋಗಿದ್ದರು ಎನ್ನಲಾಗಿದೆ.

ಬಾತ್ಮೀದಾರ, ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್‍ಗೆ ಮಾಹಿತಿ ನೀಡಿದ್ದರು. ಸುತ್ತುವರಿದಾಗ ಕಾರಿನಲ್ಲಿ ಕುಳಿತೇ ಗರುಡ ಪೊಲೀಸ್ ಕಾನ್‍ಸ್ಪೇಬಲ್ ಕುತ್ತಿಗೆ ಹಿಡಿದ ವ್ಯಕ್ತಿಯನ್ನು ಹೊರಕ್ಕೆಳೆದು ಬಿಡಿಸಲೆತ್ನಿಸಿದಾಗ ತನ್ನಲ್ಲಿದ್ದ ಪಿಸ್ತೂಲ್ ತೋರಿಸಿದ ಆತ. ಇನ್‍ಸ್ಪೆಕ್ಟರ್ ಬಳಿ ಇದ್ದ ರಿವಾಲ್ವರ್ ಅನ್ನು ಕಿತ್ತುಕೊಳ್ಳುಲೆತ್ನಿಸಿದಾಗ ಪ್ರಾಣ ರಕ್ಷಣೆಗಾಗಿ ಬಿ.ಜಿ.ಕುಮಾರ್ ಆತನಿಗೆ ಶೂಟ್ ಮಾಡಿದರು ಎನ್ನಲಾಗಿದೆ.

ದಶಕದ ನಂತರ ಮೈಸೂರಲ್ಲಿ ಶೂಟೌಟ್
ಮೈಸೂರು: ಭಯೋತ್ಪಾದಕರನ್ನು ಸೆರೆಗಾಗಿ 2006ರಲ್ಲಿ ಶೂಟೌಟ್ ನಡೆದಿತ್ತು. ಹಣ ವಿನಿಮಯ ದಂಧೆಕೋರರ ದಾಳಿಯಿಂದ ಪಾರಾಗಲು ಶೂಟೌಟ್ ಮಾಡಲಾಗಿದೆ. ಪ್ರವೀಣ್‍ಸೂದ್ ಅವರು ಪೊಲೀಸ್ ಆಯುಕ್ತರಾಗಿದ್ದಾಗ ಹಾಲಿ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರೇ ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ ಆಗಿದ್ದರು. 2006ರ ಅಕ್ಟೋಬರ್ 26ರಂದು ರಾತ್ರಿ ಪರಾರಿಯಾಗುತ್ತಿದ್ದ ಉಗ್ರರಾದ ಫಹಾದ್ ಮತ್ತು ಮೊಹಮದ್ ಅಲಿ ಹುಸೇನ್ ಅವರನ್ನು ವಿಜಯನಗರ ಠಾಣೆ ಪೊಲೀಸರು ಹಿನಕಲ್ ಸಮೀಪ ರಿಂಗ್ ರೋಡ್‍ನಲ್ಲಿ ಶೂಟ್ ಮಾಡಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳೂ ಗಾಯಗೊಂಡಿದ್ದರು. 13 ವರ್ಷಗಳ ಬಳಿಕ ಈಗ ಅದೇ ವಿಜಯನಗರ ಪೊಲೀಸರೇ ಅದೇ ರಿಂಗ್ ರಸ್ತೆಯಲ್ಲಿ ಹಣ ವಿನಿಮಯ ದಂಧೆಕೋರರ ಕಾರ್ಯಾ ಚರಣೆಯಲ್ಲಿ ಶೂಟೌಟ್ ನಡೆಸಿದ್ದಾರೆ. ಇದರಲ್ಲಿ ಓರ್ವ ಬಲಿಯಾಗಿದ್ದಾನೆ.

ಹಳೇ ನೋಟಿನ ಸೆಕ್ಯೂರಿಟಿ ಥ್ರೆಡ್ ಬಳಸಿ ನಕಲಿ ನೋಟ್ ಸೃಷ್ಟಿ ಜಾಲವೆ?
ಮೈಸೂರು: ಅಮಾನ್ಯೀಕರಣಗೊಂಡಿ ರುವ 500 ಮತ್ತು 1000 ರೂ. ಮುಖ ಬೆಲೆಯ ಹಳೇ ನೋಟು ಗಳ ಸೆಕ್ಯೂರಿಟಿ ಥ್ರೆಡ್ (ಭದ್ರತಾ ದಾರ) ಬಳಸಿ 2000 ರೂ.ನ ನಕಲಿ ನೋಟು ತಯಾರಿಕಾ ಜಾಲದ ಗ್ಯಾಂಗ್ ಹಳೇ ನೋಟು ಗಳನ್ನು ಮೈಸೂರಿನಲ್ಲಿ ಖರೀದಿಸುತ್ತಿತ್ತು ಎಂಬ ಮಾಹಿತಿ ಲಭ್ಯ ವಾಗಿದೆ. 500 ರೂ.

ಹಾಗೂ 1000 ರೂ. ಮುಖ ಬೆಲೆಯ ನೋಟುಗಳು ಅಮಾನ್ಯೀಕರಣಗೊಂಡು ಮೂರೂವರೆ ವರ್ಷ ಕಳೆಯುತ್ತಿದ್ದರೂ, ಈಗ ಏಕೆ ಅವುಗಳನ್ನು ಖರೀದಿಸಲಾಗುತ್ತಿದೆ ಎಂಬುದನ್ನು ಅವಲೋಕಿಸಿದಾಗ ಉತ್ತರಭಾರತದ ಸುಖವೇಂದ್ರ ಸಿಂಗ್ ಅಲಿಯಾಸ್ ದುರ್ಗೇಶ ನೇತೃತ್ವದ ತಂಡ ನಕಲಿ ನೋಟು ತಯಾರಿಸಿ ಚಲಾವಣೆ ಮಾಡುವ ದಂಧೆಯಲ್ಲಿ ಸಕ್ರಿಯವಾಗಿದೆ ಎಂಬುದು ಪೊಲೀಸರಿಗೆ ತಿಳಿದಿದೆ ಎನ್ನಲಾಗಿದೆ. ಅದಕ್ಕೆ 500 ಮತ್ತು 1000 ರೂ. ಮುಖಬೆಲೆಯ ಅಮಾನ್ಯಗೊಂಡ ನೋಟುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಅವುಗಳಲ್ಲಿರುವ ಸೆಕ್ಯೂರಿಟಿ ಥ್ರೆಡ್‍ಗಳನ್ನು ಬೇರ್ಪಡಿಸಿ ತಾವು ತಯಾರಿಸುವ ನಕಲಿ 2000 ರೂ. ನಕಲಿ ನೋಟಿಗೆ ಅಳವಡಿಸಿ ಅಸಲಿ ನೋಟುಗಳೊಂದಿಗೆ ಮಾರುಕಟ್ಟೆಯಲ್ಲಿ ಈ ಗ್ಯಾಂಗ್ ಚಲಾವಣೆ ಮಾಡುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಮೈಸೂರಲ್ಲಿ ಹಳೇ ನೋಟುಗಳನ್ನು ಹೊಂದಿ ರುವವರನ್ನು ಪತ್ತೆ ಹಚ್ಚಿ, ವಿನಿಮಯ ಮಾಡಿಸಿಕೊಡುವ ಗುಂಪಿನೊಂದಿಗೆ ಸಂಪರ್ಕ ಸಾಧಿಸಿದ್ದ ಸುಖವೇಂದ್ರ ಸಿಂಗ್, ತನ್ನ ಸಹಚರರೊಂದಿಗೆ ಬೀಡು ಬಿಟ್ಟು, ಹಣ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಎಂಬುದೂ ಪೊಲೀಸರಿಗೆ ತಿಳಿದು ಬಂದಿದೆ.

ಪ್ರಾಣ ರಕ್ಷಣೆ ಅನಿವಾರ್ಯತೆ
ಮೈಸೂರು: ತಮ್ಮ ಠಾಣಾ ಸರ ಹದ್ದಿ ನಲ್ಲಿ, ಅದರಲ್ಲೂ ಠಾಣೆಯ ಅನತಿ ದೂರದಲ್ಲಿ ಹಣ ವಿನಿಮಯ ದಂತಹ ಅಕ್ರಮ ವಹಿವಾಟು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆ ಯಲ್ಲಿ ಬಾತ್ಮೀದಾರರನ್ನು ಕರೆದು ಕೊಂಡು ಸ್ಥಳಕ್ಕೆ ತೆರಳಿದ ವಿಜಯ ನಗರ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ. ಕುಮಾರ್ ಅವರಿಗೆ ಹಣ ವಿನಿಮಯ ದಂಧೆ ಕಣ್ಣಿಗೆ ಬಿದ್ದಿದೆ. ಸರಗಳ್ಳತನದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ಲ್ಲಿದ್ದ ಏಳೆಂಟು ಗರುಡ ಸಿಬ್ಬಂದಿ ಗಳೊಂದಿಗೆ ದಾಳಿ ನಡೆಸಿದಾಗ ದಂಧೆಕೋರರು ಪ್ರತಿದಾಳಿ ನಡೆಸಿದ್ದಾರೆ. ಆಗ ಅನಿವಾರ್ಯವಾಗಿ ಆತ್ಮರಕ್ಷಣೆಗಾಗಿ ಶೂಟೌಟ್ ಮಾಡಿದ್ದಾರೆ. ಮೈಸೂರು ಜಿಲ್ಲೆ, ಹೆಚ್.ಡಿ. ಕೋಟೆ ತಾಲೂಕಿನ ಬೀರಂಬಳ್ಳಿ ಗ್ರಾಮದವರಾದ ಬಿ.ಜಿ. ಕುಮಾರ್, 2005ರ ಸೆಪ್ಟೆಂಬರ್ ಮಾಹೆಯಲ್ಲಿ ಸಬ್‍ಇನ್ ಸ್ಪೆಕ್ಟರ್ ಆಗಿ ಇಲಾಖೆಗೆ ಸೇರಿದ ಅವರು
ಗುಲ್ಬರ್ಗದಲ್ಲಿ ತರಬೇತಿ ಪಡೆದು ಹಾಸನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಪ್ರೊಬೇಷ ನರಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಚಾಮರಾಜನಗರ ಗ್ರಾಮಾಂತರ, ತೆರಕಣಾಂಬಿ ಠಾಣೆ, ಶ್ರೀರಂಗಪಟ್ಟಣ, ಹಾಸನ ಪೆನ್ಷನ್ ಮೊಹಲ್ಲಾ ಹಾಗೂ ಕೊಡಗು ಜಿಲ್ಲೆಯ ಸಿದ್ದಾಪುರ ಠಾಣೆಗಳಲ್ಲಿ ಸಬ್‍ಇನ್‍ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ ಕುಮಾರ್ 2016ರ ನವೆಂಬರ್ ಮಾಹೆಯಲ್ಲಿ ಇನ್‍ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿದ್ದರು. ಚಾಮರಾಜನಗರ ಲೋಕಾಯುಕ್ತದಲ್ಲಿ ಕೆಲಸ ಮಾಡಿದ ನಂತರ ಅವರು ಒಂದು ವರ್ಷದ ಹಿಂದಷ್ಟೇ ಮೈಸೂರಿನ ವಿಜಯನಗರ ಠಾಣೆಗೆ ವರ್ಗಾವಣೆಗೊಂಡಿದ್ದರು.

ಪೊಲೀಸರ ಮೇಲೇ ದಾಳಿಗೆ ಮುಂದಾಗಿದ್ದರು
ಮೈಸೂರು: ಅಮಾನ್ಯೀಕರಣಗೊಂಡ ನೋಟುಗಳನ್ನು ಬದಲಾಯಿಸಿಕೊಳ್ಳುವ ದಂಧೆ ಭೇದಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರಿಂದ ವಿಜಯ ನಗರ ಠಾಣೆ ಇನ್‍ಸ್ಪೆಕ್ಟರ್ ಪ್ರಾಣ ರಕ್ಷಣೆಗಾಗಿ ರಿವಾಲ್ವರ್ ನಿಂದ ಶೂಟ್ ಮಾಡಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ. ಕೆ.ಆರ್. ಆಸ್ಪತ್ರೆಯಲ್ಲಿ ಘಟನೆ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ಬಾತ್ಮೀದಾರರ ಮಾಹಿತಿ ಆಧರಿಸಿ ದಾಳಿ ನಡೆಸಿದ ಇನ್‍ಸ್ಪೆಕ್ಟರ್ ಬಿ.ಜಿ.ಕುಮಾರ್ ದಂಧೆಕೋರರನ್ನು ಹಿಡಿಯಲು ಮುಂದಾದಾಗ ಹಲ್ಲೆಗೆತ್ನಿಸಿದ ವ್ಯಕ್ತಿಗೆ ಬೆಳಿಗ್ಗೆ ಸುಮಾರು 9.45 ಗಂಟೆಯಲ್ಲಿ ಶೂಟೌಟ್ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಎಂದರು.

ಪ್ರಕರಣ ಕುರಿತು ತನಿಖೆ ಆರಂಭಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗದ ನಿರ್ದೇಶನವಿರುವುದರಿಂದ ಹಾಗೂ ತನಿಖೆ ಪ್ರಗತಿಯಲ್ಲಿರುವ ಕಾರಣ ಪ್ರಕರಣ ಕುರಿತು ಮಾಹಿತಿಯನ್ನು ಬಹಿರಂಗ ಗೊಳಿಸಲು ಸಾಧ್ಯವಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

Translate »