ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಗ್ರಾಮವೊಂದ ರಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿ ಯೋರ್ವನನ್ನು ಬಂಧಿಸಿರುವ ಮ.ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಲೆಮಹದೇಶ್ವರ ಬೆಟ್ಟ ಸಮೀಪದ ತೋಕೆರೆ ಗ್ರಾಮದ ಮುರುಗ ತಮ್ಮ ಜಮೀನಿನಲ್ಲಿ 40 ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಪತ್ತೆ ಹಚ್ಚಿ ಪೊಲೀಸರು ಕ್ರಮ ವಹಿಸಿದ್ದಾರೆ. ಪೊಲೀಸ್ ಇಲಾಖೆಗೆ ದೊರೆತ ಖಚಿತ ಮಾಹಿತಿ ಆಧರಿಸಿ ಬುಧವಾರ ಮುಂಜಾನೆ ಮ.ಬೆಟ್ಟ ಇನ್‍ಸ್ಪೆಕ್ಟರ್ ಮಹೇಶ್, ಎಎಸ್‍ಐ ವೀರಭದ್ರಯ್ಯ, ಸಿಬ್ಬಂದಿಗಳಾದ ಮಣಿ, ಪ್ರಭು, ದೊರೆಸ್ವಾಮಿ, ನಂಜುಂಡಸ್ವಾಮಿ ದಾಳಿ ಮಾಡಿ ಜಮೀನಿನಲ್ಲಿ ಹುಲುಸಾಗಿ ಬೆಳೆದಿದ್ದ 40 ಗಿಡಗಳನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿ ಮುರುಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂವರೆ ಕೆಜಿ ಗಾಂಜಾ ವಶಕ್ಕೆ ಪಡೆದು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ಕ್ರಮಕೈಗೊಂಡಿದ್ದಾರೆ.