ಕರ್ತವ್ಯ ಲೋಪ ಮರೆಮಾಚುವ ಯತ್ನ: ಡಿಸಿ ನೋಟೀಸ್‍ಗೆ ಸುಮಲತಾ ಉತ್ತರ
ಮೈಸೂರು

ಕರ್ತವ್ಯ ಲೋಪ ಮರೆಮಾಚುವ ಯತ್ನ: ಡಿಸಿ ನೋಟೀಸ್‍ಗೆ ಸುಮಲತಾ ಉತ್ತರ

March 31, 2019

ಮಂಡ್ಯ:  ಮಾಧ್ಯಮಗಳಿಗೆ ನಾನು ನೀಡಿರುವ ಹೇಳಿಕೆಯು ವಾಸ್ತವಾಂಶಕ್ಕೆ ಅನುಗುಣವಾಗಿಯೂ, ನಿಜಾಂಶ ಗಳಿಂದಲೂ ಕೂಡಿದ್ದು, ನೀವು ಎಸಗಿರುವ ಕರ್ತವ್ಯ ಲೋಪ ವನ್ನು ಮರೆ ಮಾಚುವ ಹಾಗೂ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ದುರುದ್ದೇಶದಿಂದ ನನಗೆ ನೋಟೀಸ್ ನೀಡಿದ್ದೀರಿ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಉತ್ತರಿಸಿದ್ದಾರೆ.

ಸುಮಲತಾ ಅವರು ಜಿಲ್ಲಾಡಳಿತ, ಮೈತ್ರಿ ಸರ್ಕಾರದ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಯಲ್ಲಿ ಅವರಿಗೆ ಜಿಲ್ಲಾಧಿಕಾರಿಗಳು ಶುಕ್ರವಾರ ನೋಟೀಸ್ ಜಾರಿ ಮಾಡಿದ್ದರು. ಈ ನೋಟೀಸ್‍ಗೆ ಸುಮಲತಾ 2 ಪುಟಗಳ ಉತ್ತರವನ್ನು ನೀಡಿದ್ದು, ನೀವು ಮತ್ತು ನಿಮ್ಮ ಸಿಬ್ಬಂದಿ ನಡೆದುಕೊಂಡಿರುವ ನಡವಳಿಕೆಯನ್ನು ಆಧರಿಸಿ ನಾನು ನನಗಿರುವ ಹಕ್ಕನ್ನು ಚಲಾಯಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೇನೆ. ಆದ್ದರಿಂದ ನೋಟೀಸ್‍ನಲ್ಲಿ ಉಲ್ಲೇಖಿಸಿರುವ ಐಪಿಸಿ ಕಲಂ 189 ರಡಿ ಕ್ರಮ ಕೈಗೊಳ್ಳುವ ತಪ್ಪು ನನ್ನಿಂದ ನಡೆದಿರುವುದಿಲ್ಲ. ಆದ್ದರಿಂದ ನೋಟೀಸ್‍ನ್ನು ಈ ಹಂತದಲ್ಲೇ ಕೈಬಿಟ್ಟು ನ್ಯಾಯ ಪರಿಪಾಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಅವರ ಉಮೇದುವಾರಿಕೆ ಅರ್ಜಿಯ ಸಿಂಧುತ್ವದ ಬಗ್ಗೆ ಸಕಾಲದಲ್ಲಿ ನನ್ನ ಚುನಾವಣಾ ಏಜೆಂಟರು ಪ್ರಶ್ನೆ ಮಾಡಿದ್ದು, ಅವರು ಸಲ್ಲಿಸಿದ್ದ ತಕರಾರಿನ ಬಗ್ಗೆ ತಕ್ಷಣದಲ್ಲಿ ತೀರ್ಮಾನ ಕೈಗೊಳ್ಳದೇ, ಕಾಲಹರಣ ಮಾಡಿ ತಾವು ಕೈಗೊಂಡಿರುವ ಅಂಶವನ್ನು ಗಮನಿಸಿದಾಗ ಹಾಗೂ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ಚಿತ್ರೀಕರಣದ ದೃಢೀಕೃತ ನಕಲನ್ನು ಕೇಳಿದಾಗ ತಾವು ಮತ್ತು ತಮ್ಮ ಸಿಬ್ಬಂದಿ ಅದನ್ನು ನಮಗೆ ಒದಗಿಸದೇ ಕೇವಲ ಒಂದು ತುಣುಕನ್ನು ಮಾತ್ರ ನೀಡಿದ್ದೀರಿ. ಈ ರೀತಿ ನೀವು ಕರ್ತವ್ಯ ಲೋಪ ಎಸಗಿದ್ದೀರಿ ಎಂದು ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ನಾನು ಹೇಳಿರುವ ಹೇಳಿಕೆಗಳೆಲ್ಲವೂ ನಿಜಾಂಶ ಮತ್ತು ಸತ್ಯವಾದವುಗಳಾಗಿವೆ. ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ನಾನು, ನನ್ನ ಎಲ್ಲಾ ಹಕ್ಕುಗಳನ್ನು ಚಲಾಯಿಸುವುದು ನನ್ನ ಹಕ್ಕು. ನೀವು ಮತ್ತು ನಿಮ್ಮ ಸಿಬ್ಬಂದಿ ಎಸಗಿರುವ ತಪ್ಪುಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದೇನೆಯೇ ಹೊರತು ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗೆ ಅವಹೇಳನ ಮಾಡಬೇಕೆಂಬ ದೃಷ್ಟಿಯಿಂದ ಹೇಳಿಕೆ ನೀಡಿಲ್ಲ ಎಂದು ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

Translate »