ಕೆರೆಯಲ್ಲಿ ಈಜಲು ತೆರಳಿದ್ದ ಸಹೋದರರು ನೀರು ಪಾಲು
ಚಾಮರಾಜನಗರ

ಕೆರೆಯಲ್ಲಿ ಈಜಲು ತೆರಳಿದ್ದ ಸಹೋದರರು ನೀರು ಪಾಲು

April 8, 2019

ಚಾಮರಾಜನಗರ: ಕೆರೆಯಲ್ಲಿ ಈಜಲು ತೆರಳಿದ್ದ ಸಹೋದರರಿಬ್ಬರು ನೀರು ಪಾಲಾಗಿರುವ ಘಟನೆ ತಾಲೂಕಿನ ತಮ್ಮಡಹಳ್ಳಿಯ ಗುಂಜಮ್ಮನ ಕೆರೆಯಲ್ಲಿ ಭಾನುವಾರ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ದುಂದಾಸನಪುರ ಗ್ರಾಮದ ನಿವಾಸಿಗಳಾದ ರವಿ(18) ಹಾಗೂ ಪ್ರಶಾಂತ್ (20) ಸಾವನ್ನಪ್ಪಿದವರು.

ಘಟನೆ ವಿವರ: ಮೃತ ಸಹೋದರರು ಸೇರಿದಂತೆ ಐವರು ಯುಗಾದಿ ಹಬ್ಬದ ವರ್ಷದ ತುಣುಕಾದ ಭಾನು ವಾರ ಬಣ್ಣ ಹಚ್ಚಿಕೊಂಡು ಆಟವಾಡಿದ್ದಾರೆ. ನಂತರ ಮಧ್ಯಾಹ್ನದ ವೇಳೆಗೆ ಈಜಾಡಲು ತಮ್ಮಡಹಳ್ಳಿಯ ಕೆರೆಗೆ ಬಂದಿದ್ದರು. ಕೆರೆಯಲ್ಲಿ ಈಜುವಾಗ ರವಿ ಮತ್ತು ಪ್ರಶಾಂತ್ ನೀರಿನಲ್ಲಿ ಕಣ್ಮರೆಯಾದರು. ಈ ವಿಷಯ ತಿಳಿದ ಇತರ ಮೂವರು ಹೆದರಿ ನಾಪತ್ತೆಯಾದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚಾಮರಾಜನಗರ ಗ್ರಾಮಾಂತರ ಠಾಣೆ ಎಸ್‍ಐ ರವಿಕಿರಣ್ ಮತ್ತು ಸಿಬ್ಬಂದಿ ಪರಿಶೀಲಿಸಿದರು. ಈ ವೇಳೆ ರವಿ ಹಾಗೂ ಪ್ರಶಾಂತ್ ಶವಗಳು ಪತ್ತೆಯಾಗದಿದ್ದಾಗ ಕೆರೆಯ ಅರ್ಧ ನೀರನ್ನು ನಂಜದೇವನಪುರ ಕೆರೆ ನಾಲೆಗೆ ಹರಿಸಿದ ಪರಿಣಾಮ ರಾತ್ರಿ 8.30 ಗಂಟೆ ವೇಳೆಗೆ ಶವಗಳು ಪತ್ತೆಯಾದವು. ಶವಗಳನ್ನು ನಗರದ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »