ಅರ್ಥಪೂರ್ಣ ಕನಕ ಜಯಂತಿ ಆಚರಣೆಗೆ ನಿರ್ಧಾರ
ಹಾಸನ

ಅರ್ಥಪೂರ್ಣ ಕನಕ ಜಯಂತಿ ಆಚರಣೆಗೆ ನಿರ್ಧಾರ

November 19, 2018

ಹಾಸನ: ಜಿಲ್ಲಾಡಳಿತದ ವತಿಯಿಂದ ನ.26 ರಂದು ನಗರದಲ್ಲಿ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.ಅಪರ ಜಿಲ್ಲಾಧಿಕಾರಿ ವೈಶಾಲಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿಯವರು ಕನಕದಾಸರ ಚಿಂತನೆಗಳು ಹಾಗೂ ಆದರ್ಶಗಳನ್ನು ಪರಿಣಾಮ ಕಾರಿಯಾಗಿ ತಲುಪಿಸುವ ಅಗತ್ಯವಿದೆ. ಅದಕ್ಕಾಗಿ ಶಿಷ್ಟಾಚಾರದಂತೆ ಜಿಲ್ಲಾಡಳಿತ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು ಸಂಘ ಸಂಸ್ಥೆ ಗಳ ಪ್ರತಿನಿಧಿಗಳು, ಸಮುದಾಯದ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಅಗತ್ಯವಿದೆ ಎಂದರು.

ಜಿಲ್ಲಾಡಳಿತ ವತಿಯಿಂದ ನ.26 ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬೆಳ್ಳಿ ರಥ ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ನಗರದ ಕಲಾಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಷಯ ತಜ್ಞರಿಂದ ವಿಶೇಷ ಉಪನ್ಯಾಸ ಕೂಡ ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾ ಯಿತಿ ಸದಸ್ಯ ಪಟೇಲ್ ಶಿವಣ್ಣ ಮತ್ತು ತಾಲೂಕು ಪಂಚಾಯಿತಿ ಅಧ್ಯಕ್ಷ ಸತೀಶ್ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಿದ್ದೇಗೌಡ ಅವರು ಮಾತನಾಡಿ, ಜಿಲ್ಲಾಡಳಿತ ವತಿಯಿಂದ ಆಯೋ ಜಿಸಲಾಗುವ ಕನಕ ಜಯಂತಿ ಕಾರ್ಯಕ್ರಮಕ್ಕೆ ಸಮುದಾಯದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಪ್ರತಿ ವರ್ಷದಂತೆ ಕನಕ ಜಯಂತಿಯನ್ನು ಇನ್ನಷ್ಟು ಆಕರ್ಷಕ ವಾಗಿ ಮತ್ತು ಅರ್ಥಪೂರ್ಣವಾಗಿ ಆಯೋಜಿಸಬೇಕು. ಎಲ್ಲಾ ಇಲಾಖೆಗಳು ಇದರಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಪಟೇಲ್ ಶಿವಣ್ಣ ಹಾಗೂ ಸತೀಶ್ ಅವರು ಕೋರಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ವಿನೋದ್‍ಚಂದ್ರ ಅವರು ಕಳೆದ ಬಾರಿ ನಡೆದ ಕನಕ ಜಯಂತಿ ಹಾಗೂ ಈ ಬಾರಿಯ ಯೋಜನೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಮುದಾಯದ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »