ಕೊಡಗಿನ ಹಿರಿಯ ದಂಪತಿ ಉತ್ಸಾಹ
ಮೈಸೂರು

ಕೊಡಗಿನ ಹಿರಿಯ ದಂಪತಿ ಉತ್ಸಾಹ

April 19, 2019

ಮೈಸೂರು: ಸುಡು ಬಿಸಿಲನ್ನು ಲೆಕ್ಕಿಸದೆ 86ರ ಪ್ರಾಯದ ಕೊಡಗಿನ ದಂಪತಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದರು.

ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ನಿರ್ಮಲಾ ಶಾಲೆಯ ಮತಗಟ್ಟೆ ಸಂಖ್ಯೆ-84ಕ್ಕೆ ಆಗಮಿಸಿದ ಕೊಡಗು ಮೂಲದ ವಿವಿ ಮೊಹಲ್ಲಾ ನಿವಾಸಿಗಳಾದ ಎಂ.ಎಂ. ನಂಜಪ್ಪ (86) ಹಾಗೂ ಇವರ ಪತ್ನಿ ಚಿಮ್ಮಿ ನಂಜಪ್ಪ (81) ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಾಥ್ ನೀಡಿದರು. ಇದೇ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ನಾವೇ ಮತ ಹಾಕದಿದ್ದರೇ ಮತ್ಯಾರು ಮತ ನೀಡುತ್ತಾರೆ. ನಾವು ವಿದ್ಯಾವಂತ ನಾಗರಿಕರಾಗಿದ್ದು, ದೇಶದ ಭವಿಷ್ಯದ ದೃಷ್ಟಿಯಿಂದ ಮತದಾನ ಮಾಡಿದ್ದೇವೆ ಎಂದರು. ಮಡಿಕೇರಿಯಲ್ಲಿ ನಮ್ಮದೆ ಕಾಫಿ ಎಸ್ಟೆಟ್ ಇದೆ. ಮೂಲತಃ ಕೃಷಿಕರಾಗಿದ್ದೇವೆ. ಮೈಸೂರಿಗೆ ಬಂದು 25 ವರ್ಷಗಳಾಗಿವೆ. ದೇಶಕ್ಕಾಗಿ ಒಳ್ಳೆಯವರನ್ನು ಆಯ್ಕೆ ಮಾಡಲು ಮತದಾನ ಮಾಡಬೇಕು. ಇದರಿಂದ ದೇಶ ಬೆಳೆಯುತ್ತದೆ ಎಂದರು.

ನಮ್ಮದು ಮುಗಿದ ಜೀವನ. ಆದರೆ, ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಹಿತ ದೃಷ್ಟಿಯಿಂದ ಹಕ್ಕು ಚಲಾಯಿಸಿದ್ದೇವೆ. ಮುಂದಿನ ಪೀಳಿಗೆಗೆ ಮತದಾನ ಮಾಡುವುದು ಅವಶ್ಯಕ. ನಮಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಥೈಲ್ಯಾಂಡ್ ಮತ್ತು ಮತ್ತೊಬ್ಬ ಊಟಿಯಲ್ಲಿದ್ದಾನೆ. ಈಗಾಗಲೇ ಅವರು ಮತದಾನ ಮಾಡಿ, ವಾಟ್ಸ್ ಆಪ್ ಮೂಲಕ ತಿಳಿಸಿದ್ದಾರೆ ಎಂದು ಸಂತಸ ಹಂಚಿಕೊಂಡರು.

Translate »